ADVERTISEMENT

ಹರಪನಹಳ್ಳಿ: ಹಾಗಲಕಾಯಿ ಬೆಳೆದು ಯಶಸ್ಸು ಸಾಧಿಸಿದ ರಾಮಚಂದ್ರಪ್ಪ

ಒಂಟೆತ್ತಿನ ಬೇಸಾಯದ ಮೂಲಕ ಗಮನಸೆಳೆದ ಜೋಷಿಲಿಂಗಾಪುರ ರೈತ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 3:38 IST
Last Updated 14 ಜುಲೈ 2021, 3:38 IST
ಹರಪನಹಳ್ಳಿ ತಾಲ್ಲೂಕು ಜೋಷಿ ಲಿಂಗಾಪುರ ಗ್ರಾಮದ ಜಮೀನಿನಲ್ಲಿ ಹಾಗಲಕಾಯಿ ಕಠಾವು ಮಾಡುತ್ತಿರುವ ರೈತ ರಾಮಚಂದ್ರಪ್ಪ ಮತ್ತು ಕುಟುಂಬದ ಸದಸ್ಯರು.
ಹರಪನಹಳ್ಳಿ ತಾಲ್ಲೂಕು ಜೋಷಿ ಲಿಂಗಾಪುರ ಗ್ರಾಮದ ಜಮೀನಿನಲ್ಲಿ ಹಾಗಲಕಾಯಿ ಕಠಾವು ಮಾಡುತ್ತಿರುವ ರೈತ ರಾಮಚಂದ್ರಪ್ಪ ಮತ್ತು ಕುಟುಂಬದ ಸದಸ್ಯರು.   

ಹರಪನಹಳ್ಳಿ: ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರೆ ಸಾಕು ಕೃಷಿಯಿಂದ ವಿಮುಖರಾಗುವವರೇ ಹೆಚ್ಚು. ಆದರೆ, ಇಲ್ಲೊಬ್ಬರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅಧಿಕಾರ ನಡೆಸಿ ಮಾಜಿಯಾದ ಬಳಿಕವೂ ರಾಜಕಾರಣಕ್ಕೆ ಅಂಟಿಕೊಳ್ಳದೇ ತರಕಾರಿ ಬೆಳೆದು ಸೈ ಎನಿಸಿಕೊಂಡಿದ್ದಾರೆ.

ತಾಲ್ಲೂಕಿನ ಜೋಷಿಲಿಂಗಾಪುರ ಗ್ರಾಮದ ರೈತ ಎಚ್. ರಾಮಚಂದ್ರಪ್ಪ (64) ಯಶಸ್ಸು ಕಂಡ ರೈತ. ರಾಮಚಂದ್ರಪ್ಪ ಅವರು 2004ರಲ್ಲಿ ಕಡಬಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು. ತಮ್ಮ 5 ಎಕರೆ ಜಮೀನಿನಲ್ಲಿ 1 ಎಕರೆಯಲ್ಲಿ ಹಾಗಲಕಾಯಿ, ಒಂದೂವರೆ ಎಕರೆಯಲ್ಲಿ ಈರುಳ್ಳಿ, 2 ಎಕರೆಯಲ್ಲಿ ಟೊಮೆಟೊ, ಅರ್ಧ ಎಕರೆಯಲ್ಲಿ ಸೇವಂತಿ ನಾಟಿ ಮಾಡಿದ್ದಾರೆ. ಇದರ ಜೊತೆಗೆ ಪಾಲಕ್ ಸೊಪ್ಪು, ಉಳಿಸೊಪ್ಪು ಸಹ ಬೆಳೆಯುತ್ತಿದ್ದಾರೆ.

ಹಾಗಲಕಾಯಿ ಬೆಳೆಯಲು ಎಕರೆಯೊಂದಕ್ಕೆ ₹ 50 ಸಾವಿರ ಖರ್ಚು ಬರುತ್ತದೆ. ಅಂದಾಜು ₹ 1 ಲಕ್ಷದವರೆಗೂ ಲಾಭ ಬರುತ್ತದೆ. ಬರಿ ಸಸಿ ನಾಟಿ ಮಾಡಿದರೆ ಸಾಲದು, ಅದರ ಎತ್ತರ ಗಮನಿಸಿ ಪ್ರತಿ ಸಾಲಿನಲ್ಲಿ ಕಟ್ಟಿಗೆಗಳನ್ನು ಹುಗಿದು, ಅವುಗಳಿಗೆ ತಂತಿಕಟ್ಟಬೇಕು. ಸಸಿಗಳು ನೆಲಕ್ಕುರುಳದಂತೆ ಸಾಲಿನಲ್ಲಿ ತಂತಿ ಮತ್ತು ದಾರವನ್ನು ಹೆಣೆಯಬೇಕು. ಆಗ ಉತ್ತಮ ಇಳುವರಿ ಬರುತ್ತದೆ. ಇದೇ ರೀತಿ ಟೊಮೆಟೊ ಬೆಳೆಗೂ ಮಾಡುತ್ತೇವೆ. ಪತ್ನಿ ಕೆಂಚಮ್ಮ, ಮಕ್ಕಳಾದ ಪ್ರಭಾಕರ, ಅಂಬರೀಶ್‌, ರೇಣುಕಮ್ಮ, ಮೊಮ್ಮಗ ರಾಜಶೇಖರ ಅವರೂ ಹೊಲದಲ್ಲಿ ಹಗಲಿರುಳು ದುಡಿಯುತ್ತಾರೆ. ಎಲ್ಲರ ಶ್ರಮದಿಂದ ಹೆಚ್ಚು ಇಳುವರಿ ಬರುತ್ತದೆ ಎಂದು ರೈತ ರಾಮಚಂದ್ರಪ್ಪ ತಿಳಿಸಿದರು.

