ADVERTISEMENT

ತಾಕತ್ತಿದ್ದರೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಲಿ

ಶಾಸಕ ಬಸವರಾಜು ವಿ. ಶಿವಗಂಗಾ ವಿರುದ್ಧ ಹರಿಹಾಯ್ದ ನೆಲಹೊನ್ನೆ ಮೋಹನ್

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 16:29 IST
Last Updated 28 ಜೂನ್ 2024, 16:29 IST

ಹೊನ್ನಾಳಿ: ‘ಚನ್ನಗಿರಿ ಶಾಸಕ ಬಸವರಾಜು ವಿ. ಶಿವಗಂಗಾ ತಾಕತ್ತಿದ್ದರೆ ರಾಜೀನಾಮೆ ನೀಡಲಿ. ಅಹಿಂದ ಮತಗಳು ಬೇಡ ಎಂದು ಹೇಳಿಕೆ ನೀಡಿ ಹೊಸದಾಗಿ ಚುನಾವಣೆ ಎದುರಿಸಿ ಗೆದ್ದು ಬರಲಿ. ಆನಂತರ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಮಾತನಾಡಲಿ’ ಎಂದು ಹೊನ್ನಾಳಿ– ನ್ಯಾಮತಿ ಅವಳಿ ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ನೆಲಹೊನ್ನೆ ಮೋಹನ್ ಆಗ್ರಹಿಸಿದರು.

‘ಶಿವಗಂಗಾ ಅವರು ಪದೇ ಪದೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅನಗತ್ಯವಾಗಿ ಹೇಳಿಕೆ ನೀಡುತ್ತಿದ್ದಾರೆ. ಅವರು ಚುನಾವಣೆಯಲ್ಲಿ ಗೆದ್ದಿರುವುದು ಚನ್ನಗಿರಿ ಕ್ಷೇತ್ರದ ಕುರುಬ ಸಮಾಜ ಸೇರಿ ಅಹಿಂದ ಮತಗಳಿಂದ ಎನ್ನುವುದನ್ನು ಮರೆಯಬಾರದು. ರಾಜ್ಯದಲ್ಲಿ 136 ಶಾಸಕರಿದ್ದು, ಐದಾರು ಬಾರಿ ಶಾಸಕರಾಗಿರುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರು ಯಾರೂ ಇಂತಹ ಹೇಳಿಕೆ ಕೊಟ್ಟಿಲ್ಲ. ಕೇವಲ ಒಂದು ಬಾರಿ ಶಾಸಕರಾಗಿರುವ ಇವರು ಹುಚ್ಚುತನದ ಹೇಳಿಕೆ ಕೊಡುವುದು ಸರಿಯಲ್ಲ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಹೈಕಮಾಂಡ್ ಕ್ರಮ ಕೈಗೊಳ್ಳಲಿ: ‘ಹುಚ್ಚುತನದ ಹೇಳಿಕೆಗಳನ್ನು ಕೊಡುವ ಮೂಲಕ ಕುರುಬ ಸಮಾಜಕ್ಕೆ ಹಾಗೂ ಪಕ್ಷಕ್ಕೆ ಮುಜುಗರ ತರುತ್ತಿರುವ ಬಸವರಾಜು ವಿ. ಶಿವಗಂಗಾ ಅವರ ವಿರುದ್ಧ ಪಕ್ಷದ ಹೈಕಮಾಂಡ್ ಕ್ರಮ ಕೈಗೊಳ್ಳಬೇಕು’ ಎಂದು ಹರಳಹಳ್ಳಿ ಬೆನಕಪ್ಪ ಆಗ್ರಹಿಸಿದರು.

ADVERTISEMENT

ರಾಜು ಸರಳಿನಮನೆ, ಅವಳಿ ತಾಲ್ಲೂಕು ಕುರುಬ ಸಮಾಜದ ಉಪಾಧ್ಯಕ್ಷ ತಿಮ್ಮೇನಹಳ್ಳಿ ಜಿ.ಆರ್. ಹನುಮಂತಪ್ಪ, ಹರಳಹಳ್ಳಿ ಬೆನಕಪ್ಪ, ಎಚ್.ಡಿ.ವಿಜೇಂದ್ರಪ್ಪ, ಬಸವನಹಳ್ಳಿ ಬಸವರಾಜ್, ಕುಳಗಟ್ಟೆ ನಾಗರಾಜ್, ಕುಂಬಳೂರು ವಾಗೀಶ್, ಕೆ.ಪುಟ್ಟಪ್ಪ, ಪದಾಧಿಕಾರಿಗಳಾದ ಎಚ್.ಬಿ. ಅಣ್ಣಪ್ಪ, ಮಾದಪ್ಪ, ಹಾಲಸಿದ್ದಪ್ಪ, ಹನುಮಂತಪ್ಪ, ಅಣ್ಣಪ್ಪ ಸಿಂಗಟಗೆರೆ ಸೇರಿ ಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.