ದಾವಣಗೆರೆ: ಇಲ್ಲಿನ ವಿಶ್ವವಿದ್ಯಾಲಯದಲ್ಲಿ ನಡೆದ 11ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿಯರೇ ಹೆಚ್ಚು ಚಿನ್ನದ ಪದಕ ಬಾಚಿಕೊಂಡರು.
ಹೆಚ್ಚಿನ ವಿದ್ಯಾರ್ಥಿನಿಯರು ಬಡತನದಲ್ಲೇ ಓದಿ ಯಶಸ್ಸು ಪಡೆದಿದ್ದಾರೆ. ಕೂಲಿ ಕಾರ್ಮಿಕರು, ಕೃಷಿಕರು, ಆಟೊ ಚಾಲಕರ ಮಕ್ಕಳೇ ಹೆಚ್ಚಾಗಿದ್ದರು.
ಹೊಸದುರ್ಗದ ವಿದ್ಯಾರ್ಥಿನಿ ಮೋನಿಕಾ ಜಿ.ಕೆ. ತಂದೆ ಕುಮಾರ್ ಕಂದಾಯ ನಿರೀಕ್ಷಕ ಮತ್ತು ತಾಯಿ ರುಕ್ಮಿಣಿ ಶಿಕ್ಷಕಿ. ಅವರ ತಂದೆ–ತಾಯಂದಿರಿಗೆ ಮಗಳು ಎಂಜಿನಿಯರ್ ಆಗಬೇಕು ಎನ್ನುವ ಕನಸು ಇತ್ತು. ಆದರೆ ಮೋನಿಕಾ ಅವರ ಆಸೆ ಎಂ.ಎ. ಮಾಡುವುದಾಗಿತ್ತು. ಅದರಂತೆಯೇ ಸ್ನಾತಕೋತ್ತರ ಪದವಿಯಲ್ಲಿ ಇಂಗ್ಲಿಷ್ ವಿಷಯವನ್ನು ಆಯ್ಕೆ ಮಾಡಿಕೊಂಡು ಮೂರು ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾರೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಕಲಿಯುತ್ತಿದ್ದ ಮೋನಿಕಾ ಅನಾರೋಗ್ಯದ ಕಾರಣ ಸ್ವಂತ ಊರು ಹೊಸದುರ್ಗಕ್ಕೆ ಬಂದರು. ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ ಇಬ್ಬರು ಅಕ್ಕಂದಿರು ಉದ್ಯೋಗದಲ್ಲಿ ಇದ್ದಾರೆ. ವೃತ್ತಿಪರ ಕೋರ್ಸ್ ಮುಗಿಸಿದರೆ ಉತ್ತಮ ಭವಿಷ್ಯ ಸಾಧ್ಯ ಎಂದು ಸಂಬಂಧಿಕರು ಹೇಳಿದ್ದನ್ನು ಲೆಕ್ಕಿಸದೇ ಸಾಧನೆ ಮಾಡಿದ್ದಾರೆ.
‘ಇಂಗ್ಲಿಷ್‌ನಲ್ಲಿ ಎಂ.ಎ. ಮಾಡಬೇಕು ಎಂಬ ಉದ್ದೇಶದಿಂದ ಬಿ.ಎ. ಮುಗಿಸಿದೆ. ಶಾಲಾ ದಿನಗಳಿಂದಲೂ ಇಂಗ್ಲಿಷ್ ಬಗ್ಗೆ ಆಸಕ್ತಿ ಇದ್ದುದರಿಂದ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಲು ಸಹಾಯವಾಯಿತು. ಎನ್‌ಇಟಿ ಹಾಗೂ ಕೆ–ಸೆಟ್ ಪರೀಕ್ಷೆ ಬರೆದು ಸಹಾಯಕ ಪ್ರಾಧ್ಯಾಪಕಿಯಾಗುವುದು ನನ್ನ ಗುರಿಯಾಗಿದ್ದು, ಈಗಾಗಲೇ ಕೆ–ಸೆಟ್ ಪರೀಕ್ಷೆ ಬರೆದಿದ್ದೇನೆ’ ಎಂದು ಮೋನಿಕಾ ಹೇಳಿದರು.
ವೈದ್ಯಕೀಯ ಮಾಡದೇ ಇದ್ದುದಕ್ಕೆ ಬೇಸರ
ಅವಕಾಶ ಸಿಕ್ಕರೆ ಮುಸ್ಲಿಂ ಮಹಿಳೆಯರೂ ವಿದ್ಯಾಭ್ಯಾಸದಲ್ಲಿ ಉನ್ನತ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಸಂತೇಬೆನ್ನೂರಿನ ಖಾಜಿ ಪ್ಯಾರು ಸಾಬ್ ಹಾಗೂ ನೂರುಲ್ಲದಾ ದಂಪತಿಯ ಪುತ್ರಿ ಸಾನಿಯಾ ಅಂಜುಮ್. ಸಾನಿಯಾ ಪೋಷಕರು ಉನ್ನತ ಶಿಕ್ಷಣಕ್ಕೆ ಮಗಳನ್ನು ಪ್ರೋತ್ಸಾಹದ ಫಲವಾಗಿ ಎಂ.ಎಸ್ಸಿ ಗಣಿತ ವಿಷಯದಲ್ಲಿ ಮೂರು ಚಿನ್ನದ ಪದಕ ಪಡೆದಿದ್ದಾರೆ.