ADVERTISEMENT

‘ಒಂದು ಎಕರೆಯಷ್ಟು ಹಾಗಲಕಾಯಿ ನಾಟಿ ಮಾಡಿದರೆ ಎರಡು ತಿಂಗಳಿಗೆ ಇಳುವರಿ ಬರುತ್ತದೆ. ಪ್ರತಿ ವಾರ 10ರಿಂದ 12 ಕ್ವಿಂಟಲ್ ಕಟಾವು ಮಾಡುತ್ತೇವೆ. ವರ್ಷವೊಂದಕ್ಕೆ 15ರಿಂದ 17 ಟನ್ ನಷ್ಟು ಇಳುವರಿ ಬರುತ್ತದೆ. ಹೋಲ್‌ಸೇಲ್‌ ದರದಲ್ಲಿ ಹರಪನಹಳ್ಳಿ, ದಾವಣಗೆರೆ, ಹೊಸಪೇಟೆ ನಗರಗಳಿಗೆ ತೆರಳಿ ಮಾರಾಟ ಮಾಡುತ್ತೇವೆ’ ಎಂದು ಮಾಹಿತಿ ನೀಡಿದರು.

ರೈತ ಅಂಜಿನಪ್ಪ ಮತ್ತು ಲಲಿತಮ್ಮ ದಂಪತಿಗೆ ತಮ್ಮ ಜಮೀನಿನಲ್ಲಿಯೇ ಒಂದೂವರೆ ಎಕರೆಯಷ್ಟು ಭೂಮಿ ಕೋರಿಗೆ ಕೊಟ್ಟಿದ್ದು, ಅವರಿಗೂ ತರಕಾರಿ ಬೆಳೆಯಲು ಪ್ರೇರಣೆ ನೀಡಿದ್ದಾರೆ. ರಾಮಚಂದ್ರಪ್ಪ ಅವರ ಸಹಕಾರದಿಂದ 20 ವರ್ಷಗಳಿಂದ ಹೊಲದಲ್ಲಿ ಸ್ಥಳ ಬದಲಾಯಿಸಿ ತರಕಾರಿ ಬೆಳೆಯುತ್ತಿದ್ದು, ಎಂದಿಗೂ ನಷ್ಟ ಅನುಭವಿಸದೆ ಲಾಭ ಗಳಿಸಿದ್ದೇವೆ ಎಂದು ರೈತ ಅಂಜಿನಪ್ಪ ಅನುಭವ ಹಂಚಿಕೊಂಡರು.

ಸಮಗ್ರ ಕೃಷಿ ಪದ್ಧತಿಯ ಜಮೀನಿನಲ್ಲಿ ಈರುಳ್ಳಿ ಸೊಂಪಾಗಿ ಬೆಳೆದಿದ್ದು, 500 ಪ್ಯಾಕೆಟ್ ಆಗುವ ನಿರೀಕ್ಷೆಯಲ್ಲಿದ್ದಾರೆ. ಟೊಮೆಟೊ ಸಹ ಸದ್ಯ ಕೆ.ಜಿ.ಗೆ ₹ 20 ಬೆಲೆ ಇದ್ದು, ಜುಲೈ ಅಂತ್ಯಕ್ಕೆ ಉತ್ತಮ ಬೆಲೆ ಸಿಗುವ ಸಾಧ್ಯತೆ ಇದೆ ಎಂದು ವಕೀಲ ಜಿ.ಎಸ್.ಎಂ. ಕೊಟ್ರಯ್ಯ ತಿಳಿಸಿದರು.

***

ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿದ್ದ ವರ್ಷದಿಂದಲೇ ತರಕಾರಿ ಬೆಳೆಯಲು ಶುರು ಮಾಡಿದೆ. ಪ್ರತಿ ವಾರ ₹ 25 ಸಾವಿರ ಆದಾಯ ಬರುತ್ತದೆ. ₹ 6 ಸಾವಿರ ಖರ್ಚು ಮಾಡುತ್ತೇವೆ. ಪ್ರತಿ ನಿತ್ಯ ಬಳ್ಳಿಯ ಸಾಲು ವೀಕ್ಷಿಸಿ ರೋಗದ ಬಗ್ಗೆ ಎಚ್ಚರಿಕೆ ವಹಿಸಬೇಕು. ರೋಗ ಆವರಿಸಿದರೆ, ಇಡೀ ಹೊಲವೇ ಹಾಳಾಗುತ್ತದೆ.

