ದಾವಣಗೆರೆ: ಅವರದ್ದು 12X30 ಅಳತೆಯ ಮನೆ. ಅಲ್ಲಿ ಪ್ರತ್ಯೇಕ ಕೊಠಡಿಗಳಿಲ್ಲ. ನಾಲ್ವರು ಅಣ್ಣತಮ್ಮಂದಿರೂ, ಅವರ ಪತ್ನಿಯರೂ, ಐವರು ಮಕ್ಕಳು ಮತ್ತು ತಾಯಿ ಸೇರಿ ಒಟ್ಟು 14 ಜನ ಅಲ್ಲಿ ವಾಸವಿದ್ದಾರೆ. ನಾಲ್ವರು ಅಣ್ಣತಮ್ಮಂದಿರಲ್ಲಿ ಒಬ್ಬರಾದ ವೆಂಕಟೇಶ ಗುಜರಿ ವ್ಯಾಪಾರಿ.
ನಗರದ ಬಸವರಾಜ ಪೇಟೆಯ ಹುಬ್ಬಳ್ಳಿ ಚೌಡಪ್ಪ ಗಲ್ಲಿಯ ನಿವಾಸಿಯಾಗಿರುವ ಅವರು, ನಿತ್ಯ ವಿವಿಧ ಗ್ರಾಮಗಳಿಗೆ ಸೈಕಲ್‌ನಲ್ಲಿ ಹೋಗಿ ಹಳೆ ಕಬ್ಬಿಣ, ಹಳೆ ಪ್ಲಾಸ್ಟಿಕ್ ಸಾಮಾನು ಖರೀದಿಸಿ ತಂದು ಗುಜರಿ ಮಾರುಕಟ್ಟೆಯಲ್ಲಿ ಮಾರಿ ಜೀವನ ನಡೆಸುತ್ತಾರೆ. ಮಾಸಿಕ ₹ 15,000 ಆದಾಯ ಬಂದರೆ ಹೆಚ್ಚು. ಬಡತನ ಅವರಿಗೆ ಹೊಸದಲ್ಲ. ಆ ಬಡ ಕುಟುಂಬದಲ್ಲಿ ಈಗ ಸಂಭ್ರಮ ಮನೆಮಾಡಿದೆ. ಅದಕ್ಕೆ ಕಾರಣ ವೆಂಕಟೇಶ ಅವರ ಕಿರಿಯ ಪುತ್ರ ವಿ.ಆದಿತ್ಯ.
ಈತ ನಗರದ ಸಿದ್ದವೀರಪ್ಪ ಬಡಾವಣೆಯಲ್ಲಿರುವ ಭದ್ರಾ ಪಿಯು ವಿಜ್ಞಾನ ಕಾಲೇಜಿನ ವಿದ್ಯಾರ್ಥಿ. ದ್ವಿತೀಯ ಪಿಯು ಪರೀಕ್ಷೆಯಲ್ಲಿ ಆದಿತ್ಯ ಬರೋಬ್ಬರಿ ಶೇ 98 ಅಂಕ ಗಳಿಸಿರುವುದು ಮನೆಯವರ ಹಾಗೂ ಕಾಲೇಜಿನವರ ಸಂತಸವನ್ನು ಹೆಚ್ಚಿಸಿದೆ.
ವಿನಾಯಕ ಕಾನ್ವೆಂಟ್‌ನಲ್ಲಿ ಎಸ್ಸೆಸ್ಸೆಲ್ಸಿ ಓದಿದ್ದ ಆದಿತ್ಯ, ಆಗಲೂ ಶೇ 96.96 ಅಂಕ ಗಳಿಸಿದ್ದ. ಇದೀಗ ಪಿಯುಸಿಯಲ್ಲಿ 600ಕ್ಕೆ 588 ಅಂಕ ಗಳಿಸಿ, ಆ ಸಾಧನೆಯ ಗರಿಮೆಯನ್ನು ಹೆಚ್ಚಿಸಿಕೊಂಡಿದ್ದಾನೆ.
