ADVERTISEMENT

ರಾಮಾಯಣ ಮಹಾಕಾವ್ಯವೇ ಹೊರತು ಇತಿಹಾಸವಲ್ಲ: ಸಾಹಿತಿ ಪ್ರೊ.ಎ.ಬಿ.ರಾಮಚಂದ್ರಪ್ಪ ಅಭಿಮತ

ವಾಲ್ಮೀಕಿ ಜಯಂತಿಯಲ್ಲಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 11:18 IST
Last Updated 17 ಅಕ್ಟೋಬರ್ 2024, 11:18 IST
   

ದಾವಣಗೆರೆ: ರಾಮಾಯಣ ಮಹರ್ಷಿ ವಾಲ್ಮೀಕಿ ರಚಿಸಿದ ಮಹಾಕಾವ್ಯವೇ ಹೊರತು ಇತಿಹಾಸವಲ್ಲ. ಇದನ್ನು ಚರಿತ್ರೆಯಾಗಿ ಬಿಂಬಿಸುವ ಹಾಗೂ ಇದಕ್ಕೆ ನ್ಯಾಯಾಲಯದ ಮುದ್ರೆ ಒತ್ತುವ ಸಾಂಸ್ಕೃತಿಕ ರಾಜಕಾರಣವೊಂದು ದೇಶದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಸಾಹಿತಿ ಪ್ರೊ.ಎ.ಬಿ.ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಇಲ್ಲಿನ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವತಿಯಿಂದ ಗುರುವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಅವರು ಉಪನ್ಯಾಸ ನೀಡಿದರು.

‘ರಾಮಾಯಣ ಮಹಾಕಾವ್ಯದಲ್ಲಿ ವಾಲ್ಮೀಕಿ ಸೃಷ್ಟಿಸಿದ ಪಾತ್ರಗಳಿಗೆ ಪ್ರಾಮುಖ್ಯತೆ ಸಿಕ್ಕಿದೆ. ವಾಲ್ಮೀಕಿ ಹಾಗೂ ಅವರು ಪ್ರತಿನಿಧಿಸಿದ ಸಮುದಾಯವನ್ನು ಅಂಚಿಗೆ ತಳ್ಳಲಾಗಿದೆ. ರಾಮಾಯಣವನ್ನು ತಪ್ಪಾಗಿ ವಿಶ್ಲೇಷಣೆ ಮಾಡಲಾಗುತ್ತಿದೆ. ಕೋಮುವಾದ ಹರಡಲು ರಾಮಾಯಣವನ್ನು ಸಾಧನವಾಗಿ ಬಳಸಿಕೊಳ್ಳುತ್ತಿರುವುದು ವಾಲ್ಮೀಕಿಗೆ ಮಾಡುವ ದೊಡ್ಡ ಅಪಚಾರ’ ಎಂದು ಪ್ರತಿಪಾದಿಸಿದರು.

ADVERTISEMENT

‘ರಾಮಾಯಣ ಈ ದೇಶದ ಅಲಿಖಿತ ಸಾಂಸ್ಕೃತಿಕ ಸಂವಿಧಾನದ. ಶ್ರೀರಾಮ, ಸೀತೆ, ಲಕ್ಷ್ಮಣ ಹಾಗೂ ಸಹೋದರರ ಸಂಬಂಧ, ಆಡಳಿತ ವ್ಯವಸ್ಥೆಯನ್ನು ಜನರು ಮಾದರಿಯಾಗಿ ಸ್ವೀಕರಿಸಿದ್ದಾರೆ. ಸಾಂಸ್ಕೃತಿಕ ಮೌಲ್ಯ, ಸಾಮಾಜಿಕ ಸಂಬಂಧಗಳು ಜೀವಂತವಾಗಿರಲು ರಾಮಾಯಣ ಕಾರಣ. ಇತ್ತೀಚೆಗೆ ಜಾತಿ, ಕೋಮು ವಿಷಬೀಜ ಬಿತ್ತುವವರ ನಡುವೆ ಶ್ರೀರಾಮ ಸೊರಗುತ್ತಿದ್ದಾನೆ. ದೇಶದ ಜನರಿಗೆ ವಾಲ್ಮೀಕಿಯ ರಾಮ ಬೇಕೆ ಹೊರತು ವೈದಿಕ ಮೂಲದ ಶ್ರೀರಾಮನಲ್ಲ’ ಎಂದು ಹೇಳಿದರು.

