ADVERTISEMENT

ಎಂ.ಜಿ.ಈಶ್ವರಪ್ಪ ನೆನೆದು ಒಡನಾಡಿಗಳ ಕಣ್ಣೀರು

ಶ್ರದ್ಧಾಂಜಲಿ ಸಭೆಯಲ್ಲಿ ಭಾವುಕ ಕ್ಷಣ; ಸಾಂಸ್ಕೃತಿಕ ಜೀವಂತಿಕೆ ತುಂಬಿದ ಎಂ.ಜಿ.ಗೆ ನಮನ

​ಪ್ರಜಾವಾಣಿ ವಾರ್ತೆ
Published 2 ಜೂನ್ 2024, 16:18 IST
Last Updated 2 ಜೂನ್ 2024, 16:18 IST
<div class="paragraphs"><p>ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ದಿವಂಗತ ಎಂ.ಜಿ.ಈಶ್ವರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು</p></div>

ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ದಿವಂಗತ ಎಂ.ಜಿ.ಈಶ್ವರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು

   

ದಾವಣಗೆರೆ: ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ, ದಿವಗಂತ ಎಂ.ಜಿ.ಈಶ್ವರಪ್ಪ ಅವರ ಶ್ರದ್ಧಾಂಜಲಿ ಸಭೆಯು ಅತ್ಯಂತ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.

ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಎಂ.ಜಿ.ಈಶ್ವರಪ್ಪ ಅವರ ಆಪ್ತರು, ಒಡನಾಡಿಗಳು, ಹಳೆಯ ಸಹೋದ್ಯೋಗಿಗಳು, ಸಂಬಂಧಿಕರು, ಎಂ.ಜಿ. ಅವರನ್ನು ನೆನೆದು ಕಣ್ಣೀರಾದರು.

ADVERTISEMENT

ಕೆಲವರು ಮಾತನಾಡುವ, ಹಾಡುವ ಮೂಲಕ ಮನದಾಳದ ನೋವು ತೋಡಿಕೊಂಡರೆ, ಇನ್ನೂ ಹಲವರು ಮಾತನಾಡಲಾಗದೇ ಮೌನಕ್ಕೆ ಶರಣಾದರು. 

ಪತ್ರಕರ್ತ ಬಿ.ಎನ್.ಮಲ್ಲೇಶ್ ಮಾತನಾಡಿ, ‘ಎಂ.ಜಿ.ಈಶ್ವರಪ್ಪ ಅವರು ಕೆಟ್ಟವರಲ್ಲೂ ಒಳ್ಳೆಯತನ ಕಂಡವರು.‌ ವಿದ್ಯಾರ್ಥಿ, ಸ್ನೇಹಿತನಾಗಿ ನನ್ನನ್ನು ತುಂಬಾ ಹಚ್ಚಿಕೊಂಡಿದ್ದರು.‌ ತುಂಬಾ ಮೃದು ಸ್ವಭಾವದ ಅವರು, ಘನತೆಯ ಮಾತುಗಳನ್ನಾಡುತ್ತಿದ್ದರು’ ಎಂದರು.

‘ಇನ್ನೂ ಹತ್ತಾರು ವರ್ಷ ನಮ್ಮೊಂದಿಗೆ ಬದುಕಬೇಕಿತ್ತು. ಇದ್ದಕ್ಕಿಂದ್ದಂತೆ ನಮ್ಮಿಂದ ದೂರವಾಗಿದ್ದನ್ನು ನಂಬಲಾಗುತ್ತಿಲ್ಲ. ಅವರ ಕೊನೆಯ ಘಳಿಗೆಯು ಆಸ್ಪತ್ರೆಯಲ್ಲಿ ಅತ್ಯಂತ ನೋವಿನಿಂದ ಕೂಡಿತ್ತು’ ಎಂದು ಕಣ್ಣೀರಾದರು.

‘ಎಂ.ಜಿ. ಈ ನಾಡಿನಲ್ಲಿ ಸಾಂಸ್ಕೃತಿಕ ಜೀವಂತಿಕೆ ತುಂಬಿದರು.‌ ಜನಸಾಮಾನ್ಯರಲ್ಲೂ ಸಾಂಸ್ಕೃತಿಕ ಅಭಿರುಚಿ ತುಂಬಿದರು‌’ ಎಂದು ಹೇಳಿದರು.

ಸಾಹಿತಿ ಬಾ.ಮ. ಬಸವರಾಜಯ್ಯ ಮಾತನಾಡಿ, ‘ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅನೇಕರನ್ನು ಬೆಳೆಸಿದ ಕೀರ್ತಿ ಎಂ.ಜಿ. ಅವರಿಗೆ ಸಲ್ಲುತ್ತದೆ. ಭಾಷಾ ಕರ್ಮಿ, ರಂಗ ಕರ್ಮಿಯಾಗಿ ತಾವು ಸಾಗಿದ ದಾರಿಯಲ್ಲಿ ನಮ್ಮನ್ನೂ ನಡೆಸಿದ ಅವರ ವ್ಯಕ್ತಿತ್ವ ಅಪರೂಪದ್ದು’ ಎಂದು ಹೇಳಿದರು.

ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಎಚ್.ಅರುಣಕುಮಾರ್ ಮಾತನಾಡಿ, ‘ಎಂ.ಜಿ.ಈಶ್ವರಪ್ಪ ಎಲ್ಲರೊಂದಿಗೂ ಅತ್ಯಂತ ಮಾನವೀಯ ಸಂಬಂಧ ಇರಿಸಿಕೊಂಡಿದ್ದರು’ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ದಾದಾಪೀರ್ ನವಿಲೇಹಾಳ್ ಮಾತನಾಡಿ, ‘ಸಂಗೀತ, ಕ್ರೀಡೆ, ಆರೋಗ್ಯ, ಜಾನಪದ ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಎಂ.ಜಿ. ಮಾತನಾಡುತ್ತಿದ್ದರು. ಸರಳ, ನಗುಮೊಗದ ಅವರು, ಕನ್ನಡದ ಮೇಷ್ಟು ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿದ್ದರು’ ಎಂದು ಹೇಳಿದರು.

ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕ ವೈ.ವೃಷಭೇಂದ್ರಪ್ಪ, ರಂಗಭೂಮಿ ಕಲಾವಿದ ಚಿಂದೋಡಿ ಶಂಭುಲಿಂಗಪ್ಪ, ಸರ್.ಎಂ.ವಿ. ವಿದ್ಯಾಸಂಸ್ಥೆಯ ಸಂಸ್ಥಾಪಕ ಶ್ರೀಧರ್, ವನಿತಾ ಸಮಾಜದ ಮಲ್ಲಮ್ಮ, ಎಂ.ಜಿ.ಈಶ್ವರಪ್ಪ ಅವರ ಒಡನಾಡಿಗಳಾದ ನಾ.ರೇವನ್, ಮಂಜುನಾಥಸ್ವಾಮಿ, ಎಚ್.ಬಿ.ಮಂಜುನಾಥ್, ಆನಂದ್ ಋಗ್ವೇದಿ, ಶೈಲಜಾ, ಸುರೇಶ್, ಹೆಗ್ಗರೆ ರಂಗಪ್ಪ ಹಾಗೂ ಇನ್ನಿತರರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಾಮದೇವಪ್ಪ ನಿರೂಪಿಸಿದರು. ಕಸಾಪ ಚನ್ನಗಿರಿ ತಾಲ್ಲೂಕು ಘಟಕದ ಅಧ್ಯಕ್ಷ ಎಲ್‌.ಜಿ. ಮಧುಕುಮಾರ್ ಉಪಸ್ಥಿತರಿದ್ದರು.

ಅಂತಿಮ ದರ್ಶನ ಪಡೆದ ಗಣ್ಯರು:

ನಗರದ ಶಾಮನೂರು ರುದ್ರಭೂಮಿಯಲ್ಲಿ ಭಾನುವಾರ ಮಧ್ಯಾಹ್ನ ಎಂ.ಜಿ.ಈಶ್ವರಪ್ಪ ಅವರ ಅಂತ್ಯಕ್ರಿಯೆ ನಡೆಯಿತು. ಇದಕ್ಕೂ ಮುನ್ನ ಅವರ ನಿವಾಸದಲ್ಲಿ ಇರಿಸಿದ್ದ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಹಲವು ಗಣ್ಯರು ಪಡೆದರು. ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಶಿವಮೊಗ್ಗ ಬಸವ ಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಸಂಸದ ಜಿ.ಎಂ.ಸಿದ್ದೇಶ್ವರ ಶಾಸಕ ಬಿ.ಪಿ.ಹರೀಶ್ ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಲೋಕಸಭೆ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ್ ಸಾಹಿತಿಗಳಾದ ಕುಂ.ವೀರಭದ್ರಪ್ಪ ಬಿ.ರಾಜಶೇಖರಪ್ಪ ಲೋಕೇಶ್ ಅಗಸನಕಟ್ಟೆ ಕಂನಾಡಿಗ ನಾರಾಯಣ ಕೆ.ಎಸ್.ಈಶ್ವರಪ್ಪ ನಾಗರಾಜ ಸಿರಿಗೆರೆ ಎನ್.ಟಿ.ಮಂಜುನಾಥ್ ಎಸ್.ಎಸ್.ಸಿದ್ಧರಾಜು ಪ್ರಮುಖರಾದ ಅಣಬೇರು ರಾಜಣ್ಣ ಅಥಣಿ ವೀರಣ್ಣ ಸುಮತಿ ಜಯಪ್ಪ ರಿಪಬ್ಲಿಕ್ ಪರಮೇಶ್ವರಪ್ಪ ಕಕ್ಕರಗೊಳ್ಳ ಪರಮೇಶ್ವರಪ್ಪ ಮಲ್ಲಿಕಾರ್ಜುನ್ ಕಲಮರಹಳ್ಳಿ ಹಾಗೂ ಇನ್ನಿತರರು ಅಂತಿಮ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.