ದಾವಣಗೆರೆ: ಬಹಿರಂಗ ಪ್ರಚಾರ ಮಾಡಲು ಕೊನೇ ದಿನವಾದ ಶನಿವಾರ ಶಕ್ತಿ ಪ್ರದರ್ಶನದ ಅಖಾಡವಾಗಿ ಬದಲಾಯಿತು.
ಎಲ್ಲೆಡೆ ಮೈಕ್‌ಗಳ ಅಬ್ಬರ, ನಾಸಿಕ್ ಬ್ಯಾಂಡ್, ಇನ್ನಿತರ ವಾದನಗಳ ನಾದ, ವಾಹನಗಳ ಮೆರವಣಿಗೆ, ಜೈಕಾರಗಳ ಹಿಮ್ಮೇಳ, ಹಾಡುಗಳ ರಂಗು ಕಾಣಿಸಿತು. ಬೆಳಿಗ್ಗಿನಿಂದ ಸಂಜೆಯವರೆಗೆ ಈ ಮೆರವಣಿಗೆಗಳು ಪ್ರತಿ ವಾರ್ಡ್‌ಗಳಲ್ಲಿ ನಡೆದವು.
ಕೆಲವೇ ಕೆಲವು ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದೆಲ್ಲವರೂ ಈ ರೀತಿಯ ಶಕ್ತಿ ಪ್ರದರ್ಶನ ನಡೆಸಿದರು. ಬೆಳಿಗ್ಗಿನಿಂದ ಸಂಜೆಯವರೆಗೆ ಎಲ್ಲ ವಾರ್ಡ್‌ಗಳಲ್ಲಿ ಈ ಅಬ್ಬರ ಕಾಣಿಸಿತು. ಸಂಜೆಯ ಬಳಿಕ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರೂ ಇದಕ್ಕೆ ಸಾಥ್ ನೀಡಿದರು. ಅವರನ್ನು ವಾಹನಗಳಲ್ಲಿ ಕೂರಿಸಿಕೊಂಡು ಮೆರವಣಿಗೆ ನಡೆಸಲಾಯಿತು.
ಅಧಿಕೃತವಾಗಿ ಚುನಾವಣೆಯ 48 ಗಂಟೆಗಳ ಮೊದಲು ಅಂದರೆ ಭಾನುವಾರ ಬೆಳಿಗ್ಗೆ 7 ಗಂಟೆಗೆ ಬಹಿರಂಗ ಪ್ರಚಾರ ನಿಲ್ಲಿಸಬೇಕು. ಆದರೆ ರಾತ್ರಿ 10 ಗಂಟೆಯ ನಂತರ ಪ್ರಚಾರ ನಡೆಸುವಂತಿಲ್ಲ ಎಂಬ ನಿಯಮ ಇರುವುದರಿಂದ ಶನಿವಾರ ರಾತ್ರಿಯೇ ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತಿದೆ. ಮನೆ ಮನೆ ಭೇಟಿ ಸದ್ದುಗದ್ದಲವಿಲ್ಲದೇ ಭಾನುವಾರ ಮತ್ತು ಸೋಮವಾರ ಮುಂದುವರಿಯಲಿದೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಸಿಪಿಐ, ಬಿಎಸ್‌ಪಿ ಮುಂತಾದ ಅಧಿಕೃತ ಪಕ್ಷಗಳನ್ನು ಹೊರತುಪಡಿಸಿ ಉಳಿದವರು ತಾವು ಪಡೆದ ಚಿಹ್ನೆಯ ಬಗ್ಗೆಯೂ ವಿಶೇಷ ಆಸ್ಥೆ ವಹಿಸಿ ಪ್ರಚಾರ ನಡೆಸಿದರು. ಹೆಲ್ಮೆಟ್ ಚಿಹ್ನೆ ಹೊಂದಿರುವವರು ‘ಹೆಲ್ಮೆಟ್ ತಲೆ ರಕ್ಷಣೆಗೆ ಒಳ್ಳೆಯದು, ಆಡಳಿತಕ್ಕೂ ಒಳ್ಳೆಯದು’, ಹೊಲಿಗೆಯಂತ್ರ ಇರುವವರು, ‘ಸೇವೆ ಮೂಲಕ ಜನರ ಮನಸ್ಸನ್ನೂ ಹೊಲಿಯಲು ಹೊಲಿಗೆ ಯಂತ್ರಕ್ಕೆ ಮತ ನೀಡಿ’, ಅಟೊ ರಿಕ್ಷಾ ಚಿಹ್ನೆಯವರು ‘ಅಭಿವೃದ್ಧಿಯತ್ತ ಒಯ್ಯಲು ಆಟೊ ರಿಕ್ಷಾ ಚಿಹ್ನೆ...’ ಎಂದೆಲ್ಲ ಘೋಷವಾಕ್ಯಗಳ ಜತೆಗೆ ಪ್ರಚಾರ ಮಾಡತೊಡಗಿದ್ದರು.
ವಜ್ರ, ಟ್ರ್ಯಾಕ್ಟರ್ ಓಡಿಸುವ ರೈತ, ಉಳುವ ರೈತ, ಟ್ರಕ್, ಬ್ಯಾಟ್, ಹಾಕಿ–ಚೆಂಡು, ಆನೆ, ತೆಂಗಿನ ತೋಟ, ಮಡಿಕೆ, ದೂರದರ್ಶನ, ದೂರವಾಣಿ, ಬ್ಯಾಟರಿ ಚಾರ್ಜ್, ಕ್ಯಾಮೆರಾ, ಕರಣೆ, ಪ್ರೆಷರ್ ಕುಕ್ಕರ್, ದ್ರಾಕ್ಷಿ, ಹಣ್ಣುಗಳ ಬ್ಯಾಸ್ಕೆಟ್‌ಮ ಬಳೆಗಳು, ಇಸ್ತ್ರಿ ಪೆಟ್ಟಿಗೆ, ಗಾಜಿನ ಲೋಟ ಹೀಗೆ ನಾನಾ ಚಿಹ್ನೆಗಳನ್ನು ಹೊಂದಿದವರು ಅವುಗಳನ್ನು ಜನಪ್ರಿಯಗೊಳಿಸಲು ಆದ್ಯತೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.