ಬಡತನ ಈತನ ಓದಿಗೆ ಕಿಂಚಿತ್ ಅಡ್ಡಿಯಾಗಲಿಲ್ಲ. ತಂದೆ ವೆಂಕಟೇಶ 3ನೇ ತರಗತಿವರೆಗೆ, ತಾಯಿ ಮಂಜುಳಾ 10ನೇ ತರಗತಿವರೆಗೆ ಅಭ್ಯಾಸ ಮಾಡಿದ್ದಾರೆ. ಆದಿತ್ಯನ ಅಣ್ಣ ಕಿರಣಕುಮಾರ್ ಇದೇ ಕಾಲೇಜಿನಲ್ಲಿ ಪಿಯುಸಿ ಓದಿ, ಇದೀಗ ನಗರದ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ 6ನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದಾನೆ. ಈತನೇ ತಮ್ಮನ ಓದಿಗೆ ಸ್ಫೂರ್ತಿ.
ಶಾಲೆ– ಕಾಲೇಜುಗಳಲ್ಲಿ ನಡೆಯುವ ಪಾಲಕರ ಸಭೆಯಲ್ಲಿ ಮಕ್ಕಳ ವಿದ್ಯಾಭ್ಯಾಸದ ಕುರಿತು ಮಾಹಿತಿ ಸಂಗ್ರಹಿಸುವಾಗ, ‘ಮಕ್ಕಳು ಓದುವುದೇ ಇಲ್ಲ’ ಎಂಬ ದೂರುಗಳು ಸಾಮಾನ್ಯ. ಆದರೆ, ಆದಿತ್ಯನ ಪಾಲಕರದ್ದು ಇದಕ್ಕೆ ತದ್ವಿರುದ್ಧವಾದ ದೂರು.
‘ನಮ್ಮ ಮಗ ರಾತ್ರಿ ಮಲಗುವುದೇ ಇಲ್ಲ. ಬರೀ ಓದುತ್ತಾನೆ. ಬೆಳಗಿನಜಾವ ಮೂರು ಗಂಟೆ ನಿದ್ರಿಸಿದರೆ ಹೆಚ್ಚು. ಅಷ್ಟು ಓದುವುದು ಬೇಡ ಎಂದು ತಿಳಿಹೇಳಿ’ ಎಂದೇ ಉಪನ್ಯಾಸಕರ ಬಳಿ ಅಹವಾಲು ತೋಡಿಕೊಳ್ಳುತ್ತಿದ್ದರು. ಎಷ್ಟೇ ಹೇಳಿದರೂ, ಆದಿತ್ಯ ಮಾತ್ರ ಸತತ ಅಧ್ಯಯನವನ್ನು ಬಿಡಲಿಲ್ಲ. ಈ ಸಾಧನೆ ಆತನ ಶ್ರಮದ ಪ್ರತಿಫಲ.
‘ಎಂಜಿನಿಯರಿಂಗ್‌ಗೆ ಅಗತ್ಯವಿರುವ ಸಿಇಟಿಗೆ ಅಣಿಯಾಗುತ್ತಿದ್ದೇನೆ. ನೀಟ್ ಬರೆಯಲು ಸಿದ್ಧತೆ ನಡೆಸಿದ್ದೇನೆ. ಆದರೆ, ನನಗೂ ಅಣ್ಣನಂತೆ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಎಂಜಿನಿಯರ್ ಆಗಬೇಕೆಂಬ ಹಂಬಲವಿದೆ’ ಎಂದು ಆದಿತ್ಯ ‘ಪ್ರಜಾವಾಣಿ’ ಎದುರು ಭವಿಷ್ಯದ ಬಗ್ಗೆ ವಿವರಿಸಿದ.
