ADVERTISEMENT

ದಾವಣಗೆರೆ | ಪಿಯುಸಿ ಪರೀಕ್ಷೆ: 596 ವಿದ್ಯಾರ್ಥಿಗಳು ಗೈರು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 7:15 IST
Last Updated 2 ಮಾರ್ಚ್ 2024, 7:15 IST
ದಾವಣಗೆರೆಯ ಮೋತಿ ವೀರಪ್ಪ ಕಾಲೇಜಿನಲ್ಲಿ ನೋಂದಣಿ ಸಂಖ್ಯೆ ಹುಡುಕಲು ಹರಸಾಹಸಪಡುತ್ತಿರುವ ವಿದ್ಯಾರ್ಥಿಗಳು.
ದಾವಣಗೆರೆಯ ಮೋತಿ ವೀರಪ್ಪ ಕಾಲೇಜಿನಲ್ಲಿ ನೋಂದಣಿ ಸಂಖ್ಯೆ ಹುಡುಕಲು ಹರಸಾಹಸಪಡುತ್ತಿರುವ ವಿದ್ಯಾರ್ಥಿಗಳು.   

ದಾವಣಗೆರೆ: ಕೆಲವೊಂದು ಗೊಂದಲಗಳನ್ನು ಹೊರತುಪಡಿಸಿದರೆ ಜಿಲ್ಲೆಯ 33 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಮೊದಲ ದಿವಸ ಸುಗಮವಾಗಿ ನೆರವೇರಿತು.

ನಗರದ ಮೋತಿ ವೀರಪ್ಪ ಕಾಲೇಜಿನಲ್ಲಿ ನೋಂದಣಿ ಸಂಖ್ಯೆ ಇರುವ ಒಂದೇ ಬೋರ್ಡ್ ಹಾಕಿದ್ದು, ವಿದ್ಯಾರ್ಥಿಗಳು ಒಮ್ಮೆಲೆ ಧಾವಿಸಿದ್ದರಿಂದ ಕೆಲಕಾಲ ಗೊಂದಲ ಉಂಟಾಯಿತು. ಆ ಬಳಿಕ ಮತ್ತೊಂದು ಬೋರ್ಡ್ ಹಾಕಿದ ನಂತರ ಗೊಂದಲ ನಿವಾರಣೆಯಾಯಿತು.

ವಿದ್ಯಾರ್ಥಿಗಳು ಬೆಳಿಗ್ಗೆ 9ಕ್ಕೆ ಕಾಲೇಜಿಗೆ ಧಾವಿಸಿದ್ದರು. ನೋಂದಣಿ ಸಂಖ್ಯೆ ಇರುವ ಕೊಠಡಿಯತ್ತ ಧಾವಿಸಿದರು. ಮಹಿಳಾ ಹಾಗೂ ಪುರುಷ ಕಾನ್‌ಸ್ಟೆಬಲ್‌ಗಳು ಪ್ರತ್ಯೇಕವಾಗಿ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ತಪಾಸಣೆಗೆ ಒಳಪಡಿಸಿದರು. ಪೋಷಕರು ತಮ್ಮ ಮಕ್ಕಳನ್ನು ಕೇಂದ್ರಕ್ಕೆ ಕಳುಹಿಸಿ ಹೊರ ನಡೆದರು. ನಗರದ ಮೋತಿ ವೀರಪ್ಪ ಕಾಲೇಜಿನಲ್ಲಿ ಧ್ವನಿವರ್ಧಕದ ಮೂಲಕ ಕೊಠಡಿಗಳ ಬಗ್ಗೆ ಮಾಹಿತಿ ನೀಡಿದರು.

ADVERTISEMENT

ಮೊದಲ ಪತ್ರಿಕೆ ಕನ್ನಡ ಭಾಷಾ ಪತ್ರಿಕೆಯಲ್ಲಿ ನೋಂದಣಿ ಮಾಡಿಸಿದ್ದ 17,473 ವಿದ್ಯಾರ್ಥಿಗಳಲ್ಲಿ 16,877 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 596 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

‘ಮೋತಿ ವೀರಪ್ಪ ಕಾಲೇಜಿನಲ್ಲಿ ಗೊಂದಲ ಸರಿಪಡಿಸಲಾಯಿತು. 4 ಬೋರ್ಡ್‌ಗಳಲ್ಲಿ ನೋಂದಣಿ ಸಂಖ್ಯೆಗಳನ್ನು ನಮೂದಿಸಬೇಕು ಎಂದು ಎಲ್ಲಾ ಕಾಲೇಜುಗಳಿಗೂ ಸೂಚನೆ ನೀಡಲಾಗಿದೆ. ಮೊದಲ ದಿವಸ ಪರೀಕ್ಷೆ ಶಾಂತಿಯುತವಾಗಿ ನೆರವೇರಿತು’ ಎಂದು ಶಾಲಾ ಮತ್ತು ಶಿಕ್ಷಣ ಇಲಾಖೆಯ (ಪದವಿಪೂರ್ವ) ಉಪನಿರ್ದೇಶಕ ಎಸ್.ಜಿ. ಕರಿಸಿದ್ದಪ್ಪ ತಿಳಿಸಿದರು.

