ADVERTISEMENT

ದಾವಣಗೆರೆ: ಘನತ್ಯಾಜ್ಯ ಘಟಕ ನಿರ್ಮಾಣ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 16:13 IST
Last Updated 25 ನವೆಂಬರ್ 2024, 16:13 IST
ದಾವಣಗೆರೆ ತಾಲ್ಲೂಕಿನ ಹೊಸಳ್ಳಿ ಗ್ರಾಮಸ್ಥರು ರಾಜ್ಯ ರೈತ ಸಂಘ ಹಸಿರು ಸೇನೆ ಹುಚ್ಚವ್ವಹಳ್ಳಿ ಮಂಜುನಾಥ್ ಬಣದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು ಪ್ರಜಾವಾಣಿ ಚಿತ್ರ
ದಾವಣಗೆರೆ ತಾಲ್ಲೂಕಿನ ಹೊಸಳ್ಳಿ ಗ್ರಾಮಸ್ಥರು ರಾಜ್ಯ ರೈತ ಸಂಘ ಹಸಿರು ಸೇನೆ ಹುಚ್ಚವ್ವಹಳ್ಳಿ ಮಂಜುನಾಥ್ ಬಣದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ತಾಲ್ಲೂಕಿನ ಹೊಸಳ್ಳಿ ಗ್ರಾಮದ ಗೋಮಾಳದಲ್ಲಿ ಮಹಾನಗರ ಪಾಲಿಕೆಯಿಂದ ನಿರ್ಮಿಸಲು ಉದ್ದೇಶಿಸಿರುವ ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಜಿಲ್ಲಾಡಳಿತ ಮಂಜೂರು ಮಾಡಿರುವ 3 ಎಕರೆ ಜಮೀನನ್ನು ಕೂಡಲೇ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ಹುಚ್ಚವ್ವಹಳ್ಳಿ ಮಂಜುನಾಥ್ ಬಣದ ನೇತೃತ್ವದಲ್ಲಿ ಹೊಸಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

‘ಪಾಲಿಕೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯಿಂದ ಹೊಸಳ್ಳಿ ಬಳಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಉದ್ದೇಶಿಸಿರುವುದು ಅವೈಜ್ಞಾನಿಕವಾಗಿದೆ. ಈ ಜಾಗವು ದಾವಣಗೆರೆಯಿಂದ 23 ಕಿ.ಮೀ. ದೂರದಲ್ಲಿದೆ. ವಾಸ್ತವದಲ್ಲಿ ಪಾಲಿಕೆ ವ್ಯಾಪ್ತಿ ಕೇವಲ 10 ಕಿ.ಮೀ.ಗೆ ಸೀಮಿತವಾಗಿದೆ. ದೂರದ ಹೊಸಳ್ಳಿಯಲ್ಲಿ ಘಟಕ ನಿರ್ಮಿಸಲು ಹೊರಟಿರುವುದು ಕಾನೂನು ಉಲ್ಲಂಘನೆಯಾಗಿದೆ’ ಎಂದು ಗ್ರಾಮಸ್ಥರು ದೂರಿದರು. 

‘ಮಂಜೂರು ಮಾಡಿದ ಭೂಮಿಯಲ್ಲಿ ಹಲವಾರು ರೈತರು ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಭೂ ಹಕ್ಕಿಗಾಗಿ ಈಗಾಗಲೇ ಫಾರಂ ನಂಬರ್ 57ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಹಲವಾರು ಹಳ್ಳಿಗಳಲ್ಲಿ ಭೂ ರಹಿತ ಕುಟುಂಬಗಳು ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿವೆ. ಮುನಿಸಿಪಲ್ ಕಾಯ್ದೆ 1976ರ ಪ್ರಕಾರ ಈ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಅವಕಾಶವಿಲ್ಲ. ಇಂತಹ ಸರ್ಕಾರಿ ಜಮೀನಿನಲ್ಲಿ ಘನತ್ಯಾಜ್ಯ ಸಂಸ್ಕರಣ ಘಟಕ ನಿರ್ಮಿಸಲು ಅವಕಾಶ ಇದೆ. ಪಾಲಿಕೆ ವ್ಯಾಪ್ತಿಯನ್ನು ಮೀರಿದ ಜಾಗದಲ್ಲಿ ಘಟಕ ನಿರ್ಮಿಸಬಾರದು’ ಎಂದರು.

ADVERTISEMENT

‘ಸರ್ಕಾರ ಈಗಾಗಲೇ ಜಿಲ್ಲೆಯಲ್ಲಿ ಕ್ರಷರ್ ಬಫರ್ ಜೋನ್ ಮಾಡಿದೆ. ಇಲ್ಲಿ ಜಲ್ಲಿಕಲ್ಲು, ಎಂ ಸ್ಯಾಂಡ್ ಸೇರಿದಂತೆ ಇತರೆ ಕಟ್ಟಡ ನಿರ್ಮಾಣ ವಸ್ತುಗಳನ್ನು ಉತ್ಪಾದಿಸಲಾಗುತ್ತಿದೆ. ಈ ಬಫರ್ ಜೋನ್‌ನಲ್ಲಿ ಕಟ್ಟಡ ಘನ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಅವಕಾಶ ನೀಡಿದರೆ ಯಾರಿಗೂ ತೊಂದರೆ ಇಲ್ಲ. ತಾಲ್ಲೂಕಿನ ಹೆಬ್ಬಾಳು ಗ್ರಾಮದ ಹತ್ತಿರ ಸಾಕಷ್ಟು ಸರ್ಕಾರಿ ಜಮೀನು ಇದೆ. ಇದೆಲ್ಲವನ್ನೂ ಪರಿಗಣಿಸಿ ಹೊಸಳ್ಳಿ ಗ್ರಾಮದ ಬಳಿ ಘನತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಡಾ.ಗಂಗಾಧರ ಸ್ವಾಮಿ ಹಾಗೂ ಪಾಲಿಕೆ ಆಯುಕ್ತೆ ರೇಣುಕಾ‌ ಅವರಿಗೆ ಮನವಿ ಸಲ್ಲಿಸಲಾಯಿತು.

‘ಸ್ಥಳ ಪರಿಶೀಲನೆ ನಡೆಸಿ ಹೊಸಳ್ಳಿ ಗ್ರಾಮದ ಸದರಿ ಜಮೀನು ಜನವಸತಿ‌ ಪ್ರದೇಶವಾಗಿದ್ದರೆ, ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು’  ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ರಾಜ್ಯ ರೈತ ಸಂಘ ಹಸಿರುಸೇನೆ ರಾಜ್ಯ ಘಟಕದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಹೊಸಳ್ಳಿ ಮೋಹನ್ ನಾಯ್ಕ, ಚಿನ್ನ ಸಮುದ್ರ ಸುರೇಶ್, ಭೀಮಣ್ಣ, ಮ್ಯಾಸರಹಳ್ಳಿ ಪ್ರಭು, ಗುಮ್ಮನೂರು ಲೋಕೇಶ್, ಕುಕ್ಕವಾಡ ಶಿವಕುಮಾರ್, ಪಾಳ್ಯ ರುದ್ರನಗೌಡ, ಕಡರನಾಯಕನಹಳ್ಳಿ ಪ್ರಭು, ಎಂ.ಬಿ.ಪಾಟೀಲ್, ಆಲೂರು ಪರಶುರಾಮ್, ಜಗಧೀಶ್ ನಾಯ್ಕ್, ರಾಮಚಂದ್ರಪ್ಪ, ಸುಜಾತಾ ಭೀಮಾನಾಯ್ಕ, ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.