ADVERTISEMENT

ದಾವಣಗೆರೆ: ಖಾಸಗಿ ಬಸ್ ನಿಲ್ಲಿಸಲು ಜಾಗವಿಲ್ಲ.. ಮಾಲೀಕರ ಕೂಗು ಕೇಳೋರಿಲ್ಲ...

ಹೈಸ್ಕೂಲ್‌ ಮೈದಾನದ ತಾತ್ಕಾಲಿಕ ನಿಲ್ದಾಣವೇ ನಿಲುಗಡೆಗೆ ಆಸರೆ

ರಾಮಮೂರ್ತಿ ಪಿ.
Published 4 ನವೆಂಬರ್ 2024, 6:37 IST
Last Updated 4 ನವೆಂಬರ್ 2024, 6:37 IST
<div class="paragraphs"><p>ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿನ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳನ್ನು ನಿಲುಗಡೆ ಮಾಡಿರುವುದು </p></div>

ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿನ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳನ್ನು ನಿಲುಗಡೆ ಮಾಡಿರುವುದು

   

–ಪ್ರಜಾವಾಣಿ ಚಿತ್ರ

ದಾವಣಗೆರೆ: ನಗರದ ಹೃದಯ ಭಾಗದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಅಡಿ ₹ 20 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ ನಿರ್ಮಿಸಲಾದ ಶಾಮನೂರು ಶಿವಶಂಕರಪ್ಪ ಖಾಸಗಿ ಬಸ್‌ ನಿಲ್ದಾಣ ಉದ್ಘಾಟನೆಗೊಂಡಿದ್ದರೂ, ಬಸ್‌ ನಿಲುಗಡೆಗೆ ಸಮರ್ಪಕ ಜಾಗ ಇಲ್ಲದ್ದರಿಂದ ಬಸ್‌ ಮಾಲೀಕರ ಚಿಂತೆಗೆ ಕಾರಣವಾಗಿದೆ.

ADVERTISEMENT

ಜಿಲ್ಲೆಯ ವಿವಿಧೆಡೆ ಹಾಗೂ ಬೇರೆ ಜಿಲ್ಲೆಗಳಿಗೆ ಇಲ್ಲಿಂದ 150ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ನಿತ್ಯವೂ ಕಾರ್ಯಾಚರಣೆ ನಡೆಸುತ್ತವೆ. ಆದರೆ, ನೂತನ ಖಾಸಗಿ ಬಸ್‌ ನಿಲ್ದಾಣದಲ್ಲಿ ಏಕಕಾಲಕ್ಕೆ 16 ಬಸ್‌ಗಳ ನಿಲುಗಡೆ ಮಾತ್ರ ಸಾಧ್ಯ. ಇನ್ನುಳಿದ ಬಸ್‌ಗಳನ್ನು ಸದ್ಯ ಹೈಸ್ಕೂಲ್‌ ಮೈದಾನದ ತಾತ್ಕಾಲಿಕ ಬಸ್‌ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಾಗುತ್ತಿದೆ.

ತಾತ್ಕಾಲಿಕ ನಿಲ್ದಾಣ ತೆರವುಗೊಳಿಸಿದರೆ, ಬಸ್‌ಗಳನ್ನು ಎಲ್ಲಿ ನಿಲ್ಲಿಸುವುದು ಎಂಬ ಆತಂಕ ಖಾಸಗಿ ಬಸ್‌ ಮಾಲೀಕರಿಗೆ ಎದುರಾಗಿದೆ. ತಾತ್ಕಾಲಿಕ ನಿಲ್ದಾಣಗಳನ್ನು ಮಹಾನಗರ ಪಾಲಿಕೆ ಅಥವಾ ಸ್ಮಾರ್ಟ್‌ಸಿಟಿಯಿಂದ ತೆರವುಗೊಳಿಸುವುದು ಖಚಿತವಾಗಿದ್ದು, ಆ ಬಳಿಕ ಬಸ್‌ಗಳನ್ನು ರಸ್ತೆ ಬದಿ ಇಲ್ಲವೇ ಖಾಲಿ ಜಾಗಗಳಲ್ಲಿ ನಿಲ್ಲಿಸುವ ಅನಿವಾರ್ಯತೆ ಎದುರಾಗಿದೆ.