‘ನಮ್ಮಲ್ಲಿ ವಾರ್ಷಿಕ ಗರಿಷ್ಠ ₹ 35,000 ಶುಲ್ಕವಿದೆ. ಕೆಲವು ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಿಯಾಯಿತಿ ನೀಡುತ್ತೇವೆ. ಪ್ರಥಮ ಪಿಯುಸಿಯಲ್ಲಿ ಶೇ 99 ಅಂಕ ಗಳಿಸಿದ್ದ ಆದಿತ್ಯನಿಗೆ ದ್ವಿತೀಯ ಪಿಯುಸಿಯಲ್ಲಿ ಸಂಪೂರ್ಣ ಶುಲ್ಕ ವಿನಾಯಿತಿ ನೀಡಿದ್ದೇವೆ. ಆತನ ಮುಂದಿನ ಶಿಕ್ಷಣದ ವೆಚ್ಚವನ್ನೂ ಭರಿಸಲು ನಾವು ಸಿದ್ಧ. ವಾಣಿಜ್ಯ ವಿಭಾಗವನ್ನೂ ಹೊಂದಿರುವ ನಮ್ಮ ಕಾಲೇಜಿನ ಪ್ರವೇಶ ಪ್ರಕ್ರಿಯೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಆದ್ಯತೆ ನೀಡುವುದಿಲ್ಲ. ವಿದ್ಯಾರ್ಥಿಗಳಳು ಹೆಚ್ಚು ಅಂಕ ಗಳಿಸಬೇಕೆಂಬುದು ನಮ್ಮ ಉದ್ದೇಶವಲ್ಲ. ಅವರು ಉತ್ತಮ ಜೀವನ ರೂಪಿಸಿಕೊಳ್ಳಲಿ ಎಂಬುದೇ ಧ್ಯೇಯ’ ಎಂದು ಭದ್ರಾ ಪಿಯು ಕಾಲೇಜಿನ ಸಂಸ್ಥಾಪಕ ಸಿ.ಎಚ್. ಮುರುಗೇಂದ್ರಪ್ಪ ತಿಳಿಸಿದರು.
‘ಏಕಾಗ್ರತೆ, ಸಾಧಿಸಬೇಕೆಂಬ ಹಂಬಲ, ಕಠಿಣ ಪರಿಶ್ರಮ ಆದಿತ್ಯನ ಈ ಸಾಧನೆಗೆ ಕಾರಣ. ಆತ ಇಷ್ಟು ಅಂಕ ಗಳಿಸುತ್ತಾನೆ ಎಂಬ ನಿರೀಕ್ಷೆ ನಮಗಿತ್ತು. ಆ ರೀತಿಯೇ ಫಲಿತಾಂಶ ಬಂದಿದೆ’ ಎಂದು ಪ್ರಾಚಾರ್ಯ ಚಂದ್ರಪ್ಪ ಡಿ. ಅವರು ಹೇಳಿದರು.
ನಾನು ಶೇ 99 ಅಂಕಗಳನ್ನು ನಿರೀಕ್ಷಿಸಿದ್ದೆ. ನನ್ನ ಈ ಸಾಧನೆಗೆ ಕಾಲೇಜಿನ ಉಪನ್ಯಾಸಕರು ಆಡಳಿತ ಮಂಡಳಿಯವರು ನೀಡಿದ ಪ್ರೋತ್ಸಾಹ ಕಾರಣ. ಉತ್ತಮ ಬೋಧನೆ ಅಂಕಗಳಿಕೆಗೆ ಅನುಕೂಲ ಕಲ್ಪಿಸಿತು.ವಿ.ಆದಿತ್ಯ ವಿದ್ಯಾರ್ಥಿ
ಮಗನ ಈ ಸಾಧನೆಗೆ ನಮ್ಮ ಬಡತನ ಅಡ್ಡಿಯಾಗಿಲ್ಲ. ಕಲಿಯಬೇಕು ಏನನ್ನಾದರೂ ಸಾಧಿಸಬೇಕು ಎಂಬ ಛಲವೇ ಆತನ ಯಶಸ್ಸಿಗೆ ಪ್ರೇರಣೆ. ಮಗ ನಮ್ಮ ಕುಟುಂಬಕ್ಕೆ ಹೆಮ್ಮೆ ತಂದಿದ್ದಾನೆ.ವೆಂಕಟೇಶ, ಆದಿತ್ಯನ ತಂದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.