ನ್ಯಾಮತಿ: ಮಲೆನಾಡಿನ ಸಹ್ಯಾದ್ರಿಗಿರಿಯ ಕೊನೆಯ ಪರ್ವತ ಶ್ರೇಣಿಯ ಬೆಟ್ಟ-ಸಾಲುಗಳ ಮೇಲೆ ಕಾಣುವ ಆಕರ್ಷಕ ಸುಂದರ ಕಲ್ಲು ಕಂಬಗಳ ದೇಗುಲ ತೀರ್ಥರಾಮೇಶ್ವರ ಪುಣ್ಯಕ್ಷೇತ್ರ.
ನ್ಯಾಮತಿಯಿಂದ 11 ಕಿ.ಮೀ. ದೂರದಲ್ಲಿರುವ ಕ್ಷೇತ್ರಕ್ಕೆ ಬೆಳಗುತ್ತಿ ಮಾರ್ಗವಾಗಿ 3 ಕಿ.ಮೀ. ದೂರ ಸಾಗಿದರೆ ತೀರ್ಥರಾಮೇಶ್ವರ ಪುಣ್ಯಕ್ಷೇತ್ರ ಸಿಗುತ್ತದೆ.
ತೀರ್ಥಗಿರಿಯಲ್ಲಿ ಹಲವು ಪೌರಾಣಿಕ ಮತ್ತು ಚಾರಿತ್ರಿಕ ಕುರುಹುಗಳು ಕಾಣಸಿಗುತ್ತವೆ. ಈ ಕ್ಷೇತ್ರ ರಾಮಾಯಣ ಕಾಲದಿಂದಲೂ ಪ್ರಸಿದ್ಧಿಯಲ್ಲಿತ್ತು ಎನ್ನುವ ಐತಿಹ್ಯ ಇದೆ. ರಾಮಾಯಣ ಕಾಲದಲ್ಲಿ ವನವಾಸದಲ್ಲಿದ್ದ ರಾಮನು ಸೀತಾ, ಲಕ್ಷ್ಮಣರೊಂದಿಗೆ ಈ ಬೆಟ್ಟದ ತಪ್ಪಲಿಗೆ ಬಂದಾಗ ಬಾಯಾರಿಕೆಯಾಗುತ್ತದೆ. ಸುತ್ತಲೂ ನೀರಿಗಾಗಿ ಹುಡುಕಿದಾಗ ಎಲ್ಲಿಯೂ ನೀರು ದೊರಕುವುದಿಲ್ಲ. ಆಗ ರಾಮನು ಭೂಮಿಗೆ ಬಾಣ ಹೊಡೆಯಲು ಕ್ಷಣದಲ್ಲಿಯೇ ನೀರು ಚಿಮ್ಮುತ್ತದೆ. ಮೂವರೂ ನೀರನ್ನು ಕುಡಿದು ತೃಪ್ತರಾಗುತ್ತಾರೆ. ಈ ನೀರು ಕಾಶೀ ತೀರ್ಥದಷ್ಟೇ ರುಚಿಯಾಗಿದೆ ಎಂದು ಕಾಶೀ ತೀರ್ಥ ಎಂದು ರಾಮನು ಕರೆಯುತ್ತಾನೆ. ನಂತರದಲ್ಲಿ ಉದ್ಭವಗೊಂಡ ಲಿಂಗವನ್ನು ಪೂಜಿಸಿ ಮುಂದೆ ಸಾಗಿದರು. ತೀರ್ಥ, ರಾಮ ಹಾಗೂ ಈಶ್ವರರ ಸಂಗಮ ಕ್ಷೇತ್ರವೇ ತೀರ್ಥರಾಮೇಶ್ವರ ಪುಣ್ಯಕ್ಷೇತ್ರ ಎಂಬ ಐತಿಹ್ಯವಿದೆ.
ಮತ್ತೊಂದು ಹಿನ್ನೆಲೆಯ ಪ್ರಕಾರ ಕಾಶಿಯಲ್ಲಿ ಗಂಗಾಸ್ನಾನ ಮಾಡುವಾಗ ಸನ್ಯಾಸಿಯೊಬ್ಬರು ತಮ್ಮ ಬೆಳ್ಳಿಯ ಬೆತ್ತವನ್ನು ಕಳೆದುಕೊಳ್ಳುತ್ತಾರೆ. ಅವರು ಸಂಚಾರ ಮಾಡುತ್ತಾ ತೀರ್ಥರಾಮೇಶ್ವರಕ್ಕೆ ಬಂದಾಗ ಅವರ ಬೆಳ್ಳಿಯ ಬೆತ್ತ ಇಲ್ಲಿ ಸಿಗುತ್ತದೆ. ಆದಕಾರಣ ಈ ನೀರು ಕಾಶಿಯಿಂದ ಬರುತ್ತಿದೆ ಎಂಬ ಪ್ರತೀತಿ ಇದೆ. ಈ ಪವಿತ್ರ ತೀರ್ಥ ಗುಂಡಿಯಲ್ಲಿ ಬಸವನ ಬಾಯಿ ಮೂಲಕ 365 ದಿನವೂ ನೀರು ಬರುತ್ತದೆ. ಗುಂಡಿಯಲ್ಲಿ ನೀರು ಭರ್ತಿಯಾದ ನಂತರ ಹರಿಯದೆ ನಿಲ್ಲುತ್ತದೆ ಎಂದು ಆರ್ಚಕರು ಹೇಳುತ್ತಾರೆ.
ಸಂತಾನ ಅಪೇಕ್ಷೆಯುಳ್ಳವರು ಇಲ್ಲಿಯ ಪವಿತ್ರ ಜಲದಲ್ಲಿ ಸ್ನಾನ ಮಾಡಿ, ಬ್ರಹ್ಮ ದೇವರಿಗೆ ಹೋಳಿಗೆ ಎಡೆ ಹರಕೆ ಹೊತ್ತರೆ ಸಂತಾನಫಲ ಸಿಗುತ್ತದೆ ಎಂಬ ನಂಬಿಕೆ ಇದೆ. ಈ ಕ್ಷೇತ್ರಕ್ಕೆ ದ್ವಾಪರ ಯುಗದಲ್ಲಿ ಪಾಂಡವರು ಬಂದು ತೀರ್ಥ ಮತ್ತು ಶಿವಲಿಂಗವನ್ನು ಪೂಜಿಸಿ ಕೆಲವು ದಿನ ತಂಗಿದ್ದರು. ಪವಾಡ ಪುರುಷ ಉಜ್ಜಯನಿ ಮರುಳಸಿದ್ದರು ಇಲ್ಲಿ ಕೆಲವು ವರ್ಷಗಳ ಕಾಲ ತಪ್ಪಸ್ಸು ಮಾಡಿದ್ದರು ಎಂದೂ ಹೇಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.