ADVERTISEMENT

ಹೊಸದುರ್ಗ | ಜಿಟಿ ಜಿಟಿ ಮಳೆ, ದಾಳಿಂಬೆಗೆ ಚಿಬ್ಬುರೋಗ

ಹೊಸದುರ್ಗ: ನಷ್ಟದ ಭೀತಿಯಲ್ಲಿ ಬೆಳೆಗಾರರು; ನೆರವಿಗೆ ಸರ್ಕಾರಕ್ಕೆ ಮನವಿ

ಶ್ವೇತಾ ಜಿ.
Published 22 ಅಕ್ಟೋಬರ್ 2024, 7:13 IST
Last Updated 22 ಅಕ್ಟೋಬರ್ 2024, 7:13 IST
ದಾಳಿಂಬೆ ಬೆಳೆಗೆ ಕಪ್ಪುಚುಕ್ಕೆ ರೋಗ ತಗುಲಿರುವುದು
ದಾಳಿಂಬೆ ಬೆಳೆಗೆ ಕಪ್ಪುಚುಕ್ಕೆ ರೋಗ ತಗುಲಿರುವುದು   

ಹೊಸದುರ್ಗ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ತಾಲ್ಲೂಕಿನ ರೈತರು ಬೆಳೆದಿರುವ ದಾಳಿಂಬೆ ಬೆಳೆಗೆ ಕಪ್ಪುಚುಕ್ಕೆ ರೋಗ ಲಕ್ಷಣಗಳು ಆವರಿಸಿದ್ದು, ರೈತರಲ್ಲಿ ಆತಂಕ ಶುರುವಾಗಿದೆ.

ಉತ್ತಮ ಆದಾಯ ಪಡೆಯುವ ನಿರೀಕ್ಷೆಯಿಂದ ರೈತರು ದಾಳಿಂಬೆಯತ್ತ ಒಲವು ತೋರಿದ್ದರು. ಫೆಬ್ರುವರಿಯಿಂದ ಫಸಲಿಗೆ ಬಿಟ್ಟಿದ್ದ ದಾಳಿಂಬೆಗಳಿಗೆ ಚಿಬ್ಬುರೋಗ (ಕಪ್ಪು ಚುಕ್ಕೆರೋಗ) ಹರಡಿದೆ. ರೋಗಕ್ಕೆ ತುತ್ತಾದ ದಾಳಿಂಬೆ ನೆಲಕ್ಕುರುಳುತ್ತಿವೆ.

‘3 ವರ್ಷಗಳ ಹಿಂದೆ 2 ಎಕರೆಯಲ್ಲಿ ದಾಳಿಂಬೆ ಹಾಕಲಾಗಿತ್ತು. ದಾಳಿಂಬೆ ಉತ್ಕೃಷ್ಟವಾಗಿ ಬೆಳೆಯುವ ಹಂತದಲ್ಲಿದ್ದು, ಕಳೆದ ವರ್ಷ ಉಂಟಾದ ಬರಗಾಲದಿಂದ, ದಾಳಿಂಬೆ ಗಿಡ ಒಣಗಿದಂತಾದವು. ಆದರೀಗ ವಾರದಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ತೇವಾಂಶ ಅಧಿಕವಾಗಿದೆ. ಇದುವರೆಗೂ ₹ 6 ಲಕ್ಷ ವ್ಯಯಿಸಿದ್ದು, ಆದಾಯ ದೊರೆತಿಲ್ಲ. ಅತಿವೃಷ್ಟಿ ಹಾಗೂ ಅನಾವೃಷ್ಟಿ ಮಧ್ಯೆ ಸಿಲುಕಿ ಪರಿತಪಿಸುವಂತಾಗಿದೆ. ಪ್ರತಿ ವರ್ಷ ವಿಮೆ ಕಟ್ಟಿದ್ದರೂ, ನೆರವು ಸಿಕ್ಕಿಲ್ಲ’ ಎಂದು ಸಾಣೇಹಳ್ಳಿಯ ರೈತ ಏಕಾಂತಪ್ಪ ಕೆ.ಟಿ. ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಭೂಮಿಯಲ್ಲಿ ತೇವಾಂಶ ಹೆಚ್ಚಾಗಿರುವ ಕಾರಣ ಫಸಲಿಗೆ ಬಂದಿರುವ ದಾಳಿಂಬೆ ಹಣ್ಣಿನ ಸುತ್ತಲೂ ಕಪ್ಪು ಚುಕ್ಕಿಗಳಾಗಿದ್ದು, ಸ್ವಲ್ಪದಿನದ ನಂತರ ಕೆಳಗುರುಳುತ್ತವೆ. ಬಿದ್ದ ಕಾಯಿಗಳನ್ನು ಕೂಡಲೇ ಜಮೀನಿನಿಂದ ದೂರ ಎಸೆಯಬೇಕು. ಅಲ್ಲದೇ ಅತಿಯಾಗಿ ಹಾನಿಗೊಳಗಾಗಿ ಗಿಡದಲ್ಲೇ ಒಣಗಿರುವ ಹಣ್ಣುಗಳನ್ನು ಸಹ ತೆಗೆಯಬೇಕು. ಹೀಗೆ ಒಂದು ರೋಗದ ಹಣ್ಣು ಮುಟ್ಟಿ ಮತ್ತೊಂದು ಹಣ್ಣು ಮುಟ್ಟಿದರೆ, ಅದಕ್ಕೂ ರೋಗ ತಗುಲುತ್ತದೆ. ಮೊದಲ ಬೆಳೆಯೇ ಹೀಗಾದರೆ ರೈತರು ಸಾಲದ ಸುಳಿಯಲ್ಲಿ ಸಿಲುಕಬೇಕಾಗುತ್ತದೆ’ ಎಂದು ರೈತರೊಬ್ಬರು ಆತಂಕ ವ್ಯಕ್ತಪಡಿಸಿದರು.

