ದಾವಣಗೆರೆ: ‘ಬಸ್‌ನಿಂದ ಕೆಳಗಿಳಿದು ಹೊಸ ಬಸ್ ಸ್ಟ್ಯಾಂಡ್ ನೋಡಿದ ಕೂಡ್ಲೇ ಖುಷಿ ಆಯ್ತು. ಭಾಳ್ ನೀಟ್ ಇರೋ ಇಂತಹ ಬಸ್ ಸ್ಟ್ಯಾಂಡ್ ನಮ್ ಕಡೆ ನೋಡಿರ್ಲಿಲ್ಲ. ಏರ್‌ಪೋರ್ಟೋ ಅಥವಾ ಮೆಟ್ರೋ ಸ್ಟೇಷನ್‌ಗೆ ಬಂದಂಗಾಯ್ತು. ಈ ಬಸ್ ಸ್ಟ್ಯಾಂಡ್ ನೋಡಿದ್ ಮೇಲೆ ದಾವಣಗೆರೆ ನಗರವೂ ಸಿಕ್ಕಾಪಟ್ಟೆ ಅಭಿವೃದ್ಧಿ ಆಗಿರಬಹುದು ಅಂತನಿಸುತ್ತೆ’..
ಇಲ್ಲಿನ ಕೇಂದ್ರವೊಂದರಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆ ಬರೆಯಲು ನಗರದ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಹೊಸಪೇಟೆಯಿಂದ ಬಂದಿದ್ದ ಎಸ್.ತಿಪ್ಪೇಶ್ ಅವರ ಉದ್ಗಾರವಿದು.
ಸಂತೋಷದಿಂದಲೇ ಮಾತು ಮುಂದುವರಿಸಿದ ಅವರು, ‘ನಿಲ್ದಾಣಕ್ಕೆ ಬಸ್ ಎಂಟ್ರಿಯಾಗುತ್ತಲೇ ಕಂಡ ಗಾರ್ಡನ್, ಭಾಳ್ ಕ್ಲೀನ್ ಆಗಿರೋ ಹೋಟೆಲ್, ಬಸ್‌ಗಳ ಟೈಮಿಂಗ್ ಬಗ್ಗೆ ಮಾಹಿತಿ ನೀಡುವ ಪರದೆಗಳನ್ನೆಲ್ಲ ನೋಡಿ ಮೆಚ್ಚುಗೆ ಆಯ್ತುು. ಎಲ್ಲ ಗೌರ್ಮೆಂಟ್ ಬಸ್ ಸ್ಟ್ಯಾಂಡ್‌ಗಳು ಹಿಂಗೇ ಇದ್ರ ಚಲೊ ನೋಡ್ರಿ’ ಎಂದರು.
‘ಹೈಸ್ಕೂಲ್ ಫೀಲ್ಡ್ ಹತ್ರ ಮಾಡಿದ್ದ ಬಸ್ ಸ್ಟ್ಯಾಂಡ್‌ಗೆ ಹೋದ್ರೆ ಬೈಕ್ ನಿಲ್ಲಿಸೋಕೋ ಒದ್ದಾಡಬೇಕಿತ್ತು. ತುಂಬಾ ಗಲೀಜಾಗಿರ್ತಿತ್ತು. ದುರ್ವಾಸನೆ ಬೀರುತ್ತಿತ್ತು. ಆದ್ರೆ, ಹೊಸ ಬಸ್ ಸ್ಟ್ಯಾಂಡಲ್ಲಿ ಬೈಕ್, ಕಾರ್ ನಿಲ್ಸಾಕ ಸಾಕಷ್ಟು ಜಾಗ ಇದೆ. ನಮ್ ಸಿಟೀಲಿ ಇಷ್ಟು ಚಲೊ ಬಸ್ ಸ್ಟ್ಯಾಂಡ್ ಇರೋದು ನಮ್ಗೊಂತರ ಹೆಮ್ಮೆ ಅಲ್ವಾ?’ ಎಂದು ವಿದ್ಯಾರ್ಥಿ ಜೆ.ಶ್ರೀಧರ್ ಪ್ರಶ್ನಿಸಿದರು.
