ADVERTISEMENT

ಗಾಜಿನಮನೆ, ಜಿಲ್ಲಾ ಆಸ್ಪತ್ರೆಗೆ ರವೀಂದ್ರನಾಥ್‌ ಭೇಟಿ

ಆಗಸ್ಟ್‌ 15ರೊಳಗೆ ಕಾಮಗಾರಿ ಪೂರ್ಣಗೊಳಿಸಿ, ಆಸ್ಪತ್ರೆಗೆ ಲಿಫ್ಟ್‌ ಖರೀದಿಸಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 8:25 IST
Last Updated 20 ಜೂನ್ 2018, 8:25 IST
ದಾವಣಗೆರೆಯ ಗಾಜಿನಮನೆಗೆ ಭೇಟಿ ನೀಡಿದ ಶಾಸಕ ಎಸ್.ಎ. ರವೀಂದ್ರನಾಥ್‌ ಕಾಮಗಾರಿ ಪರಿಶೀಲನೆ ನಡೆಸಿದರು
ದಾವಣಗೆರೆಯ ಗಾಜಿನಮನೆಗೆ ಭೇಟಿ ನೀಡಿದ ಶಾಸಕ ಎಸ್.ಎ. ರವೀಂದ್ರನಾಥ್‌ ಕಾಮಗಾರಿ ಪರಿಶೀಲನೆ ನಡೆಸಿದರು   

ದಾವಣಗೆರೆ: ಗಾಜಿನಮನೆ ಹಾಗೂ ಜಿಲ್ಲಾ ಆಸ್ಪತ್ರೆಗೆ ಮಂಗಳವಾರ ದಿಢೀರ್‌ ಭೇಟಿ ನೀಡಿದ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್‌ ಪರಿಶೀಲನೆ ನಡೆಸಿದರು.

‘ಗಾಜಿನಮನೆಯಲ್ಲಿ ಚಾವಣಿಯ ಗಾಜಿನ ಹಲಗೆಯೊಂದು ಒಡೆದಿದೆ. ದ್ವಾರಬಾಗಿಲಿನ ಪೋರ್ಟಿಕೊ ಗಾಜು ಅಳವಡಿಸುವ ಕಾರ್ಯವೂ ಬಾಕಿಯಿದೆ. ಕೆಲವೆಡೆ ಗಾಜಿನ ಫಲಗಳು ಸರಿಯಾಗಿ ಅಳವಡಿಕೆಯಾಗಿಲ್ಲ ಇಂಥ ಪ್ರಮುಖ ಲೋಪಗಳನ್ನೆಲ್ಲಾ ಶೀಘ್ರ ಸರಿಪಡಿಸಿ’ ಎಂದು ರವೀಂದ್ರನಾಥ್‌, ಭೂಸೇನಾ ನಿಗಮ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಾಸ್ತುಶಿಲ್ಪ ತಜ್ಞರು ವಿನ್ಯಾಸ ಮಾಡಿರುವ ಪ್ರಕಾರ ಗಾಜಿನಮನೆ ಆವರಣದ ಉದ್ಯಾನದ ಕೆಲಸಗಳು ಸಾಕಷ್ಟು ಬಾಕಿಯಿವೆ. ಅಳಿದುಳಿದ ಕಾಮಗಾರಿಗಳನ್ನು ಆಗಸ್ಟ್‌ 15ರ ಒಳಗೆ ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ADVERTISEMENT

ಈ ವೇಳೆ ಭೂಸೇನಾ ನಿಗಮದ ಉಪ ನಿರ್ದೇಶಕ ಚಂದ್ರಶೇಖರ್, ಸಹಾಯಕ ನಿರ್ದೇಶಕ ನಿರಂಜನ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ವೇದಮೂರ್ತಿ, ಸಹಾಯಕ ನಿರ್ದೇಶಕ ಯತಿರಾಜ್, ತಹಶೀಲ್ದಾರ್‌ ಸಂತೋಷ್‌ಕುಮಾರ್‌, ತಾಲ್ಲೂಕು ಪಂಚಾಯಿತಿ ಇಒ ಎಲ್‌.ಎಸ್. ಪ್ರಭುದೇವ್‌ ಅವರೂ ಇದ್ದರು.

ವಸತಿಗೃಹ ದುರಸ್ತಿಗೆ ಸೂಚನೆ: ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ವೈದ್ಯಕೀಯ ಸಿಬ್ಬಂದಿ ವಸತಿಗೃಹಗಳ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸಿಜಿ ಆಸ್ಪತ್ರೆ ಅಧೀಕ್ಷಕಿ ನೀಲಾಂಬಿಕೆ ಅವರಿಗೆ ರವೀಂದ್ರನಾಥ್‌ ಸೂಚನೆ ನೀಡಿದರು. ‘ಆಸ್ಪತ್ರೆ ಹಾಗೂ ವಸತಿಗೃಹಗಳ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿ. ಹೆಚ್ಚಿನ ಅನುದಾನದ ಅವಶ್ಯಕತೆಯಿದ್ದರೆ ತಿಳಿಸಿ, ಸರ್ಕಾರದಿಂದ ವಿಶೇಷ ಅನುದಾನ ತರಲಾಗುವುದು. ಆಸ್ಪತ್ರೆ ಕಟ್ಟಡ ಹಾಳಾಗಿದೆ. ಆದರೆ,ಹೊಸ ಕಟ್ಟಡ ನಿರ್ಮಾಣ ಸದ್ಯಕ್ಕೆ ಸಾಧ್ಯವಿಲ್ಲ. ಹೀಗಾಗಿ, ಇರುವ ಕಟ್ಟಡಕ್ಕೇ ಸುಣ್ಣ–ಬಣ್ಣ ಬಳಿಸಿರಿ. ಕಟ್ಟಡವನ್ನು ಆದಷ್ಟೂ ಶುಚಿಯಾಗಿಟ್ಟುಕೊಳ್ಳಿ’ ಎಂದು ತಿಳಿಸಿದರು.

‘ಲಿಫ್ಟ್‌ ದುರಸ್ತಿಯಾಗದಷ್ಟು ಹಾಳಾಗಿದೆ. ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ’ ಎಂದು ಸಿಬ್ಬಂದಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರವೀಂದ್ರನಾಥ್‌, ಹೊಸ ಲಿಫ್ಟ್‌ ಖರೀದಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದರು.

ಆಸ್ಪತ್ರೆಯ ಸಿಟಿ ಸ್ಕ್ಯಾನ್‌ ವಿಭಾಗ, ತುರ್ತು ನಿಗಾ ಘಟಕ, ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.