ಸಂತೇಬೆನ್ನೂರು: ರಾಗಿ ತಿಂದವ ನಿರೋಗಿ ಎಂಬ ಗಾದೆಯಂತೆ ಆರೋಗ್ಯ ವರ್ಧನೆಯ ಸಾಂಪ್ರದಾಯಿಕ ಆಹಾರದ ಮೂಲವಾಗಿ ರಾಗಿ ಪ್ರಸಿದ್ಧವಾಗಿದೆ. ಸಿರಿಧಾನ್ಯಗಳ ಗುಂಪಿಗೆ ಸೇರಿದ ರಾಗಿ ಪೌಷ್ಟಿಕಾಂಶದ ಆಗರ. ಆದರೆ ರಾಗಿ ಬೆಳೆಯುವ ಪ್ರದೇಶ ಪ್ರತಿ ವರ್ಷ ತೀವ್ರ ಕುಸಿಯುತ್ತಿರುವುದು ಆತಂಕ ಮೂಡಿಸಿದೆ.
ಚನ್ನಗಿರಿ ತಾಲ್ಲೂಕಿನಲ್ಲಿ ಮಳೆಯಾಧಾರಿತ 27,000 ಹೆಕ್ಟೇರ್ ಕೃಷಿ ಭೂಮಿ ಇದೆ. ಅದರಲ್ಲಿ ಕೇವಲ 300 ಹೆಕ್ಟೇರ್‌ನಲ್ಲಿ ರಾಗಿ ಬೆಳೆಯಲಾಗುತ್ತಿದೆ. ಸಂತೇಬೆನ್ನೂರು ಹೋಬಳಿ ವ್ಯಾಪ್ತಿಯಲ್ಲಿ ಕೇವಲ 68 ಹೆಕ್ಟೇರ್‌ನಲ್ಲಿ ರಾಗಿ ಬೆಳೆಯಲಾಗಿದೆ. ಬೇಡಿಕೆ ಇದ್ದರೂ ಆರ್ಥಿಕವಾಗಿ ಲಾಭ ತರದ ಕಾರಣ, ರೈತರು ರಾಗಿ ಬೆಳೆಯಿಂದ ವಿಮುಖಗೊಂಡಿದ್ದಾರೆ.
ದಶಕಗಳ ಹಿಂದೆ ಕೇಸರಿ ಜೋಳ ಹಾಗೂ ರಾಗಿ ಪ್ರಮುಖ ಬೆಳೆಗಳಾಗಿದ್ದವು. ಹೈಬ್ರಿಡ್ ಜೋಳ, ಮೆಕ್ಕೆಜೋಳ ಹಾಗೂ ಅಡಿಕೆ ಬೆಳೆ ವ್ಯಾಪಿಸಿದ ನಂತರ ರಾಗಿ ಹಿನ್ನಡೆ ಕಂಡಿತು. ಇದು ಹೆಚ್ಚು ಪರಿಶ್ರಮ ಬೇಡುವ ಬೆಳೆಯಾಗಿದ್ದು, ಕೊಯ್ಲು, ಒಕ್ಕಣೆಯಲ್ಲಿ ಶಿಸ್ತುಬದ್ಧ ಕಾಯಕ ಮಾಡಲೇಬೇಕು. ಇಷ್ಟಾದರೂ ಸೂಕ್ತ ಬೆಲೆ ದೊರೆಯುವುದಿಲ್ಲ. ಹೀಗಾಗಿ ಆರ್ಥಿಕವಾಗಿ ಲಾಭ ತರುವ ಹಾಗೂ ಯಾಂತ್ರಿಕೃತ ಬೆಳೆಗಳತ್ತ ರೈತರು ಮುಖ ಮಾಡಿದರು ಎನ್ನುತ್ತಾರೆ ರೈತ ರಾಜಣ್ಣ.
‘ರಾಗಿ ಬೆಳೆದರೆ ಮನೆ ಬಳಕೆಗೆ ಧಾನ್ಯ ಸಿಗುವುದರ ಜತೆಗೆ ಜಾನುವಾರುಗಳಿಗೆ ಪೌಷ್ಠಿಕಾಂಶಭರಿತ ಹುಲ್ಲು ಸಿಗುತ್ತದೆ. ಕಟಾವಿಗೆ ಯಂತ್ರ ಬಳಸಿದರೆ ಹುಲ್ಲು ಸಿಗುವುದಿಲ್ಲ. ಸಾಂಪ್ರದಾಯಿಕವಾಗಿ ಕಟಾವು ಮಾಡಿ, ಕಟ್ಟುಗಳನ್ನು ಕಟ್ಟಿ, ಬಣವೆ ಮಾಡಿ ಒಣಗಿಸಿ ಆನಂತರ ಕಣ ಸಿದ್ಧಪಡಿಸಿ ಒಕ್ಕಣೆ ಮಾಡಬೇಕು. ಇದಕ್ಕೆ ಹೆಚ್ಚು ಜನ ಬೇಕು. ಈ ಕಾರಣಕ್ಕಾಗಿ, ಒಂದೇ ಎಕರೆಯಲ್ಲಿ ರಾಗಿ ಬೆಳೆದಿದ್ದೇನೆ’ ಎನ್ನುತ್ತಾರೆ ಗೆದ್ದಲಹಟ್ಟಿ ರೈತ ಸಿದ್ರಾಮಪ್ಪ.
