ದಾವಣಗೆರೆ: ಫೆ.3 ಹಾಗೂ 4ರಂದು ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 38ನೇ ಸಮ್ಮೇಳನಕ್ಕೆ ಬೇಕಾದ ಸಿದ್ಧತೆ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಜೆಜೆಎಂ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ನಡೆದ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಸಮ್ಮೇಳನಕ್ಕೆ ಬರುವವರಿಗೆ ವಸತಿ, ಊಟ, ಸಾರಿಗೆ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿ ಈಗಾಗಲೇ ಕ್ರಮ ತೆಗೆದುಕೊಂಡಿದ್ದಾರೆ. ಸಮ್ಮೇಳನಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ವ್ಯವಸ್ಥೆ ಕೈಗೊಳ್ಳಲಾಗುವುದು. ಎಲ್ಲರೂ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಸಮ್ಮೇಳನವನ್ನು ಎಲ್ಲರ ಮನಸ್ಸಿನಲ್ಲಿ ಉಳಿಯುವ ರೀತಿಯಲ್ಲಿ ಯಶಸ್ವಿಯಾಗಿ ಆಯೋಜನೆ ಮಾಡೋಣ’ ಎಂದು ಹೇಳಿದರು.
‘ಸಮ್ಮೇಳನ ಪೂರ್ವಭಾವಿಯಾಗಿ ಎರಡು ಬಾರಿ ಸಭೆ ಮಾಡಲಾಗಿದೆ. ಈಗಾಗಲೇ ಮೂರು ತಂಡಗಳನ್ನು ರಚಿಸಿದ್ದು, ಒಂದು ತಂಡ ಸರ್ಕಾರದ ವ್ಯಾಪ್ತಿಯ ಅತಿಥಿಗೃಹಗಳಲ್ಲಿ 45ರಿಂದ 50 ಕೊಠಡಿಗಳನ್ನು ಗಣ್ಯರಿಗೆ ವಸತಿ ಸೌಲಭ್ಯ ಕಲ್ಪಿಸಲು ಪಟ್ಟಿ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು.
‘ಕ್ರೀಡಾ ವಸತಿ, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ 200 ಕೊಠಡಿ, ಕೊಂಡಜ್ಜಿಯಲ್ಲಿ 70ರಿಂದ 75, ದಾವಣಗೆರೆ ವಿಶ್ವವಿದ್ಯಾಲಯದಲ್ಲಿ 30 ಸೇರಿ 600 ಕೊಠಡಿಗಳನ್ನು ಕಲ್ಪಿಸಲು ವ್ಯವಸ್ಥೆ ಮಾಡಲಾಗುವುದು. ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು’ ಎಂದು ಹೇಳಿದರು.
‘ಸಮ್ಮೇಳನ ನಡೆಯುವ ಸ್ಥಳದಲ್ಲಿ ಮಳಿಗೆಗಳನ್ನು ಹಾಕಿ, ಸ್ವಸಹಾಯ ಸಂಘಗಳಿಂದ ನರೇಗಾ, ಸ್ವಚ್ಛತಾ ಅಭಿಯಾನ ಇನ್ನಿತರ ವಿಷಯಗಳ ಕುರಿತು ವಿವಿಧ ಇಲಾಖೆಗಳಿಂದ ಜಾಗೃತಿ ಮೂಡಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ತಿಳಿಸಿದರು.
‘ಮೈಸೂರು, ಮಂಗಳೂರು, ಕಲಬುರಗಿ, ವಿಜಯಪುರ ಸೇರಿ ವಿವಿಧ ಜಿಲ್ಲೆಗಳ ಸಮ್ಮೇಳನಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದವು. ಅದೇ ರೀತಿಯಲ್ಲಿ ರಾಜ್ಯದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಮೂರು ದಶಕಗಳ ನಂತರ ನಡೆಯುವ ಸಮ್ಮೇಳನ ಕೂಡ ಸ್ಮರಣೀಯವಾಗಿ ಮಾಡಬೇಕಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ’ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಧೂಡಾ ಆಯುಕ್ತ ಬಸವನಗೌಡ ಕೋಟೂರ, ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ತಹಶೀಲ್ದಾರ್ ಡಾ. ಎಂ.ಬಿ. ಅಶ್ವತ್ಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ವಾರ್ತಾ ಅಧಿಕಾರಿ ಧನಂಜಯ ಇದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಜಿಲ್ಲಾಧ್ಯಕ್ಷ ಮಂಜುನಾಥ್ ಏಕಬೋಟೆ, ಎ.ಫಕೃದ್ದೀನ್, ಕೆ. ಚಂದ್ರಣ್ಣ, ಎಸ್.ಕೆ. ಒಡೆಯರ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ಎಚ್.ಬಿ. ಮಂಜುನಾಥ್, ಬಾ.ಮ. ಬಸವರಾಜಯ್ಯ ಸೇರಿ ಪತ್ರಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.