ADVERTISEMENT

ಒತ್ತಡಕ್ಕೆ ಮಣಿಯದೇ ಜಾತಿಗಣತಿ ವರದಿ ಬಿಡುಗಡೆ ಮಾಡಲಿ: ಜಿ.ಬಿ.ವಿನಯ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 17:47 IST
Last Updated 18 ಅಕ್ಟೋಬರ್ 2024, 17:47 IST
<div class="paragraphs"><p>ಜಿ.ಬಿ.ವಿನಯ್‌ಕುಮಾರ್</p></div>

ಜಿ.ಬಿ.ವಿನಯ್‌ಕುಮಾರ್

   

ದಾವಣಗೆರೆ: ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೂ ಸರಿಯೇ, ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಲೇಬೇಕು’ ಎಂದು ಸ್ವಾಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷ ಜಿ.ಬಿ.ವಿನಯ್‌ಕುಮಾರ್ ಒತ್ತಾಯಿಸಿದರು.

‘ಜಾತಿಗಣತಿ ವರದಿ ಬಿಡುಗಡೆ ಮಾಡುವುದನ್ನು ತಡೆಯುವ ಬಗ್ಗೆ ಚರ್ಚಿಸಲು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅ.22ರಂದು ಬೆಂಗಳೂರಿನಲ್ಲಿ ಸಮುದಾಯದ ಮುಖಂಡರ ಸಭೆ ಕರೆದಿದೆ. ಸರ್ಕಾರ ಯಾವುದೇ ಸಮುದಾಯದ ಒತ್ತಡಕ್ಕೂ ಮಣಿಯದೇ ವರದಿ ಬಿಡುಗಡೆ ಮಾಡಬೇಕು’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ADVERTISEMENT

‘ಜಾತಿಗಣತಿ ವರದಿ ಬಿಡುಗಡೆ ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯ. ಅವರು ಮುಖ್ಯಮಂತ್ರಿ ಕುರ್ಚಿಯನ್ನು ಕಳೆದುಕೊಳ್ಳುವ ಸ್ಥಿತಿ ಎದುರಾದರೆ, ವರದಿಯನ್ನು ಬಿಡುಗಡೆ ಮಾಡಿಯೇ ಅಧಿಕಾರದಿಂದ ಕೆಳಗಿಳಿಯಬೇಕು’ ಎಂದರು.

‘ವರದಿ ಅವೈಜ್ಞಾನಿಕವಾಗಿದೆ ಎಂಬ ವಾದ ಸರಿಯಲ್ಲ. ತಜ್ಞರು ವೈಜ್ಞಾನಿಕವಾಗಿಯೇ ವರದಿ ಸಿದ್ಧಪಡಿಸಿದ್ದಾರೆ. ಕಚೇರಿಯಲ್ಲಿ ಕುಳಿತು ತಯಾರಿಸಿಲ್ಲ. 22,200 ಸಿಬ್ಬಂದಿ ರಾಜ್ಯಾದ್ಯಂತ ಓಡಾಡಿ ಮಾಹಿತಿ ಕಲೆ ಹಾಕಿದ್ದಾರೆ’ ಎಂದು ತಿಳಿಸಿದರು.

‘ಸಮಾಜದಲ್ಲಿ ಹಲವು ಜಾತಿಯವರಿಗೆ ರಾಜಕೀಯ ಪ್ರಾತಿನಿಧ್ಯ ಇಲ್ಲವಾಗಿದೆ. ನಿಜವಾದ ಅಂಕಿ ಅಂಶಗಳು ಹೊರ ಬಂದರೆ ಆ ವರ್ಗದವರು ರಾಜಕೀಯ, ಸಾಮಾಜಿಕ ಹಕ್ಕುಗಳಿಗೆ ಆಗ್ರಹಿಸುತ್ತಾರೆ ಎಂಬ ಆತಂಕ ಪ್ರಬಲ ಸಮುದಾಯದವರಿಗಿದೆ. ಇದೇ ಕಾರಣಕ್ಕೆ ಅವರು ವರದಿ ಬಿಡುಗಡೆಯನ್ನು ವಿರೋಧಿಸುತ್ತಿದ್ದಾರೆ’ ಎಂದರು.

‘ರಾಜ್ಯದಲ್ಲಿ ಶೇ 80 ರಷ್ಟಿರುವ ಶೋಷಿತ ವರ್ಗಗಳು ಈ ವರದಿಯನ್ನು ಸ್ವಾಗತಿಸಿವೆ. ಶೇ 15 ರಷ್ಟು ಜನ ವಿರೋಧಿಸುತ್ತಿದ್ದಾರೆ. ಶೇ 5ರಷ್ಟು ಮಂದಿ ತಟಸ್ಥವಾಗಿದ್ದಾರೆ. ಬಹುಜನರ ಮನವಿಯನ್ನು ಸರ್ಕಾರ ಪುರಸ್ಕರಿಸಬೇಕು’ ಎಂದು ಆಗ್ರಹಿಸಿದರು.

ಬಳಗದ ಮುಖಂಡರಾದ ಶಿವಕುಮಾರ ಡಿ. ಶೆಟ್ಟರ್, ಷಣ್ಮುಖಪ್ಪ ಇದ್ದರು.

ರಾಜ್ಯದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಜಾತಿಗಣತಿ ವರದಿ ಜಾರಿ ಅನಿವಾರ್ಯವಾಗಿದೆ. ವರದಿ ಆಧಾರದ ಮೇಲೆ ಕಾರ್ಯಕ್ರಮ ರೂಪಿಸಿ ಅನುಷ್ಠಾನಕ್ಕೆ ತರಲಿ
ಜಿ.ಬಿ.ವಿನಯ್‌ಕುಮಾರ್ ಸ್ವಾಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.