ADVERTISEMENT

ಉತ್ತರ ಕರ್ನಾಟಕದ ಸಮಸ್ಯೆ; ಸಂಸತ್‌ನಲ್ಲಿ ದನಿ ಎತ್ತುವೆ: ಪ್ರಿಯಾಂಕಾ ಜಾರಕಿಹೊಳಿ

ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 15:22 IST
Last Updated 13 ಜೂನ್ 2024, 15:22 IST
ದಾವಣಗೆರೆಯ ಜಿಲ್ಲಾ ನಾಯಕರ ಹಾಸ್ಟೆಲ್‌ಗೆ ಗುರುವಾರ ಭೇಟಿ ನೀಡಿದ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು
ದಾವಣಗೆರೆಯ ಜಿಲ್ಲಾ ನಾಯಕರ ಹಾಸ್ಟೆಲ್‌ಗೆ ಗುರುವಾರ ಭೇಟಿ ನೀಡಿದ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು   

ದಾವಣಗೆರೆ: ‘ಉತ್ತರ ಕರ್ನಾಟಕದಲ್ಲಿ ಕೈಗಾರಿಕೆ ಸೇರಿದಂತೆ ಹಲವು ಸಮಸ್ಯೆಗಳು ಇವೆ. ಇಂತಹ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ದನಿ ಎತ್ತುವೆ’ ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ಇಲ್ಲಿನ ಜಿಲ್ಲಾ ನಾಯಕರ ಹಾಸ್ಟೆಲ್‌ಗೆ ಗುರುವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಮನ ಹರಿಸುತ್ತಾರೆ. ಸಮಸ್ಯೆ ಇವೆ ಅಂದ ಮಾತ್ರಕ್ಕೆ ಪ್ರತ್ಯೇಕ ರಾಜ್ಯದ ಪ್ರಸ್ತಾಪ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ADVERTISEMENT

ಕ್ಷೇತ್ರದಲ್ಲಿ ಕುಡಿವ ನೀರಿನ ಸಮಸ್ಯೆ, ಯುವಕರು ಹಾಗೂ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಬೇಡಿಕೆ ಬಗ್ಗೆ ಸ್ಪಂದಿಸಲಾಗುವುದು ಎಂದರು.

‘ಚಿಕ್ಕೋಡಿ ಕ್ಷೇತ್ರದ ಜನರು ಚಿಕ್ಕ ವಯಸ್ಸಿನ ನನಗೆ ವಹಿಸಿರುವ ಜವಾಬ್ದಾರಿಯನ್ನು ನಿರೀಕ್ಷೆಗೂ ಮೀರಿ ನಿರ್ವಹಿಸುವೆ. ಕ್ಷೇತ್ರದಲ್ಲಿ ನನಗೆ ಟಿಕೆಟ್ ನೀಡುವುದಕ್ಕೆ ಯಾರ, ಯಾವುದೇ ವಿರೋಧ ಇರಲಿಲ್ಲ. ‌ಎಲ್ಲರೂ ಸಭೆ ನಡೆಸಿ ತೀರ್ಮಾನಿಸಿಯೇ ಟಿಕೆಟ್ ನೀಡಿದ್ದರು’ ಎಂದರು.

‘ಅಥಣಿ ಕ್ಷೇತ್ರದಲ್ಲಿ ಕಡಿಮೆ ಲೀಡ್ ಬರುವುದಕ್ಕೆ ಲಕ್ಷ್ಮಣ ಸವದಿ ಕೆಲಸ ಮಾಡಿಲ್ಲ ಎಂದು ನಮ್ಮ ತಂದೆಯವರು ಹೇಳಿದ್ದಾರೆ. ಹಾಗಾಗಿ ಆ ವಿಷಯ ನಮ್ಮ ತಂದೆಯವರಿಗೂ ಲಕ್ಷ್ಮಣ ಸವದಿ ಅವರಿಗೆ ಬಿಟ್ಟ ವಿಚಾರ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ದಾವಣಗೆರೆಯಲ್ಲಿ ನಾಯಕ ಸಮಾಜದವರು ಸನ್ಮಾನ ಮಾಡಿರುವುದು ತುಂಬಾ ಸಂತೋಷದ ವಿಚಾರ. ತಂದೆಯವರ ಮಾರ್ಗದರ್ಶನದಲ್ಲಿ ಎಲ್ಲಾ ಜಿಲ್ಲೆಗಳಿಗೆ ತೆರಳಿ ಸಮಾಜದವರ ಭೇಟಿ ಮಾಡಲಾಗುವುದು’ ಎಂದು ತಿಳಿಸಿದರು.

ರಾಹುಲ್ ಜಾರಕಿಹೊಳಿ, ಜಗಳೂರು ಶಾಸಕ ಬಿ. ದೇವೇಂದ್ರಪ್ಪ, ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್, ನಾಯಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಿ. ವೀರಣ್ಣ, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಮುಖಂಡರಾದ ಸವಿತಾ ಗಣೇಶ್ ಹುಲ್ಮನೆ, ಮೀನಾಕ್ಷಿ ಜಗದೀಶ್, ಎಂ.ಬಿ.‌ ಹಾಲಪ್ಪ, ಹೊದಿಗೆರೆ ರಮೇಶ್, ರಾಘು ದೊಡ್ಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.