ವಿದ್ಯಾರ್ಥಿಗಳು, ಜನಸಾಮಾನ್ಯರು, ಉದ್ಯಮಿಗಳು ಸೇರಿದಂತೆ ನೂತನ ಬಸ್ ನಿಲ್ದಾಣವನ್ನು ಮೆಚ್ಚದವರೇ ಇಲ್ಲ. ಮೊದಲ ಬಾರಿ ಬಸ್ ನಿಲ್ದಾಣವನ್ನು ಕಣ್ತುಂಬಿಕೊಂಡವರು ಸಹಪಾಠಿಗಳೊಂದಿಗೆ, ಸಹೋದ್ಯೋಗಿಗಳೊಂದಿಗೆ, ನೆರೆಹೊರೆಯವರೊಂದಿಗೆ ಮಾತನಾಡುವುದು ಈಚೆಗೆ ಸಾಮಾನ್ಯವಾಗಿದೆ.
‘ಸ್ಮಾರ್ಟ್ ಸಿಟಿ’ ಯೋಜನೆಯಡಿ ₹ 109.84 ಕೋಟಿ ವೆಚ್ಚದಲ್ಲಿ 6 ಎಕರೆ 7 ಗುಂಟೆ ಪ್ರದೇಶದಲ್ಲಿ ಸಿದ್ಧಗೊಂಡು, ಈಚೆಗಷ್ಟೇ ಸಾರ್ವಜನಿಕರ ಬಳಕೆಗೆ ಮುಕ್ತವಾಗಿರುವ ಈ ಬಸ್ ನಿಲ್ದಾಣವು ಸುಸಜ್ಜಿತವಾಗಿದ್ದು, ಹತ್ತಾರು ಸೌಲಭ್ಯಗಳನ್ನು ಹೊಂದಿದೆ. ವಿಭಾಗೀಯ ಕಚೇರಿಯನ್ನೂ ಇದು ಹೊಂದಿದೆ.
14 ಪ್ಲಾಟ್‌ಫಾರ್ಮ್ ಹೊಂದಿರುವ ಈ ನಿಲ್ದಾಣದಲ್ಲಿ ಏಕಕಾಲದಲ್ಲಿ 46 ಬಸ್‌ಗಳನ್ನು ನಿಲ್ಲಿಸಬಹುದಾಗಿದೆ. 22 ವಾಣಿಜ್ಯ ಮಳಿಗೆಗಳಿವೆ. ಬೇಕರಿ, ಜನರಲ್ ಸ್ಟೋರ್‌ಗಳೇ ಹೆಚ್ಚಿದ್ದು, ಪುಸ್ತಕ ಮಳಿಗೆಗಳನ್ನು ಇನ್ನಷ್ಟೇ ಆರಂಭಿಸಬೇಕಿದೆ.
ಪೊಲೀಸ್ ಚೌಕಿ ಇದೆ. ನಿಲ್ದಾಣದ ಹಲವೆಡೆ ತ್ಯಾಜ್ಯ ಸಂಗ್ರಹ ಡಬ್ಬಿಗಳನ್ನು (ಡಸ್ಟ್ ಬಿನ್) ಇಡಲಾಗಿದ್ದು, ಪಾಲಿಕೆ ಸಿಬ್ಬಂದಿ ನಿತ್ಯವೂ ಇವುಗಳಿಂದ ಕಸ ಸಂಗ್ರಹಿಸುತ್ತಿದ್ದಾರೆ.
3 ವಿದ್ಯುತ್ ನಿರ್ವಹಣಾ ಕೊಠಡಿಗಳಿವೆ. ಶುದ್ಧ ಸಸ್ಯಹಾರಿ ಕ್ಯಾಂಟೀನ್ ದಿನದ 24 ತಾಸು ತೆರೆದಿರುತ್ತದೆ. ಮಾಂಸಾಹಾರಿ ಹೋಟೆಲ್ ಸಹ ಶೀಘ್ರವೇ ಆರಂಭಗೊಳ್ಳಲಿದೆ. ನಿಲ್ದಾಣದಲ್ಲಿ ಚಿಕ್ಕಮಕ್ಕಳ ಪೋಷಣಾ ಕೊಠಡಿಯಿದ್ದು, ತಾಯಂದಿರು ಮಗುವಿಗೆ ಹಾಲುಣಿಸಿ, ವಿಶ್ರಾಂತಿ ಪಡೆಯಬಹುದು. ಒಳಗಡೆಯೇ ಪ್ರತ್ಯೇಕ ಶೌಚಾಲಯ ಹಾಗೂ ಸ್ನಾನದ ಕೊಠಡಿಯೂ ಇದೆ.