ಪಿಯುಸಿಯಲ್ಲಿ ಶೇ 95ರಷ್ಟು ಅಂಕ ಬಂದಿದ್ದು, ವೈದ್ಯಕೀಯ ಮಾಡಬೇಕು ಎಂಬುದು ನನ್ನ ತಂದೆಯ ಆಸೆಯಾಗಿತ್ತು. ಶಾಲಾ ದಿನಗಳಿಂದಲೂ ಗಣಿತಶಾಸ್ತ್ರ ಇಷ್ಟವಾಗಿದ್ದರಿಂದ ನಾನು ಗಣಿತ ಎಂ.ಎಸ್ಸಿಯಲ್ಲಿ ಗಣಿತ ಆಯ್ದುಕೊಂಡು ಚಿನ್ನದ ಪದಕ ಪಡೆದಿದ್ದೇನೆ. ಮೆಡಿಕಲ್ ಮಾಡದೇ ಇದ್ದುದಕ್ಕೆ ಬೇಸರವಿದೆ’ ಎಂದು ಸಾನಿಯಾ ಅಂಜುಮ್ ತಿಳಿಸಿದರು.
ಸಹೋದರನ ಪ್ರೋತ್ಸಾಹ ಸಾಧನೆಗೆ ಕಾರಣ
ದಾವಣಗೆರೆ ಸಮೀಪದ ಹೆಬ್ಬಾಳು ಬಡಾವಣೆಯ ಎಂ.ಎ. ಪತ್ರಿಕೋದ್ಯಮದ ವಿದ್ಯಾರ್ಥಿನಿ ಬಿ.ಮೀನಾಕ್ಷಿ ಅವರಿಗೆ ಎರಡು ಚಿನ್ನದ ಪದಕ ಲಭಿಸಿವೆ. ತಂದೆ ಬಾಬು ನಾಯಕ್ ಹಾಗೂ ತಾಯಿ ರಾಧಾಬಾಯಿ ಕೂಲಿ ಕಾರ್ಮಿಕರು.
ಸಹೋದನರ ಪ್ರೋತ್ಸಾಹ ತನ್ನ ಸಾಧನೆಗೆ ಕಾರಣ. ಪ್ರತಿನಿತ್ಯ ತರಗತಿ ಹಾಜರಾಗುವ ಮೂಲಕ ಮುಖ್ಯ ವಿಷಯಗಳ ಬಗ್ಗೆ ನೋಟ್ ಮಾಡಿಕೊಂಡು ಅಭ್ಯಾಸ ಮಾಡುತ್ತಿದ್ದೆ. ಇದು ನನಗೆ ಚಿನ್ನದ ಪದಕ ಗಳಿಸಲು ಸಹಕಾರಿಯಾಯಿತು. ಮುಂದೆ ಅಧ್ಯಾಪಕ ವೃತ್ತಿಯಲ್ಲಿ ಮುಂದುವರೆಯುವ ಆಸೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಯತ್ತ ಹೆಚ್ಚಯ ಗಮನ ಹರಿಸುತ್ತಿದ್ದೇನೆ’ ಎಂದು ಬಿ.ಮೀನಾಕ್ಷಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಯಕೊಂಡದ ಚಂದನ ಎಂ.ವೈ. ಅರ್ಥಶಾಸ್ತ್ರ ವಿಷಯದಲ್ಲಿ 3 ಚಿನ್ನದ ಪದಕ ಪಡೆದಿದ್ದಾರೆ. ತಂದೆ ಏಳುಕೋಟಿ ಹಾಗೂ ತಾಯಿ ಶಾಂತಲಾ ಇಬ್ಬರು ಶಿಕ್ಷಕರು. ಮುಂದೆ ಸಹಾಯಕ ಪ್ರಾಧ್ಯಾಪಕಿಯಾಗುವ ಕನಸು ಹೊತ್ತಿದ್ದಾರೆ.
ಓದುವುದಕ್ಕೆ ಇಂತಿಷ್ಟು ಗಂಟೆ ಎಂದು ನಿಗದಿಪಡಿಸಿಕೊಂಡಿರಲಿಲ್ಲ. ಮುಕ್ತ ವಾತಾವರಣ ಬೇಕು ಅಷ್ಟೇ. ತಂದೆಯ ಆಸೆಯಂತೆ ನಾನು ರ‍್ಯಾಂಕ್ ಪಡೆದು ಅವರ ಆಸೆ ಈಡೇರಿಸಿದ್ದೇನೆ.- ದೀಪ್ತಿ ಜೆ.ಗೌಡರ್, ಐದು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.