ADVERTISEMENT

‘ಪಿಎಂ–ಕುಸುಮ್‌’ ಅನುಷ್ಠಾನಕ್ಕೆ ಆರಂಭಿಕ ವಿಘ್ನ

ಜಿಲ್ಲೆಯ ಆರು ಸ್ಥಳಗಳಲ್ಲಿ ಫೀಡರ್‌ ಹಂತದ ಸೌರವಿದ್ಯುತ್‌ ಘಟಕ ಸ್ಥಾಪನೆಗೆ ಮುಂದಾದ ‘ಬೆಸ್ಕಾಂ’

ಜಿ.ಬಿ.ನಾಗರಾಜ್
Published 20 ಜೂನ್ 2024, 7:47 IST
Last Updated 20 ಜೂನ್ 2024, 7:47 IST

ದಾವಣಗೆರೆ: ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಸುವ ಉದ್ದೇಶದಿಂದ ‘ಪಿಎಂ –ಕುಸುಮ್‌ (ಸಿ)’ ಯೋಜನೆಯಡಿ ಫೀಡರ್‌ ಹಂತದ ಸೌರ ವಿದ್ಯುತ್‌ ಘಟಕಗಳನ್ನು ಸ್ಥಾಪಿಸುವ ‘ಬೆಸ್ಕಾಂ’ ಪ್ರಯತ್ನಕ್ಕೆ ಆರಂಭಿಕ ವಿಘ್ನ ಎದುರಾಗಿದೆ. ರೈತರ ಪ್ರಬಲ ವಿರೋಧದ ಪರಿಣಾಮವಾಗಿ ಹೊನ್ನಾಳಿ ತಾಲ್ಲೂಕಿನ ಅರಬಗಟ್ಟೆ–ಹರಳಹಳ್ಳಿ ಗ್ರಾಮದ ಘಟಕ ನಿರ್ಮಾಣ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

‘ಪ್ರಧಾನ ಮಂತ್ರಿ ಕಿಸಾನ್‌ ಊರ್ಜಾ ಸುರಕ್ಷಾ ಏವಂ ಉತ್ಥಾನ್‌ ಮಹಾ ಅಭಿಯಾನ’ (ಪಿಎಂ–ಕುಸುಮ್‌) ಯೋಜನೆಯಡಿ ಫೀಡರ್ ಹಂತದ ಸೌರ ವಿದ್ಯುತ್‌ ಘಟಕಗಳನ್ನು ಸ್ಥಾಪಿಸಲು ಜಿಲ್ಲೆಯಲ್ಲಿ 17 ಸ್ಥಳಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ ಆರು ಸ್ಥಳಗಳಲ್ಲಿ ಸೌರವಿದ್ಯುತ್ ಘಟಕ ನಿರ್ಮಾಣ ಮಾಡಲು ‘ಬೆಸ್ಕಾಂ’ ರೂಪುರೇಷ ಸಿದ್ಧಪಡಿಸಿದೆ. ಹರಿಹರ ಉಪವಿಭಾಗ ವ್ಯಾಪ್ತಿಯಲ್ಲಿ ಒಂದು ಹಾಗೂ ದಾವಣಗೆರೆ ಉಪವಿಭಾಗ ವ್ಯಾಪ್ತಿಯಲ್ಲಿ ಐದು ಕಡೆ ಸೌರ ವಿದ್ಯುತ್‌ ಘಟಕ ಸ್ಥಾಪನೆಗೆ ಹಸಿರು ನಿಶಾನೆ ಸಿಕ್ಕಿದೆ. ಏಕಾಕಾಲಕ್ಕೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅರಬಗಟ್ಟೆಯಲ್ಲಿ ಸ್ಥಳ ಗುರುತಿಸಿ ಕಾಮಗಾರಿ ಕೈಗೆತ್ತಿಕೊಳ್ಳಲು ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ‘ಪಿಎಂ–ಕುಸುಮ್‌’ ಯೋಜನೆ ರೂಪಿಸಿದೆ. ಸೌರಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಹಾಗೂ ಕೃಷಿಯನ್ನು ಲಾಭದಾಯಕವಾಗಿಸುವುದು ಯೋಜನೆಯ ಗುರಿ. ಸರ್ಕಾರಿ ಜಮೀನುಗಳಲ್ಲಿ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಿ ಸ್ಥಳೀಯ ಗ್ರಿಡ್‌ಗಳಿಗೆ ಪೂರೈಕೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಐದು ಕಡೆ ಸರ್ಕಾರಿ ಜಮೀನು ಹಾಗೂ ಒಂದು ಸ್ಥಳದಲ್ಲಿ ಖಾಸಗಿ ಜಮೀನಿನಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಸಜ್ಜಾಗಿದೆ.