- ಎಚ್. ರಾಮಚಂದ್ರಪ್ಪ, ರೈತ

****

ತಾಲ್ಲೂಕಿನಲ್ಲಿ ಹಾಗಲಕಾಯಿ ಬೆಳೆಯುವ ರೈತರ ಸಂಖ್ಯೆಹೆಚ್ಚಾಗಿದ್ದು, 18 ಹೆಕ್ಟೇರ್‌ ಪ್ರದೇಶದಲ್ಲಿ ನಾಟಿ ಮಾಡಿದ್ದಾರೆ. ಜೋಷಿ ಲಿಂಗಾಪುರ ಗ್ರಾಮದಲ್ಲಿ ಎತೇಚ್ಛವಾಗಿ ಬೆಳೆಯುತ್ತಿದ್ದಾರೆ.

-ಜಯಸಿಂಹ, ಹಿರಿಯ ಸಹಾಯಕ ನಿರ್ದೇಶಕ. ತೋಟಗಾರಿಕೆ ಇಲಾಖೆ

***

ಒಂಟೆತ್ತಿನ ಬೇಸಾಯ; ಹಾಗಲಕಾಯಿ ಫೇಮಸ್

ಜೋಷಿ ಲಿಂಗಾಪುರವೆಂದರೆ ಹಾಗಲಕಾಯಿಗೆ ಫೇಮಸ್ ಆಗಿರುವಂತೆ ಒಂಟೆತ್ತಿನ ಬೇಸಾಯದಿಂದಲೂ ಸದ್ದು ಮಾಡಿದೆ. ಹಾಗಲದ ಬಳ್ಳಿಯ ಸಾಲಿನಲ್ಲಿ ಎರಡು ಎತ್ತಿನ ಬೇಸಾಯ ಕಷ್ಟವೆಂದು ಅರಿತ ರೈತ ರಾಮಚಂದ್ರಪ್ಪ, ಒಂಟೆತ್ತು ಕಟ್ಟಿ ಬೇಸಾಯ ಮಾಡುತ್ತಾರೆ. ಒಂದೂವರೆ ತಾಸು ಒಂದು ಎತ್ತು ಹೆಗಲು ಕೊಟ್ಟರೆ, ಮತ್ತೊಂದು ಮೇಯಲು ತೆರಳುತ್ತದೆ. ಇದರಿಂದ ಹಾಗಲಕಾಯಿ ಸಾಲುಗಳಲ್ಲಿ ಒಂದು ಹುಲ್ಲು ಕಡ್ಡಿ ಇಲ್ಲದಂತೆ ಸ್ವಚ್ಛಂದವಾಗಿ ಕಾಣುತ್ತದೆ. ಗ್ರಾಮದ ಇತರೆ ರೈತರೂ ಇದನ್ನೇ ಅನುಕರಣೆ ಮಾಡುತ್ತಿದ್ದಾರೆ. ಹೆಚ್ಚಿನ ಇಳುವರಿ ಕಾರಣಕ್ಕೆ ರಾಮಚಂದ್ರಪ್ಪ ಅವರು ಖಾಸಗಿ ಕಂಪನಿಯಿಂದ ‘ಉತ್ತಮ ರೈತ ಪುರಸ್ಕಾರ’ ಪಡೆದುಕೊಂಡಿದ್ದಾರೆ.

‘ಭೂಮಿಯಲ್ಲಿ ಅಂತರ್ಜಲ ಆಳಕ್ಕೆ ಹೋಗಿದೆ. ಇಲ್ಲಿಯವರೆಗೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ 11 ಸಲ ಕೊಳವೆಬಾವಿ ಕೊರೆಯಿಸಿ ನೀರು ಸಿಗದಿದ್ದರೂ ಎದೆಗುಂದಲಿಲ್ಲ. ಕುಟುಂಬ ಸದಸ್ಯರು ಕೈಜೋಡಿಸಿದರೆ ಉತ್ತಮ ಸಾಧನೆ ಸಾಧ್ಯ. ರಾಜಕಾರಣ ಚುನಾವಣೆಗೆ ಮಾತ್ರ ಸೀಮಿತ. ಭೂಮಿ ತಾಯಿಯೇ ನಮ್ಮ ಜೀವನಕ್ಕೆ ಆಧಾರ’ ಎಂದು ಹೇಳುತ್ತಾರೆ ಎಚ್. ರಾಮಚಂದ್ರಪ್ಪ.

ಸಂಪರ್ಕಕ್ಕೆ: 99016-26431.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.