ಚನ್ನಗಿರಿ: 5 ಕೇಂದ್ರಗಳಲ್ಲಿ ಸುಸೂತ್ರ:

ಚನ್ನಗಿರಿ: ಪಟ್ಟಣ ಸೇರಿ ತಾಲ್ಲೂಕಿನ 5 ಪರೀಕ್ಷಾ ಕೇಂದ್ರಗಳಲ್ಲಿ ಪ್ರಥಮ ದಿನವಾದ ಶುಕ್ರವಾರ ದ್ವಿತೀಯ ಪಿಯುಸಿ ಕನ್ನಡ ಭಾಷಾ ಪರೀಕ್ಷೆ ಸುಸೂತ್ರವಾಗಿ ನಡೆದವು.

ಪಟ್ಟಣದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು, ಮಣ್ಣಮ್ಮ ಸ್ವತಂತ್ರ ಪದವಿ ಪೂರ್ವ ಕಾಲೇಜು ಸೇರಿ 2 ಪರೀಕ್ಷಾ ಕೇಂದ್ರಗಳು ಹಾಗೂ ತಾಲ್ಲೂಕಿನ ಬಸವಾಪಟ್ಟಣ, ಸಂತೇಬೆನ್ನೂರು ಮತ್ತು ತ್ಯಾವಣಿಗೆ ಪರೀಕ್ಷಾ ಕೇಂದ್ರಗಳು ಸೇರಿ 5 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.

‘ಮಣ್ಣಮ್ಮ ಪರೀಕ್ಷಾ ಕೇಂದ್ರದಲ್ಲಿ 356 ವಿದ್ಯಾರ್ಥಿಗಳು ನೋಂದಣಿ  ಮಾಡಿಕೊಂಡಿದ್ದು, 19 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 512 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಒಟ್ಟು 23 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು. ಪರೀಕ್ಷೆಯ ಅಂಗವಾಗಿ ಬಿಗಿ ಬಂದೋಬಸ್ತ್ ಮಾಡಲಾಗಿದೆ’ ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಿದ್ದೇಶ್ ತಿಳಿಸಿದರು.

ಹೊನ್ನಾಳಿ: 18 ವಿದ್ಯಾರ್ಥಿಗಳು ಗೈರು

ಹೊನ್ನಾಳಿ: ‘ತಾಲ್ಲೂಕಿನಲ್ಲಿ ನೋಂದಣಿ ಮಾಡಿಸಿದ್ದ 963 ವಿದ್ಯಾರ್ಥಿಗಳ ಪೈಕಿ 18 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, 945 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ’ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಚಂದ್ರಪ್ಪ ಹೇಳಿದ್ದಾರೆ.

‘ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಎಸ್‍ಸಿಆರ್‌ಜೆಸಿ, ವಿಜಯ ಕಾಲೇಜು, ಅರಬಗಟ್ಟೆ, ಸಾಸ್ವೇಹಳ್ಳಿ ಹಾಗೂ ಚೀಲೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 598 ವಿದ್ಯಾರ್ಥಿಗಳ ಪೈಕಿ 10 ವಿದ್ಯಾರ್ಥಿಗಳು ಗೈರಾಗಿದ್ದರು’ ಎಂದು ಮಾಹಿತಿ ನೀಡಿದರು.

ಹಿರೇಕಲ್ಮಠದ ಕಾಲೇಜು, ಹೊನ್ನಾಳಿಯ ಸರ್ಕಾರಿ ಪದವಿಪೂರ್ವ ಕಾಲೇಜು, ಎಂ.ಎಸ್. ಪದವಿಪೂರ್ವ ಕಾಲೇಜು, ಶ್ರೀ ಸಾಯಿ ಗುರುಕುಲ ಪಿಯು ಕಾಲೇಜು ಹಾಗೂ ಸಾಸ್ವೇಹಳ್ಳಿಯ ಎಡಿವಿಎಸ್ ಕಾಲೇಜಿನ ವಿದ್ಯಾರ್ಥಿಗಳು ಸೇರಿ ಒಟ್ಟು 365 ಜನ ಪರೀಕ್ಷೆಗೆ ತಮ್ಮ ಹೆಸರು ನೋಂದಾಯಿಸಿದ್ದರು, ಅವರ ಪೈಕಿ 18 ವಿದ್ಯಾರ್ಥಿಗಳು ಗೈರಾಗಿದ್ದರು. ಉಳಿದ 347 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು ಎಂದು ಅವರು ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ಅಗತ್ಯವಾದ ಶೌಚಾಲಯದ ಸಮಸ್ಯೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಂಡುಬಂದಿತ್ತು, ಪರೀಕ್ಷೆಗೆ ಯಾವುದೇ ತೊಂದರೆಯಾಗದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ದಾವಣಗೆರೆಯ ಮೋತಿ ವೀರಪ್ಪ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೊಠಡಿಗಳನ್ನು ಹುಡುಕಲು ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.