ಹೊನ್ನಾಳಿ: ಯಾವುದೇ ಸೌಲಭ್ಯಗಳ ಹಣ ಫಲಾನುಭವಿಗಳಿಗೆ ನೇರವಾಗಿ ತಲುಪಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರದ ಆರಂಭಿಸಿದ ಜನ್‌ಧನ್ ಖಾತೆ ತೆರೆಯುವ ಯೋಜನೆ ಸಫಲವಾಗಿದ್ದು, ಇದರ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಭಿಪ್ರಾಯಪಟ್ಟರು.
ಗೊಲ್ಲರಹಳ್ಳಿ ಗ್ರಾಮದಲ್ಲಿ ವಿಕಸಿತ ಭಾರತಕ್ಕಾಗಿ ಗ್ರಾಮಚಲೋ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ಹಣ, ರಿಯಾಯಿತಿ ದರದಲ್ಲಿ ರಸಗೊಬ್ಬರ ಪೂರೈಸಿದರು ಎಂದರು.
‘ಪ್ರತಿಪಕ್ಷಗಳು ಮಾತೆತ್ತಿದರೆ ಎಲ್ಲರ ಬ್ಯಾಂಕ್ ಖಾತೆಗಳಿಗೆ ₹15 ಲಕ್ಷ ಹಾಕುತ್ತೇವೆ ಎಂದು ಮೋದಿ ಹೇಳಿದ್ದರು ಎಂಬುದಾಗಿ ಸುಳ್ಳು ಆರೋಪ ಮಾಡುತ್ತಿವೆ. ಅದರ ಒಂದು ಸಣ್ಣ ವಿಡಿಯೊ ಇದ್ದರೆ ತೋರಿಸಲಿ‘ ಎಂದು ಅವರು ಸವಾಲು ಹಾಕಿದರು.
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ನಾವೆಲ್ಲರೂ ಪ್ರತಿ ಮನೆ ಮನೆಗೆ ಹೋಗಿ ಕೇಂದ್ರ ಸರ್ಕಾರ ನೀಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು. ಈ ವಿಷಯದಲ್ಲಿ ಯಾರೂ ಮೈಮರೆಯಬಾರದು ಎಂದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಜೆ.ಕೆ.ಸುರೇಶ್, ಬಿಜೆಪಿ ರಾಜ್ಯ ಒಬಿಸಿ ಘಟಕದ ಉಪಾಧ್ಯಕ್ಷ ಕುಬೇಂದ್ರಪ್ಪ, ಮಾರುತಿನಾಯ್ಕ, ದೊಡ್ಡೇರಿ ರಾಜಣ್ಣ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.