ADVERTISEMENT

ದಾವಣಗೆರೆ | ಬಿತ್ತನೆ ಬೀಜ ಬೆಲೆ ಏರಿಕೆ: ಗಾಯದ ಮೇಲೆ ಬರೆ

ಬಿತ್ತನೆ ಬೀಜ ದರ ಶೇ 15ರಿಂದ 25ರಷ್ಟು ಏರಿಕೆ l ರೈತ ಕಂಗಾಲು

ಡಿ.ಕೆ.ಬಸವರಾಜು
Published 31 ಮೇ 2024, 6:27 IST
Last Updated 31 ಮೇ 2024, 6:27 IST
ಲೋಕಿಕೆರೆ ನಾಗರಾಜ್
ಲೋಕಿಕೆರೆ ನಾಗರಾಜ್   

ದಾವಣಗೆರೆ: ಜಿಲ್ಲೆಯಲ್ಲಿ ಮುಂಗಾರುಪೂರ್ವ ಮಳೆ ವಾಡಿಕೆಗಿಂತ ಹೆಚ್ಚು ಸುರಿದಿದೆ. ಭೂಮಿ ಹದ ಮಾಡಿಕೊಂಡ ರೈತರು ಬಿತ್ತನೆಗೆ ಸಜ್ಜಾಗಿದ್ದಾರೆ. ಈಗಲೇ ಬಿತ್ತನೆ ಬೀಜಗಳ ದರ ಜಾಸ್ತಿಯಾಗಿದ್ದು, ಬರದಿಂದ ತತ್ತರಿಸಿದವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ಕಳೆದ ವರ್ಷ ಬರಗಾಲದಿಂದಾಗಿ ಕೃಷಿ ಉತ್ಪನ್ನಗಳ ಇಳುವರಿ ಕುಸಿದಿರುವುದು, ಬಿತ್ತನೆ ಬೀಜದ ಸಂಗ್ರಹ ಕಡಿಮೆಯಾಗಿರುವುದು ಬಿತ್ತನೆ ಬೀಜ ದರ ಹೆಚ್ಚಳಕ್ಕೆ ಕಾರಣ ಎಂದು ಕೃಷಿ ಇಲಾಖೆ ಮೂಲಗಳು ಹೇಳುತ್ತವೆ.

‘ಜಿಲ್ಲೆಯಲ್ಲಿ ಮುಸುಕಿನ ಜೋಳ ಬೆಳೆ ಪ್ರಮುಖವಾಗಿದ್ದು, ಬಿತ್ತನೆಬೀಜದ ಬೆಲೆ ಕಳೆದ ವರ್ಷ 1 ಕೆ.ಜಿ.ಗೆ ₹ 109ರಿಂದ ₹ 255 ದರವಿತ್ತು. ಪ್ರಸಕ್ತ ವರ್ಷ ₹ 115ರಿಂದ ₹ 275ರವರೆಗೆ ಇದೆ. ಉಳಿದ ಬಿತ್ತನೆ ಬೀಜಗಳಿಗೆ ಶೇ 15ರಿಂದ ಶೇ 25ರಷ್ಟು ಬೆಲೆ ಹೆಚ್ಚಳವಾಗಿದೆ. ಜಿಲ್ಲೆಯ ಮಟ್ಟಿಗೆ ಅಷ್ಟೇನು ಪರಿಣಾಮ ಬೀರದು’ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಬರದಿಂದಾಗಿ ಇಳುವರಿ ಕುಂಠಿತಗೊಂಡಿದ್ದು, ಮಾರಾಟಗಾರರು ರೈತರು ಬೆಳೆದ ಬೆಳೆಯನ್ನು ಖರೀದಿ ಮಾಡಿ, ಬಳಿಕ ಮಾರಾಟ ಮಾಡಬೇಕಾಗಿರುವುದು ದರ ಹೆಚ್ಚಳಕ್ಕೆ ಕಾರಣ. ಬೀಜ ನಿಗಮಗಳು ಉತ್ಪಾದಕರಿಂದ ಖರೀದಿಸಬೇಕಾಗಿದ್ದರಿಂದ ದರ ಹೆಚ್ಚಳವಾಗಿದೆ. ಬಿತ್ತನೆ ಬೀಜದ ವೈವಿಧ್ಯತೆಗೆ ತಕ್ಕಂತೆ ದರವಿದೆ’ ಎಂದು ಅವರು ಹೇಳಿದರು.

ಮಾಯಕೊಂಡದ ರೈತ ಸಂಪರ್ಕ ಕೇಂದ್ರದಲ್ಲಿ ತೊಗರಿ ಬೀಜದ ಬೆಲೆ 5 ಕೆ.ಜಿ. ಬ್ಯಾಗ್‌ಗೆ ₹ 525– ₹ 650 ಇದೆ. ಈ ವರ್ಷ ₹ 765ರಿಂದ ₹ 850 ಇದೆ. ಅಲಸಂದೆ ಪ್ರಸಕ್ತ ವರ್ಷ ₹ 550–₹ 675 ದರವಿದೆ.