ಒಂದು ಎಕರೆ ರಾಗಿ ಕೊಯ್ಲಿಗೆ ₹12,000 ಕೂಲಿ ಕೇಳುತ್ತಾರೆ. ಸಾಗಣೆಗೆ ₹5,000 ಖರ್ಚು ತಗಲುತ್ತದೆ. ಉಳುಮೆ, ಬೀಜ, ಗೊಬ್ಬರಕ್ಕೆ ₹10,000 ಖರ್ಚು ಬರುತ್ತದೆ. ಒಟ್ಟಾರೆ ಪ್ರತಿ ಎಕರೆಗೆ ಕನಿಷ್ಟ ₹25,000 ವೆಚ್ಚಾವಾಗುತ್ತದೆ. ಪ್ರತಿ ಎಕರೆಗೆ 10 ರಿಂದ 15 ಕ್ವಿಂಟಲ್ ಇಳುವರಿ ಸಿಗುತ್ತದೆ. ಆದರೆ ಮಾರುಕಟ್ಟೆ ದರದಲ್ಲಿ ರಾಗಿ ಬೆಳೆದು ಲಾಭ ಕಾಣುವುದು ಕಷ್ಟ ಎನ್ನುತ್ತಾರೆ ರೈತ ಮುಖಂಡ ಸುರೇಶ್.
ಯಾಂತ್ರಿಕೃತ ಕಟಾವಿನಲ್ಲಿ ಹುಲ್ಲು ಸಿಗುವುದಿಲ್ಲ.
ನಮ್ಮ ಮನೆಯಲ್ಲಿ 17 ರಾಸುಗಳಿವೆ. ರಾಗಿ ಬೆಳೆದು ನಷ್ಟ ಅನುಭವಿಸುವುದಕ್ಕಿಂತ ಭತ್ತದ ಹುಲ್ಲುನ್ನು ಖರೀದಿಸುತ್ತೇವೆ ಸುರೇಶ್ ರೈತ ಮುಖಂಡ ದಾವಣಗೆರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಆಧಾರದ ಮೇಲೆ ಪ್ರತಿ ಕ್ವಿಂಟಲ್ ರಾಗಿಯನ್ನು ₹2300 ರಿಂದ ₹3300ವರೆಗೆ ಖರೀದಿಸಲಾಗುತ್ತಿದೆ ಏಜಾಜ್ ಅಹಮದ್ ವರ್ತಕ ರಾಗಿ ಸಕ್ಕರೆ ಕಾಯಿಲೆಗೆ ರಾಮಬಾಣ. ಮೊದಲು ಬಡವರ ಆಹಾರವಾಗಿದ್ದ ರಾಗಿ ಈಗ ಶ್ರೀಮಂತರ ಆಹಾರವಾಗಿದೆ. ಇದರಲ್ಲಿ ಪ್ರೊಟೀನ್ ರೋಗ ನಿರೋಧಕ ಶಕ್ತಿ ಅಧಿಕ ನಾರಿನಾಂಶ ಕಬ್ಬಿಣ ಕ್ಯಾಲ್ಸಿಯಂ ವಿಟಮಿನ್ ಬಿ ಹಾಗೂ ವಿಟಮಿನ್ ಡಿ. ಮೆಗ್ನಿಷಿಯಂ ಸತ್ವಗಳು ಹೇರಳವಾಗಿವೆ. ನಷ್ಟದ ಕಾರಣಕ್ಕೆ ರಾಗಿ ಬೆಳೆಯಲು ರೈತರು ಹಿಂಜರಿಯುತ್ತಾರೆ. ಸರ್ಕಾರ ಬೆಂಬಲ ಬೆಲೆ ನೀಡಿ ಪ್ರೋತ್ಸಾಹಿಸಬೇಕು ಎಸ್.ಬಿ.ರಾಜಶೇಖರಪ್ಪ ನಿವೃತ್ತ ಕೃಷಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.