‘ಅಗ್ರಹಾರದಲ್ಲಿ ಜನಿಸಿದ ವಾಲ್ಮೀಕಿ ಬೇಡರ ಹಟ್ಟಿಯಲ್ಲಿ ಬೆಳೆದು ದರೋಡೆಕೋರನಾಗಿದ್ದ ಎಂಬ ಸುಳ್ಳು ಹರಡಲಾಗಿದೆ. ವಾಲ್ಮೀಕಿ ದರೋಡೆಕೋರನಾಗಿದ್ದರೆ ಶ್ರೇಷ್ಠ ಮಹಾಕಾವ್ಯ ರಚನೆ ಸಾಧ್ಯವಾಗುತ್ತಿರಲಿಲ್ಲ. ಐದು ಸಾವಿರ ವರ್ಷಗಳಿಂದ ಇಂತಹ ಸುಳ್ಳುಗಳನ್ನು ಬಿತ್ತಲಾಗಿದೆ. ರಸಋಷಿ ವಾಲ್ಮೀಕಿ ಕುರಿತು ಇಂತಹ ಹಸಿ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಅಂಬೇಡ್ಕರ್, ವಾಲ್ಮೀಕಿ ಬೌದ್ಧಿಕತೆ ಹಾಗೂ ಏಕಲವ್ಯ ಪ್ರತಿಭೆಯನ್ನು ಮುಕ್ತವಾಗಿ ಒಪ್ಪಿಕೊಳ್ಳದಿರುವುದು ಮಾನಸಿಕ ದಾರಿದ್ರ್ಯ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸೌಹಾರ್ದತೆ ಬೆಸೆಯಬೇಕಾದ ಹಬ್ಬ, ಜಯಂತಿಗಳು ಸಂಘರ್ಷದ ಸಂದರ್ಭಗಳಾಗಿ ಪರಿವರ್ತನೆ ಹೊಂದಿರುವುದು ವಿಪರ್ಯಾಸ. ಜೈಶ್ರೀರಾಮ್‌ ಘೋಷಣೆಯ ಮೂಲಕ ಭಕ್ತಿಯನ್ನು ಬೀದಿಗೆ ತರಲಾಗಿದೆ. ಇದು ವಾಲ್ಮೀಕಿಯ ಆಶಯವಲ್ಲ. ಸಹನೆಯ ಪ್ರತೀಕವಾದ ಶಬರಿ, ಶ್ರೀರಾಮ ಹಾಗೂ ಸೀತೆಯ ಗುಣಗಳು ನಮ್ಮಲ್ಲಿ ಬೆಳೆಯಬೇಕು. ಆಗ ರಾಮಾಯಣದ ಮೌಲ್ಯಗಳು ಜೀವಂತವಾಗಿರಲು ಸಾಧ್ಯ’ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಹೊಂಡದ ವೃತ್ತದಲ್ಲಿರುವ ರಾಜವೀರ ಮದಕರಿನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಮಳೆಯಲ್ಲಿಯೇ ಹೊರಟ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪ ತಲುಪಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 98 ಅಂಕ ಗಳಿಸಿದ ಸೋಮೇಶ್ವರ ವಿದ್ಯಾಲಯಸ ವಿದ್ಯಾರ್ಥಿನಿ ವೈ.ಎಂ.ಸೃಜನಾ ಅವರನ್ನು ಸನ್ಮಾನಿಸಲಾಯಿತು.

ಶಾಸಕ ಕೆ.ಎಸ್‌.ಬಸವಂತಪ್ಪ, ಉಪಮೇಯರ್ ಸೋಗಿ ಶಾಂತಕುಮಾರ್, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ.ಇಟ್ನಾಳ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಂಜುನಾಥ್‌, ಪಾಲಿಕೆ ಸದಸ್ಯೆ ಮೀನಾಕ್ಷಿ, ಮುಖಂಡರಾದ ಗಣೇಶ ಹುಲ್ಮನಿ, ಆಂಜನೇಯ ಇದ್ದರು.

ಇಂಡೋನೇಷ್ಯಾ ಸೇರಿ ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಶ್ರೀರಾಮನ ದೇಗುಲಗಳಿವೆ. ಜೀವನಕ್ಕೆ ಅಗತ್ಯ ಸಂದೇಶಗಳನ್ನು ವಾಲ್ಮೀಕಿ ರಾಮಾಯಣ ನೀಡುತ್ತಿದೆ.
ಕೆ.ಚಮನ್ ಸಾಬ್, ಮೇಯರ್‌
ಪೊಲೀಸ್‌ ಭದ್ರತೆಯಲ್ಲಿ ಹಬ್ಬಗಳನ್ನು ಆಚರಿಸುವ ಪರಿಸ್ಥಿತಿ ನಿರ್ಮಾಣವಾಗಬಾರದು. ವಾಲ್ಮೀಕಿ ರಾಮಾಯಣದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸವಾಗಬೇಕು.
ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ

‘ನಕಲಿ ಜಾತಿ ಪ್ರಮಾಣ ಪತ್ರಕ್ಕೆ ಕಡಿವಾಣ ಹಾಕಿ’

‘ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರದ ಹಾವಳಿ ಹೆಚ್ಚಾಗಿದೆ. ಇತರ ಜಾತಿಯ ಜನರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ವಾಲ್ಮೀಕಿ ಸಮಾಜದ ಪಾಲನ್ನು ಕಸಿಯುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಹರಿಸಬೇಕು’ ಎಂದು ವಾಲ್ಮೀಕಿ ಸಮಾಜದ ಜಿಲ್ಲಾ ಘಟಕದ ಅಧ್ಯಕ ಬಿ.ವೀರಣ್ಣ ಮನವಿ ಮಾಡಿದರು.

‘ಮದಕರಿ ನಾಯಕರ ವಂಶಸ್ಥರಾದರೂ ಸಮುದಾಯ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಬಡ ಜನರು ವೈದ್ಯಕೀಯ ಸೀಟು ಪಡೆಯಲು ಸಾಧ್ಯವಾಗುತ್ತಿಲ್ಲ. ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಹೆಚ್ಚು ಮಾಡಬೇಕು’ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.