ಮೆಕ್ಕೆಜೋಳ ಬಿತ್ತನೆಬೀಜ 3.50 ಕೆಜಿಯಿಂದ 5 ಕೆಜಿ ಪ್ಯಾಕೆಟ್‌ನಲ್ಲಿ ಲಭ್ಯವಿದ್ದು, ₹ 100ರಿಂದ ₹ 200ರವರೆಗೂ ಜಾಸ್ತಿಯಾಗಿದೆ. ಭತ್ತದ ಬೀಜ ವಿವಿಧ ತಳಿಗೆ ತಕ್ಕಂತೆ ದರವಿದೆ. 20ರಿಂದ 30ಕೆಜಿಯವರೆಗಿನ ಬ್ಯಾಗ್‌ ದರ ಈ ವರ್ಷ ₹ 120ರಿಂದ ₹ 130ರವರೆಗೂ ಹೆಚ್ಚಾಗಿದೆ. ಮಾರುಕಟ್ಟೆಯಲ್ಲೂ ಏರಿಕೆ ಇದೆ. ಪ್ರತಿ ವರ್ಷವೂ ಬಿತ್ತನೆ ಬೀಜ ಬೆಲೆ ಏರಿಳಿತವಾಗುತ್ತಿದೆ’ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಆಕ್ರೋಶ ವ್ಯಕ್ತಪಡಿಸಿದರು.

ಮಾಯಕೊಂಡ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಗಳ ದರಪಟ್ಟಿ ಹಾಕಿರುವುದು.

ಸಹಾಯಧನ ಹೆಚ್ಚಿಸಲಿ:

‘ಮೆಕ್ಕೆಜೋಳ ಬಿತ್ತನೆಬೀಜ ದರ ಶೇ 20ರಷ್ಟು ಹೆಚ್ಚಳವಾಗಿದ್ದು, ರೈತರಿಗೆ ಸರ್ಕಾರ ₹ 100 ಸಹಾಯಧನ ನೀಡುತ್ತಿದೆ.  ಇದರಲ್ಲೂ ಕಿಕ್‌ ಬ್ಯಾಕ್ ನಡೆಯುತ್ತಿದ್ದು,  ರೈತರಿಗೆ ನೇರವಾಗಿ ತಲುಪುತ್ತಿಲ್ಲ. ಇದರಿಂದ ಹೊರೆಯಾಗಿದೆ’ ಎಂದು  ಬಿತ್ತನೆ ಬೀಜ ಮಾರಾಟಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲೋಕಿಕೆರೆ ನಾಗರಾಜ್ ಹೇಳಿದರು.

ದಾವಣಗೆರೆಯ ಎಪಿಎಂಸಿ ಆವರಣದಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ದಾಸ್ತಾನು ಮಾಡಿರುವ ವಿವಿಧ ಬೀಜಗಳು ಮತ್ತು ಗೊಬ್ಬರ –ಪ್ರಜಾವಾಣಿ ಚಿತ್ರ
ತೇಜಸ್ವಿ ಪಟೇಲ್‌
ಉತ್ಪಾದನಾ ವೆಚ್ಚ ಜಾಸ್ತಿಯಾಗುತ್ತಿದ್ದು ಬೆಲೆಯಲ್ಲಿ ಏರಿಕೆ ಕಂಡರೂ ಕೃಷಿ ಉತ್ಪನ್ನಗಳ ಬೆಲೆಗಳಲ್ಲಿ ಏರಿಳಿತ ಕಾಣುತ್ತಿದೆ. ಬರಗಾಲದಿಂದ ತತ್ತರಿಸಿರುವ ಸಂದರ್ಭದಲ್ಲಿ ಬಿತ್ತನೆಬೀಜದ ಬೆಲೆ ಕಡಿಮೆ ಮಾಡಬೇಕಿತ್ತು.
ತೇಜಸ್ವಿ ಪಟೇಲ್ ರೈತ ಮುಖಂಡ
ಶ್ರೀನಿವಾಸ್‌ ಚಿಂತಾಲ್‌
ಜಿಲ್ಲೆಯಲ್ಲಿ ಮೆಕ್ಕೆಜೋಳ ಪ್ರಮುಖ ಬೆಳೆ. ಬಿತ್ತನೆ ಬೀಜದ ದರ ಏರಿಕೆ ಅಷ್ಟೊಂದು ಪರಿಣಾಮ ಬೀರುವುದಿಲ್ಲ.
ಶ್ರೀನಿವಾಸ್ ಚಿಂತಾಲ್ ಜಂಟಿ ಕೃಷಿ ನಿರ್ದೇಶಕ
ಮೆಕ್ಕೆಜೋಳ ಬಿತ್ತನೆ ಬೀಜದ ದರ ಮುಕ್ತ ಮಾರುಕಟ್ಟೆಯಲ್ಲೂ ಅದೇ ದರ ಇಲ್ಲವೇ ಅದಕ್ಕಿಂತ ಕಡಿಮೆ ದರ ಇದೆ. ಒಂದು ಕೆ.ಜಿ. ಬಿತ್ತನೆ ಬೀಜಕ್ಕೆ ₹ 100 ಸಹಾಯಧ ನೀಡಬೇಕು. ಆಗ ರೈತರಿಗೆ ಹೊರೆ ಕಡಿಮೆಯಾಗಲಿದೆ.
ಲೋಕಿಕೆರೆ ನಾಗರಾಜ್ ಬಿತ್ತನೆ ಬೀಜ ಮಾರಾಟಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
ಖರೀದಿಯಾಗದ ಬಿತ್ತನೆ ಬೀಜ
‘ಮಾಯಕೊಂಡ ರೈತ ಸಂಪರ್ಕ ಕೇಂದ್ರದಲ್ಲಿ 3300 ಕೆ.ಜಿ ಮೆಕ್ಕೆಜೋಳ ಬಿತ್ತನೆ ಬೀಜದ ದಾಸ್ತಾನು ಇದ್ದು ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ಇರುವುದರಿಂದ ರೈತರು ಬಿತ್ತನೆ ಬೀಜ ಖರೀದಿಸಿಲ್ಲ’ ಎಂದು ಮಾಯಕೊಂಡ ರೈತ ಸಂಪರ್ಕ ಕೇಂದ್ರದ ಅಧಿಕಾರಿ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.