ದಾವಣಗೆರೆ: ಸೇವೆ ಕಾಯಂಗೆ ಆಗ್ರಹಿಸಿ ಪ್ರಗತಿ ಕೃಷ್ಣಾ ಬ್ಯಾಂಕ್ ಗುತ್ತಿಗೆ ನೌಕರರು ಜುಲೈ 16ರಿಂದ ಮುಷ್ಕರ ಹಮ್ಮಿಕೊಂಡಿದ್ದಾರೆ.
‘25 ವರ್ಷಗಳಿಂದ ಕಾರ್ಯನಿರ್ಹಿಸುತ್ತಿದ್ದರೂ ಆಡಳಿತ ಮಂಡಳಿಯು ನಮ್ಮ ಸೇವೆಯನ್ನು ಕಾಯಂ ಮಾಡದೇ ಅನ್ಯಾಯವೆಸಗುತ್ತಿದೆ. ಹೀಗಾಗಿ, ಬ್ಯಾಂಕ್ ವಿರುದ್ಧ ಬಳ್ಳಾರಿಯ ಪ್ರಧಾನ ಕಚೇರಿ ಎದುರು ಧರಣಿ ನಡೆಸಲಾಗುವುದು’ ಎಂದು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆಂಜನೇಯ, ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬ್ಯಾಂಕ್‌ನಲ್ಲಿ 700ಕ್ಕೂ ಹೆಚ್ಚು ಮಂದಿ ಗುತ್ತಿಗೆ ಸಿಬ್ಬಂದಿಯೇ ಇದ್ದು, ಕಾಯಂ ನೌಕರರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಬ್ಯಾಂಕ್‌ನ ಪ್ರಗತಿಯಲ್ಲಿ ಗುತ್ತಿಗೆ ನೌಕರರ ಪಾಲು ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಾಗಿ, ಸಿಬ್ಬಂದಿಯ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ಹಾಗೆಯೇ ಸಾಲಕ್ಕಾಗಿ ಬ್ಯಾಂಕ್‌ಗೆ ಬರುವ ರೈತರಿಗೆ ಹಾಗೂ ಗ್ರಾಹಕರಿಗೆ ‘ಕೆನರಾ ಎಚ್‌ಎಸ್‌ಬಿಸಿ’ ವಿಮೆ ಮಾಡಿಸುವಂತೆ ಒತ್ತಡ ಹೇರಲಾಗುತ್ತಿದೆ. ಈ ವಿಮೆ ಪಡೆದವರಿಗೆ ಮಾತ್ರ ಸಾಲ ಸೌಲಭ್ಯ ಸಿಗುತ್ತಿದೆ. ಆದರೆ, ಈ ವಿಮೆಯಿಂದ ಹೆಚ್ಚಿನ ಲಾಭ ಗ್ರಾಹಕರಿಗೆ ಸಿಗುವುದಿಲ್ಲ. ಬದಲಾಗಿ, ಬ್ಯಾಂಕ್ ಅಧಿಕಾರಿಗಳಿಗೆ ಹೆಚ್ಚಿನ ಕಮಿಷನ್ ಸಿಗುತ್ತಿದೆ. ಬ್ಯಾಂಕ್‌ನ ವರ್ಚಸ್ಸಿಗೆ ಧಕ್ಕೆ ತರುವ ಹಾಗೂ ರೈತರನ್ನು ವಂಚಿಸುವ ಇಂಥ ವಿಮಾ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಹಾಗೆಯೇ ಗ್ರಾಮೀಣ ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಯೋಜನೆಗೂ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಬೇಕು. ಹಾಗೆಯೇ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಸಿಬ್ಬಂದಿಗೆ ಎಲ್ಲಾ ಸೌಲಭ್ಯಗಳನ್ನು ವಿತರಿಸಬೇಕು. ನಿವೃತ್ತ ನೌಕರರಿಗೆ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷ ಬಿ.ಎಂ. ರುದ್ರಮುನಿ ಸುದ್ದಿಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.