ಹರಿಹರ: ಹರಿಹರ ತಾಲ್ಲೂಕಿನ ಹಲಸಬಾಳು ಹಾಗೂ ರಾಣೆಬೆನ್ನೂರು ತಾಲ್ಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮಗಳ ಮಧ್ಯದ ಹೆದ್ದಾರಿಯಲ್ಲಿ ಸಿಗುವ ತುಂಗಭದ್ರಾ ಸೇತುವೆಯ ಇಕ್ಕೆಲಗಳಲ್ಲಿ ಜಮೆಯಾಗಿದ್ದ ಮಣ್ಣನ್ನು ಸಾಗಿಸುವ ಕಾರ್ಯಾಚರಣೆಗೆ ಲೋಕೋಪಯೋಗಿ ಇಲಾಖೆ ಗುರುವಾರ ಚಾಲನೆ ನೀಡಿದೆ.
‘ತುಂಗಭದ್ರಾ ಸೇತುವೆ ದಾಟುವ ಸಂಕಷ್ಟ’ ಎಂಬ ಶೀರ್ಷಿಕೆಯಡಿ ಮೇ 14ರಂದು ‘ಪ್ರಜಾವಾಣಿ’ಯಲ್ಲಿ ಸಮಗ್ರ ವರದಿ ಪ್ರಕಟವಾಗಿತ್ತು. ಸೇತುವೆಯ ಮೇಲೆ ಮಳೆ ನೀರು ಸಂಗ್ರಹವಾಗಿ ವಾಹನ ಸಂಚಾರಕ್ಕೆ ಆಗುತ್ತಿರುವ ತೊಂದರೆಯ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಇದರಿಂದ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಮರುದಿನವೇ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದರು. ಸಿಬ್ಬಂದಿ ಮೂಲಕ 34 ಕಿಂಡಿಗಳನ್ನು ತೆರವುಗೊಳಿಸಿ, ಸೇತುವೆಯ ಮೇಲೆ ಸಂಗ್ರಹವಾಗಿದ್ದ ನೀರನ್ನು ತೆರವುಗೊಳಿಸಿದ್ದರು.
ಸೇತುವೆಯ ಮೇಲಿನ ಎರಡೂ ಬದಿಯಲ್ಲಿ 2–3 ಅಡಿಯಷ್ಟು ಶೇಖರಣೆಗೊಂಡಿದ್ದ ಮಣ್ಣನ್ನು ಗುರುವಾರ ಕೂಲಿ ಕಾರ್ಮಿಕರ ತಂಡ ತೆರವು ಮಾಡಿತು. ಐದಾರು ವರ್ಷಗಳಿಂದ ಮಣ್ಣಿನಲ್ಲಿ ಮುಚ್ಚಿ ಹೋಗಿದ್ದ ನೀರು ಹರಿಯುವ ಕಿಂಡಿಗಳಿಗೆ ಹಾಗೂ ಶೇಖರಗೊಂಡಿದ್ದ ಮಣ್ಣಿನ ರಾಶಿಗೆ ಮುಕ್ತಿ ಸಿಕ್ಕಿತು.
‘ಈ ಸೇತುವೆ ಹಾಗೂ ಇದಕ್ಕೆ ಜೋಡಣೆಯಾಗಿರುವ ಏಳೆಂಟು ಕಿ.ಮೀ. ಹೆದ್ದಾರಿಯನ್ನು ನಿಯಮ ಬದ್ಧವಾಗಿ ಪಿಡಬ್ಲ್ಯೂಡಿಗೆ ಹಸ್ತಾಂತರಿಸಲು ಎನ್‌ಎಚ್‌ಎಐ ಅಧಿಕಾರಿಗಳಿಗೆ ಮತ್ತೊಮ್ಮೆ ಪತ್ರ ಬರೆದು ಗಮನ ಸೆಳೆಯುತ್ತೇವೆ. ಹಸ್ತಾಂತರಗೊಂಡಾಗ ಮಾತ್ರ ನಿರ್ವಹಣೆಗೆ ನಮ್ಮ ಇಲಾಖೆಯಿಂದ ಅನುದಾನ ಬಿಡುಗಡೆಯಾಗುತ್ತದೆ’ ಎಂದು ಸಮಸ್ಯೆಯ ನೈಜ ಕಾರಣವನ್ನು ಎಇಇ ಶಿವಮೂರ್ತಿ ವಿವರಿಸಿದರು.
ಈ ಸಂದರ್ಭದಲ್ಲಿ ಪಿಡಬ್ಲುಡಿ ಎಇ ಸತೀಶ್ ನಾಯ್ಕ, ಜೆಇ ಕಸ್ತೂರಿ ಬಾಯಿ ಇದ್ದರು.
ತಮ್ಮ ಇಲಾಖೆ ವ್ಯಾಪ್ತಿಗೆ ಬಾರದಿದ್ದರೂ ಪಿಡಬ್ಲ್ಯೂಡಿ ಅಧಿಕಾರಿಗಳು ಸೇತುವೆಯ ಮಣ್ಣನ್ನು ತೆರವು ಮಾಡಿದ್ದಾರೆ. ಅಧಿಕಾರಿಗಳನ್ನು ಎಚ್ಚರಿಸಿದ ಪತ್ರಿಕೆಯ ಕಾಳಜಿಗೆ ಧನ್ಯವಾದಬಸವರಾಜ್ ಹಲಸಬಾಳು ಗ್ರಾಮದ ಎಎಪಿ ಮುಖಂಡ
ಈಗಲೂ ಈ ಸೇತುವೆ ನಿರ್ವಹಣೆ ಜವಾಬ್ದಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ್ದು (ಎನ್‌ಎಚ್‌ಎಐ). ಆದರೂ ಇನ್ನಷ್ಟು ಸಮಸ್ಯೆ ಉಂಟಾಗದಂತೆ ತಡೆಯಲು ನಮ್ಮ ಸಿಬ್ಬಂದಿಯಿಂದಲೇ ಸೇತುವೆ ಮೇಲಿನ ಕಿಂಡಿಗಳಲ್ಲಿದ್ದ ಮಣ್ಣನ್ನು ತೆಗೆಸಿ ಮಳೆ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಿದ್ದೇವೆಶಿವಮೂರ್ತಿ ಎಇಇ ಪಿಡಬ್ಲ್ಯೂಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.