ADVERTISEMENT

ಹರಿಹರ ಉಪವಿಭಾಗ ವ್ಯಾಪ್ತಿಯ ಅರಬಗಟ್ಟೆ ಹಾಗೂ ಹರಳಹಳ್ಳಿಯಲ್ಲಿ ಸರ್ಕಾರಿ ಭೂಮಿ ಲಭ್ಯವಾಗಿದೆ. ಕಂದಾಯ ಇಲಾಖೆ ವ್ಯಾಪ್ತಿಯಲ್ಲಿದ್ದ ಭೂಮಿ ‘ಬೆಸ್ಕಾಂ’ಗೆ ಹಸ್ತಾಂತರವಾಗಿದೆ. ದಾವಣಗೆರೆ ಉಪವಿಭಾಗ ವ್ಯಾಪ್ತಿಯ ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ (ಕೆಪಿಟಿಸಿಎಲ್‌) ಭೂಮಿಯನ್ನು ಗುರುತಿಸಲಾಗಿದೆ. ತ್ಯಾವಣಿಗೆಯಲ್ಲಿ ಕೃಷಿ ಇಲಾಖೆಯ ಭೂಮಿ ಲಭ್ಯವಿದೆ. ಲಿಂಗದಹಳ್ಳಿ ಮತ್ತು ಕೆರೆಬಿಳಿಚಿ ಗ್ರಾಮದ ಜಮೀನಿಗೆ ಕಂದಾಯ ಮತ್ತು ಅರಣ್ಯ ಇಲಾಖೆಯ ಅನುಮತಿಯ ಅಗತ್ಯವಿದೆ.

ಜಗಳೂರು ತಾಲ್ಲೂಕಿನ ಬಿದರಕೆರೆಯಲ್ಲಿ ರೈತರೊಬ್ಬರು ಫೀಡರ್‌ ಹಂತದ ಸೌರವಿದ್ಯುತ್‌ ಘಟಕ ಸ್ಥಾಪನೆಗೆ ಆಸಕ್ತಿ ತೋರಿದ್ದಾರೆ. ಖಾಸಗಿ ಜಮೀನಿನಲ್ಲಿ ಸೌರವಿದ್ಯುತ್‌ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಭೂಮಿ ಗುರುತಿಸಲಾಗಿದ್ದು, ‘ಬೆಸ್ಕಾಂ’ ನೆರವು ಪಡೆದು ಅನುಷ್ಠಾನಗೊಳಿಸುತ್ತಿದ್ದಾರೆ. ದಾವಣಗೆರೆ ಉಪವಿಭಾಗ ವ್ಯಾಪ್ತಿಯ ಘಟಕಗಳಿಗೆ ಭೂಮಿ ಹಸ್ತಾಂತರ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.

ಸ್ಥಳೀಯ ಗ್ರಿಡ್‌ಗೆ ಪೂರೈಕೆ: ‘ಪಿಎಂ–ಕುಸುಮ್’ ಯೋಜನೆಯಡಿ ಉತ್ಪಾದನೆಯಾಗುವ ವಿದ್ಯುತ್‌ ಸ್ಥಳೀಯ ಗ್ರಿಡ್‌ಗಳಿಗೆ ಪೂರೈಕೆ ಮಾಡಲಾಗುತ್ತದೆ. ಹೊನ್ನಾಳಿ ತಾಲ್ಲೂಕಿನ ಎರಡು ಹಳ್ಳಿಗಳ ಘಟಕದಿಂದ ಉತ್ಪಾನೆಯಾಗುವ 15.3 ಮೆಗಾವ್ಯಾಟ್‌ ವಿದ್ಯುತ್‌ ಅನ್ನು ಕೃಷಿ ಪಂಪ್‌ಸೆಟ್‌ಗಳಿಗೆ ಸರಬರಾಜು ಮಾಡಲು ‘ಬೆಸ್ಕಾಂ’ ಯೋಜನೆ ಸಿದ್ಧಪಡಿಸಿದೆ.

‘ಅರಬಗಟ್ಟೆ ಗ್ರಾಮದಲ್ಲಿ ಲಭ್ಯವಿರುವ ಸರ್ಕಾರಿ ಭೂಮಿಯಲ್ಲಿ 49 ಎಕರೆಯನ್ನು ಮಾತ್ರ ಕಂದಾಯ ಇಲಾಖೆ ‘ಬೆಸ್ಕಾಂ’ಗೆ ಹಸ್ತಾಂತರಿಸಿದೆ. ಘಟಕ ನಿರ್ಮಾಣ ಮತ್ತು 25 ವರ್ಷಗಳ ನಿರ್ಹಣೆಯ ಗುತ್ತಿಗೆಯನ್ನು ‘ರಾಜಶ್ರೀ ಎಲೆಕ್ಟ್ರಿಕಲ್ಸ್‌’ ಪಡೆದಿದೆ. ನಿತ್ಯ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಸೌರ ಘಟಕದಲ್ಲಿ ವಿದ್ಯುತ್ ಉತ್ಪಾನೆಯಾಗುತ್ತದೆ’ ಎಂದು ‘ಬೆಸ್ಕಾಂ’ ಎಂಜಿನಿಯರೊಬ್ಬರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.