ನಿಲ್ದಾಣದ 2 ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಒಂದು ರೂಪಾಯಿ ನಾಣ್ಯ ಹಾಕಿದರೆ 1 ಲೀಟರ್, ಎರಡು ರೂಪಾಯಿ ನಾಣ್ಯ ಹಾಕಿದರೆ 2 ಲೀಟರ್ ನೀರು ದೊರೆಯುತ್ತದೆ. ಹೊರಗಡೆ ₹ 10, ₹ 20 ಕೊಟ್ಟು ನೀರು ಖರೀದಿಸಬೇಕಿದ್ದ ಪ್ರಯಾಣಿಕರಿಗೆ ಇದರಿಂದ ಉಳಿತಾಯವೂ ಆಗುತ್ತಿದೆ.
‘ಶುದ್ಧ ಕುಡಿಯುವ ನೀರಿನ ಘಟಕಗಳು ವಿದ್ಯುತ್ ಇದ್ದಾಗ ಮಾತ್ರ ಕಾರ್ಯ ನಿರ್ವಹಿಸುತ್ತವೆ, ವಿದ್ಯುತ್ ಇಲ್ಲದಿದ್ರೂ ನೀರು ಸಿಗುವಂತೆ ಪರ್ಯಾಯ ವ್ಯವಸ್ಥೆ ಮಾಡಬೇಕು’ ಎಂದು ಚಿತ್ರದುರ್ಗದಿಂದ ಬಂದಿದ್ದ ಜುಬೇರ್ ಕೋರಿದರು.
‘ಲಗೇಜ್ ರೂಂ ಹಾಗೂ ಲಾಕರ್ ಸೌಲಭ್ಯ’ವೂ ನಿಲ್ದಾಣದಲ್ಲಿದೆ. ‘ನಗರಕ್ಕೆ ಆಗಮಿಸುವ ಪ್ರಯಾಣಿಕರು, ಪ್ರವಾಸಿಗರು ನಿಗದಿತ ಶುಲ್ಕ ಪಾವತಿಸಿ ತಮ್ಮ ಲಗೇಜ್‌ಗಳನ್ನು ಇಡಬಹುದು. ಶೀಘ್ರವೇ ಈ ಕೊಠಡಿಗಳು ಸೇವೆಗೆ ಲಭ್ಯವಾಗಲಿವೆ’ ಎಂದು ಸಹಾಯಕ ಸಂಚಾರ ನಿರೀಕ್ಷಕ ಗಣಪತಿ ತಿಳಿಸಿದರು.
ಬಸ್ ನಿಲ್ದಾಣದಲ್ಲಿ ಪುರುಷರು, ಮಹಿಳೆಯರು ಹಾಗೂ ಅಂಗವಿಕಲರಿಗೆ ಮೂರು ಕಡೆಯೂ ಪ್ರತ್ಯೇಕ, ಸುಸಜ್ಜಿತ ಶೌಚಾಲಯಗಳಿವೆ. ಮೂತ್ರ ವಿಸರ್ಜನೆಗೆ ಉಚಿತವಿದ್ದು, ಟಾಯ್ಲೆಟ್ ರೂಂ ಬಳಕೆಗೆ ₹ 2 ದರ ನಿಗದಿಪಡಿಸಲಾಗಿದೆ. 3 ಅತ್ಯಾಧುನಿಕ ನೆಲ ಒರೆಸುವ ಯಂತ್ರಗಳನ್ನು ಬಳಸಿ ಸಿಬ್ಬಂದಿಯು ಇಡೀ ನಿಲ್ದಾಣವನ್ನು ಸ್ವಚ್ಛಗೊಳಿಸುತ್ತಿದ್ದಾರೆ.