‘ಫಸಲಿಗೆ ಬಂದಿರುವ ಹಣ್ಣನ್ನು 2 ತಿಂಗಳಲ್ಲಿ ಬಿಡಿಸಬೇಕಿತ್ತು. ಮಳೆ ಹೆಚ್ಚಾಗಿದ್ದರಿಂದ ದಾಳಿಂಬೆ ನಶಿಸುತ್ತಿವೆ. ದಾಳಿಂಬೆ ಗಿಡದಲ್ಲಿರುವ ಶೇ 90ರಷ್ಟು ಹಣ್ಣುಗಳು ಹಾಳಾಗಿವೆ. ನಿತ್ಯ 5 ದಿನಗಳಿಗೊಮ್ಮೆ ಔಷಧಿ ಸಿಂಪಡಣೆ ಮಾಡುತ್ತಿದ್ದರೂ, ಉಪಯೋಗವಾಗಿಲ್ಲ. ತೋಟಗಾರಿಕೆ ಇಲಾಖೆಯವರು ರೈತರ ಸಮಸ್ಯೆಗೆ ಸ್ಪಂದಿಸಬೇಕು’ ಎಂದು ಏಕಾಂತಪ್ಪ ಮನವಿ ಮಾಡಿದರು.

ಹೊಸದುರ್ಗದ ಸಾಣೇಹಳ್ಳಿಯಲ್ಲಿನ ರೈತರೊಬ್ಬರ ಜಮೀನಿನಲ್ಲಿರುವ ದಾಳಿಂಬೆ ಬೆಳೆ

ದಾಳಿಂಬೆಗೆ ಚಿಬ್ಬುರೋಗ ತಗುಲಿದಲ್ಲಿ ತಜ್ಞರನ್ನು ಭೇಟಿ ಮಾಡಿ ರಾಸಾಯನಿಕ ಸಿಂಪಡಿಸಬೇಕು ಎಸ್. -ಓಂಕಾರಪ್ಪ ಸಸ್ಯ ಸಂರಕ್ಷಣಾ ವಿಜ್ಞಾನಿ ಬಬ್ಬೂರು ಫಾರಂ ಕೃಷಿ ವಿಜ್ಞಾನ ಕೇಂದ್ರ

ಈ ಬಾರಿ ದಾಳಿಂಬೆಯಿಂದ ಆದಾಯದ ನಿರೀಕ್ಷೆ ಇತ್ತು. 3 ಎಕರೆ ಭೂಮಿಯಲ್ಲಿ ದಾಳಿಂಬೆ ಹಾಕಿದ್ದು ಕೇವಲ ಔಷಧಿಗಾಗಿಯೇ ವಾರಕ್ಕೆ ₹ 20000 ವ್ಯಯಿಸಲಾಗುತ್ತಿದೆ

-ಏಕಾಂತಪ್ಪ ಸಾಣೇಹಳ್ಳಿ ದಾಳಿಂಬೆ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.