ಸಮಯ ನಿಗದಿ: ಹೊಸದಾಗಿ ನಿರ್ಮಾಣವಾಗಿರುವ ಖಾಸಗಿ ಬಸ್ ನಿಲ್ದಾಣದಲ್ಲಿ 15ರಿಂದ 20 ನಿಮಿಷ ಮಾತ್ರವೇ ನಿಲ್ಲಿಸಲು ಪ್ರತೀ ಬಸ್‌ಗೂ ಸಮಯ ನಿಗದಿಗೊಳಿಸಲಾಗಿದೆ. ನಿಗದಿತ ಅಂಕಣದಲ್ಲಿ (ಪ್ಲಾಟ್‌ಫಾರ್ಮ್‌) ನಿಲ್ಲಿಸಲಾದ ಬಸ್‌ ಅಲ್ಲಿಂದ ಹೊರಹೋದ ಬಳಿಕವೇ ಮತ್ತೊಂದು ಬಸ್‌ ಆ ಅಂಕಣಕ್ಕೆ ತೆರಳಲು ಅವಕಾಶ ನೀಡಲಾಗುತ್ತದೆ. ಅಂಕಣದಿಂದ ಬಸ್‌ ಹೊರಹೋಗುವುದು ವಿಳಂಬವಾದರೆ, ಮತ್ತೊಂದು ಬಸ್ ಹೊರಗಡೆಯೇ ಕಾಯಬೇಕಾದ ಅನಿವಾರ್ಯತೆ ಇದೆ. ಜಾಗದ ಕೊರತೆಯೇ ಇದಕ್ಕೆ ಕಾರಣ ಎಂಬುದು ಬಸ್ ಮಾಲೀಕರ ಅಳಲು.

‘ಟ್ರಿಪ್‌ ಮುಗಿಸಿ ಬಂದ ಬಸ್‌ಗಳನ್ನು ಸದ್ಯ ಹೈಸ್ಕೂಲ್ ಫೀಲ್ಡ್‌ನ ಸ್ಟ್ಯಾಂಡ್‌ನಲ್ಲಿ ನಿಲ್ಲಿಸ್ತೀವಿ. ನಮ್ ಟೈಮ್‌ ಬಂದಾಗಷ್ಟೇ ಹೊಸ ಬಸ್‌ ಸ್ಟ್ಯಾಂಡ್‌ಗೆ ಹೋಗ್ತೀವಿ. ಅಲ್ಲಿಗೆ ಮುಂಚೆಯೂ ಹೋಗಂಗಿಲ್ಲ, ಲೇಟ್‌ ಆಗಿಯೂ ಹೋಗಂಗಿಲ್ಲ. ಹೊಸ ಸ್ಟ್ಯಾಂಡ್‌ನಲ್ಲಿ ಬಸ್‌ಗಳನ್ನು ಸೀದಾ ಓಡಿಸಲಷ್ಟೇ ಜಾಗವಿದೆ. ಟರ್ನ್ ಮಾಡಿಕೊಳ್ಳಲು ಅಷ್ಟೊಂದು ಕಂಫರ್ಟ್‌ ಆಗಂಗಿಲ್ಲ’ ಎನ್ನುತ್ತಾರೆ ಖಾಸಗಿ ಬಸ್ ಚಾಲಕ ಸಿದ್ದರಾಮಯ್ಯ.

‘ದೂರದೂರಿನಿಂದ ಸಂಚರಿಸುವ ಕೆಲವು ಬಸ್‌ಗಳು ಬೆಳಿಗ್ಗೆ ನಗರಕ್ಕೆ ಬಂದರೆ, ಮತ್ತೆ ಹೊರಡುವುದು ರಾತ್ರಿಯೇ. ಅಂತಹ ಲಾಂಗ್‌ ಟ್ರಿಪ್‌ ಬಸ್‌ಗಳನ್ನು ಇಡೀ ದಿನ ನಿಲ್ಲಿಸುವುದೇ ಸಮಸ್ಯೆಯಾಗಿದೆ. ಸದ್ಯ ರಾತ್ರಿ ವೇಳೆ ಪಿ.ಬಿ. ರಸ್ತೆಯಲ್ಲೇ ಕೆಲವು ಬಸ್‌ಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗುತ್ತಿದೆ’ ಎಂದು ಖಾಸಗಿ ಬಸ್ ಚಾಲಕ ಅರುಣ್ ಹೇಳಿದರು.