ಬಸ್ ನಿಲ್ದಾಣದ ನೆಲಮಹಡಿಯಲ್ಲಿ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಏಕಕಾಲದಲ್ಲಿ 3,500 ದ್ವಿಚಕ್ರ ವಾಹನಗಳನ್ನು ನಿಲ್ಲಿಸಬಹುದಾಗಿದೆ. ಕಾರ್, ಲಾರಿ, ಬಸ್‌ಗಳೂ ಒಳಗೆ ಪ್ರವೇಶಿಸುವಷ್ಟು ವಿಶಾಲವಾಗಿದೆ. ನೆಲಮಹಡಿಯಿಂದ ಬಸ್ ನಿಲ್ದಾಣದ ಪ್ಲಾಟ್‌ಫಾರ್ಮ್‌ಗೆ ತೆರಳಲು ಮೂರು ಕಡೆಗಳಲ್ಲಿ ಮೆಟ್ಟಿಲು ವ್ಯವಸ್ಥೆ, 2 ಕಡೆಗಳಲ್ಲಿ ಲಿಫ್ಟ್ ಸೌಲಭ್ಯ ಇದೆ.
ಬಸ್ ನಿಲ್ದಾಣದಲ್ಲಿನ ಶಾಪಿಂಗ್ ಮಾಲ್ ಹಾಗೂ 3 ಮಲ್ಟಿಪ್ಲೆಕ್ಸ್ ಆರಂಭಿಸಲು ಟೆಂಡರ್ ಕರೆಯಲಾಗಿದ್ದು ಯಾರೂ ಭಾಗವಹಿಸಿಲ್ಲ. ಮತ್ತೆ ಟೆಂಡರ್ ಕರೆಯಲಾಗುವುದುಸಿದ್ದೇಶ್ವರ ಎನ್. ಹೆಬ್ಬಾಳ್ ವಿಭಾಗೀಯ ನಿಯಂತ್ರಕ
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳಿವೆ. ಸಾರ್ವಜನಿಕರು ಮುಖ್ಯವಾಗಿ ಸ್ವಚ್ಛತೆಗೆ ಸಹಕರಿಸಬೇಕು. ಕುಂದುಕೊರೆತೆ ಸಲಹೆಗಳಿದ್ದರೆ ನೀಡಬಹುದುಸಿದ್ದೇಶ್ ಎಚ್.ಎಸ್. ಸಹಾಯಕ ಸಂಚಾರ ಅಧೀಕ್ಷಕ
ನೂತನ ಬಸ್ ನಿಲ್ದಾಣವು ‘ಪ್ರಯಾಣಿಕ ಸ್ನೇಹಿ’ಯಾಗಿದೆ. ಈ ಸೌಲಭ್ಯಗಳನ್ನು ಮುಂದೆಯೂ ಇರುವಂತೆ ನೋಡಿಕೊಳ್ಳಬೇಕು. ನಿರ್ವಹಣೆ ಹೇಗಿರುತ್ತೆ ಎಂಬುದು ಮುಖ್ಯವಾಗಿದೆರವಿ ಬಾಣಾವರ ಪ್ರಯಾಣಿಕ
ನಿಲ್ದಾಣದಲ್ಲಿನ ಆಟೊ ಸ್ಟ್ಯಾಂಡ್ ಚಿಕ್ಕದಾಯಿತು. 40 ರಿಂದ 50 ಆಟೊಗಳನ್ನು ನಿಲ್ಲಿಸುವಷ್ಟಾದರೂ ಜಾಗ ಇರಬೇಕಿತ್ತು. ರಸ್ತೆ ಪಕ್ಕದಲ್ಲೇ ಹೆಚ್ಚಿನ ಆಟೊ ನಿಲ್ಲಿಸಬೇಕಾದ ಅನಿವಾರ್ಯತೆ ಇದೆಶಂಕರ್ ಡಿ. ಆಟೊ ಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.