ದಾವಣಗೆರೆ: ನ್ಯಾಮತಿಯ 48 ವರ್ಷದ ಮಹಿಳೆಯೊಬ್ಬರಲ್ಲಿ ಇಲಿಜ್ವರದ ಸೋಂಕು ದೃಢಪಟ್ಟಿದೆ.
ಇವರಿಗೆ ಡಿ. 26ರಂದು ಜ್ವರ, ಮೈಕೈ ನೋವು, ಸುಸ್ತು ಕೀಲು ನೋವಿನಂಥ ಲಕ್ಷಣಗಳು ಕಾಣಿಸಿಕೊಂಡಿದ್ದವು. ಸ್ಥಳೀಯ ಆಸ್ಪತ್ರೆಯಲ್ಲಿ ತೋರಿಸಿ ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು.
29ರಂದು ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಜನವರಿ 2ರಂದು ಇಲಿಜ್ವರ ದೃಢಪಟ್ಟಿತ್ತು.
ಶಿವಮೊಗ್ಗದ ವೈದ್ಯರು ನೀಡಿದ ಮಾಹಿತಿ ಆಧರಿಸಿ ಕ್ಷಿಪ್ರ ಪಡೆಯ ಮುಖ್ಯಸ್ಥ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್ ನೇತೃತ್ವದ ತಂಡ ಜ. 3ರಂದು ಆ ಮಹಿಳೆಯ ಮನೆಗೆ ಭೇಟಿ ನೀಡಿ ಕುಟುಂಬದ ಎಲ್ಲರ ಪರೀಕ್ಷೆ ನಡೆಸಿತು. ಆದರೆ ಯಾರಲ್ಲೂ ಸೋಂಕು ಇರಲಿಲ್ಲ.
‘ಮಹಿಳೆಯೂ ಆರೋಗ್ಯವಾಗಿದ್ದಾರೆ. ಕುಟುಂಬದವರಿಗೆರೋಗ ಹರಡುವ ವಿಧಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು’ ಎಂದು ಜಿ.ಡಿ.ರಾಘವನ್ ತಿಳಿಸಿದರು.
‘ಮನೆಯಲ್ಲಿ ಆಹಾರವನ್ನು ಮುಚ್ಚದೇ ಇದ್ದಾಗ, ಸೋಂಕು ಇರುವ ಇಲಿಗಳ ಹಿಕ್ಕೆ ಹಾಗೂ ಮೂತ್ರ ಆಹಾರದ ಮೇಲೆ ಬಿದ್ದು, ಅದನ್ನು ಮನುಷ್ಯರು ತಿಂದರೆ ಇಲಿಜ್ವರ ಬರುತ್ತದೆ. ಆದ್ದರಿಂದ ಆಹಾರವನ್ನು ಸುರಕ್ಷಿತವಾಗಿ ಇಡಬೇಕು. ಇಲಿಜ್ವರದ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.