ಮಳಿಗೆಗಳು ಖಾಲಿ ಖಾಲಿ: ನೂತನ ಖಾಸಗಿ ಬಸ್ ನಿಲ್ದಾಣದಲ್ಲಿ ಒಟ್ಟು 84 ಮಳಿಗೆಗಳಿವೆ. ಈ ಎಲ್ಲ ಮಳಿಗೆಗಳನ್ನು ಹರಾಜು ಹಾಕುವುದರಿಂದ ಪ್ರತೀ ತಿಂಗಳು ₹ 5 ಲಕ್ಷಕ್ಕೂ ಅಧಿಕ ಆದಾಯ ದೊರೆಯಲಿದೆ ಎಂದು ಮಹಾನಗರ ಪಾಲಿಕೆ ನಿರೀಕ್ಷಿಸಿತ್ತು. ಆದರೆ, ನೆಲಮಹಡಿಯ ಮಳಿಗೆಗೆಳನ್ನು ಹೊರತುಪಡಿಸಿ ಇನ್ನುಳಿದ ಬಹುತೇಕ ಮಳಿಗೆಗಳು ಖಾಲಿ ಉಳಿದಿವೆ.

ನೆಲಮಹಡಿಯಲ್ಲಿ ಬೇಕರಿ, ಹೋಟೆಲ್‌, ಟೀಅಂಗಡಿ, ಬ್ಯಾಂಗಲ್‌ ಸ್ಟೋರ್ ಸೇರಿದಂತೆ ಇನ್ನಿತರೆ ಕೆಲ ಮಳಿಗೆಗೆಳು ಆರಂಭವಾಗಿವೆ. ಮೊದಲ ಮಹಡಿಯಲ್ಲಿ ಹೋಟೆಲ್‌ ಹಾಗೂ ಸಣ್ಣ ಅಂಗಡಿ ಮಾತ್ರವೇ ಆರಂಭವಾಗಿದ್ದು, ‘ಅಷ್ಟಾಗಿ ವ್ಯಾಪಾರ ನಡೆಯುತ್ತಿಲ್ಲ’ ಎಂದು ವ್ಯಾಪಾರಿಗಳು ಬೇಸರಿಸಿದರು. ಪ್ರಯಾಣಿಕರು ಮೇಲಿನ ಮಹಡಿಗಳತ್ತ ಸುಳಿಯದಿರುವ ಕಾರಣ 3 ಲಿಫ್ಟ್‌ ಹಾಗೂ 2 ಎಸ್ಕಲೇಟರ್‌ಗಳು ಬಳಕೆಯಾಗದೇ, ದೂಳು ಹಿಡಿಯುತ್ತಿವೆ ಎಂದು ಅವರು ಹೇಳಿದರು.

ದಾವಣಗೆರೆಯ ಪಿ.ಬಿ.ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಖಾಸಗಿ ಬಸ್ ನಿಲ್ದಾಣದ ದೃಶ್ಯ ಪ್ರಜಾವಾಣಿ ಚಿತ್ರಗಳು: ಸತೀಶ್ ಬಡಿಗೇರ
ದಾವಣಗೆರೆಯ ಪಿ.ಬಿ.ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿರುವುದು ಪ್ರಜಾವಾಣಿ ಚಿತ್ರಗಳು: ಸತೀಶ್ ಬಡಿಗೇರ

ಕುಡಿಯುವ ನೀರಿಲ್ಲ ಸ್ವಚ್ಛತೆ ಇಲ್ಲ

ಈ ಹೊಸ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಲ್ಲ. ದಾಹವಾದರೆ ಬೇಕರಿ ಹಾಗೂ ಹೋಟೆಲ್‌ಗಳಲ್ಲಿ ನೀರು ಖರೀದಿಸಬೇಕಿದೆ. ‘ಲಿಫ್ಟ್‌ ಎಸ್ಕಲೇಟರ್‌ನಂತಹ ಸೌಲಭ್ಯ ಒದಗಿಸಿದ್ದರೂ ಪ್ರಯೋಜನವಾಗುತ್ತಿಲ್ಲ. ನಿಲ್ದಾಣದಲ್ಲಿ ಎಲ್ಲರಿಗೂ ಅವಶ್ಯವಿರುವ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಬೇಕಿತ್ತು. ಕಾರ್ಮಿಕರು ವಿದ್ಯಾರ್ಥಿಗಳಿಗೆ ನೀರು ಖರೀದಿಸುವುದು ಆರ್ಥಿಕವಾಗಿ ಹೊರೆಯಾಗುತ್ತದೆ. ಆದಷ್ಟು ಬೇಗ ಕುಡಿಯುವ ನೀರು ಒದಗಿಸಬೇಕು’ ಎಂದು ಹರಿಹರದಿಂದ ಬಂದಿದ್ದ ಲೋಕೇಶ್ ಆಗ್ರಹಿಸಿದರು. ‘ಇಲ್ಲಿ ಬೆಳಿಗ್ಗೆ ಮಾತ್ರ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ನಡೆಸುತ್ತಾರೆ. ಆದರೆ ಮಧ್ಯಾಹ್ನದ ಬಳಿಕ ಸ್ವಚ್ಛತೆಗೆ ಸಿಬ್ಬಂದಿಯಿಲ್ಲ. ನಿಲ್ದಾಣದಲ್ಲಿ ಫ್ಲೋರ್‌ ಕ್ಲೀನಿಂಗ್‌ ಮಾಡದ್ದರಿಂದ ಎಲ್ಲೆಂದರಲ್ಲಿ ದೂಳು ಆವರಿಸಿದೆ. ಮೇಲಿನ ಮಹಡಿಗಳಲ್ಲಿ ಜಾಡು ಕಟ್ಟುತ್ತಿದೆ’ ಎಂದು ವ್ಯಾಪಾರಿಗಳು ಹೇಳಿದರು.

‘ಎಲ್ಲೆಂದರಲ್ಲಿ ನಿಲ್ಲಿಸುವುದು ಬಿಟ್ಟು ಬೇರೆ ದಾರಿಯಿಲ್ಲ’

‘ಈಚೆಗೆ ಹೈಸ್ಕೂಲ್‌ ಮೈದಾನದ ಬಸ್ ನಿಲ್ದಾಣವನ್ನು ಪ್ರವೇಶಿಸಲು ಪಾಲಿಕೆಯು ಬಸ್‌ಗಳಿಗೆ ಅನುಮತಿ ನೀಡಿರಲಿಲ್ಲ. ಕ್ಲೀನ್‌ ಮಾಡಬೇಕಿದೆ ಎಂದು ಹೇಳಿ ಗೇಟ್ ಬಂದ್ ಮಾಡಲಾಗಿತ್ತು. ಇದೀಗ ಮತ್ತೆ ಅವಕಾಶ ನೀಡಲಾಗಿದೆ. ಬಸ್‌ ನಿಲುಗಡೆ ಸೌಲಭ್ಯವನ್ನು ಯಾವಾಗ ಬೇಕಾದರೂ ಹಿಂಪಡೆಯುವ ಸಾಧ್ಯತೆ ಇದೆ. ಆ ಬಳಿಕ ಬಸ್‌ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ’ ಎಂದು ದಾವಣಗೆರೆ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಕಾರ್ಯದರ್ಶಿ ಎಂ.ಆರ್. ಸತೀಶ್ ಹೇಳಿದರು. ‘ಸಂಘದ ಕಾರ್ಯ ಚಟುವಟಿಕೆಗೆ ನಿಲ್ದಾಣದಲ್ಲಿ ಒಂದು ಕೊಠಡಿಯನ್ನೂ ಕೇಳಿದ್ದು ಇನ್ನೂ ನೀಡಿಲ್ಲ. ಸ್ವಚ್ಛತೆ ಕಾಪಾಡಲು ಕ್ರಮ ವಹಿಸುವ ಬಗ್ಗೆ ಪಾಲಿಕೆಗೆ ಪತ್ರವನ್ನೂ ಬರೆಯಲಿದ್ದೇವೆ. ನಿಲ್ದಾಣದಲ್ಲಿ ಫ್ಲಾಟ್‌ಫಾರ್ಮ್‌ ಬಗ್ಗೆ ಮಾಹಿತಿ ನೀಡುವ ಬೋರ್ಡ್‌ಗಳೇ ಇರಲಿಲ್ಲ. ದಾವಣಗೆರೆ ಜಿಲ್ಲಾ ಸ್ಟ್ಯಾಂಡ್‌ ಏಜೆಂಟರ ಸಂಘದ ಸಹಕಾರದೊಂದಿಗೆ ₹ 18000 ವ್ಯಯಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡಿದ್ದೇವೆ. ವೈಜ್ಞಾನಿಕವಾಗಿ ಪ್ರಯಾಣಿಕ ಸ್ನೇಹಿ ಫಲಕಗಳನ್ನು ಸಂಘದಿಂದಲೇ ಅಳವಡಿಸಲಾಗುವುದು’ ಎಂದು ತಿಳಿಸಿದರು.

ಸ್ಟ್ಯಾಂಡ್ ಶುಲ್ಕ; ಲಕ್ಷಾಂತರ ಆದಾಯ

ಖಾಸಗಿ ಬಸ್ ನಿಲ್ದಾಣಕ್ಕೆ ಬರುವ ಪ್ರತೀ ಬಸ್‌ನಿಂದಲೂ ಮಹಾನಗರ ಪಾಲಿಕೆಯು ನಿತ್ಯವೂ ಸ್ಟ್ಯಾಂಡ್ ಶುಲ್ಕವಾಗಿ ₹30 ಸಂಗ್ರಹಿಸುತ್ತಿದೆ. ಒಂದು ದಿನ ಬಿಡದೇ ನಿಲ್ಲಿಸಿದರೆ ವರ್ಷಕ್ಕೆ ಬಸ್‌ವೊಂದರ ಮಾಲೀಕರು ಪಾಲಿಕೆಗೆ ₹ 10800 ಪಾವತಿಸುತ್ತಾರೆ. ನಿತ್ಯವೂ 150ಕ್ಕೂ ಹೆಚ್ಚು ಬಸ್‌ಗಳು ನಿಲ್ದಾಣದಿಂದ ಕಾರ್ಯಾಚರಣೆ ನಡೆಸುತ್ತಿರುವುದರಿಂದ ಪಾಲಿಕೆಗೆ ವಾರ್ಷಿಕವಾಗಿ ₹ 16 ಲಕ್ಷಕ್ಕೂ ಹೆಚ್ಚಿನ ಆದಾಯ ಬರುತ್ತಿದೆ. ಸ್ಟ್ಯಾಂಡ್ ಶುಲ್ಕ ಸಂಗ್ರಹಕ್ಕಾಗಿ ಪಾಲಿಕೆಯು ಹರಾಜು ಕರೆದಿತ್ತು. ಟೆಂಡರ್ ಪಡೆದವರು ನಿತ್ಯವೂ ಶುಲ್ಕ ಸಂಗ್ರಹಿಸಿ ಪಾಲಿಕೆಗೆ ವಾರ್ಷಿಕವಾಗಿ ಮೊತ್ತ ಪಾವತಿಸುತ್ತಿದ್ದಾರೆ. ‘ಪ್ರತೀ ವರ್ಷ ಲಕ್ಷಾಂತರ ಆದಾಯ ಪಡೆಯುವ ಪಾಲಿಕೆ ಏಜೆಂಟರು ಚಾಲಕರು ನಿರ್ವಾಹಕರಿಗೆ ವಿಶ್ರಾಂತಿ ಕೊಠಡಿ ಸೇರಿದಂತೆ ಇನ್ನಿತರ ಮೂಲ ಸೌಲಭ್ಯ ಕಲ್ಪಿಸಬೇಕು’ ಎಂದು ಬಸ್ ಮಾಲೀಕರು ಒತ್ತಾಯಿಸಿದರು.

ಖಾಸಗಿ ಬಸ್ ನಿಲ್ದಾಣದಲ್ಲಿ ಸದ್ಯ ಪೌರಕಾರ್ಮಿಕರು ನಿತ್ಯ ಬೆಳಿಗ್ಗೆ ಕಸ ಸಂಗ್ರಹಿಸಿ ವಿಲೇವಾರಿ ಮಾಡುತ್ತಿದ್ದಾರೆ. ನಿಲ್ದಾಣದಲ್ಲಿ ಪೂರ್ಣ ಪ್ರಮಾಣದ ಸ್ವಚ್ಛತೆ ಕಾಪಾಡಲು ಸಿಬ್ಬಂದಿ ನೇಮಕಕ್ಕೆ ಟೆಂಡರ್ ಕರೆಯಲಾಗುವುದು.
-ರೇಣುಕಾ, ಮಹಾನಗರ ಪಾಲಿಕೆ ಆಯುಕ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.