ADVERTISEMENT

ದಾವಣಗೆರೆ: ಮೂಲ ಸೌಲಭ್ಯಕ್ಕೆ ಒತ್ತಾಯಿಸಿ ಮನವಿ

​ಪ್ರಜಾವಾಣಿ ವಾರ್ತೆ
Published 19 ಮೇ 2024, 6:23 IST
Last Updated 19 ಮೇ 2024, 6:23 IST
ಸ್ಥಳಾಂತರಗೊಂಡ ರಾಮಕೃಷ್ಣ ಹೆಗಡೆ ನಗರದ ನಿವಾಸಿಗಳಿಗೆ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ದಾವಣಗೆರೆಯಲ್ಲಿ ಮಹಾನಗರ ಪಾಲಿಕೆ ಉಪ ಆಯುಕ್ತರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಸ್ಥಳಾಂತರಗೊಂಡ ರಾಮಕೃಷ್ಣ ಹೆಗಡೆ ನಗರದ ನಿವಾಸಿಗಳಿಗೆ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ದಾವಣಗೆರೆಯಲ್ಲಿ ಮಹಾನಗರ ಪಾಲಿಕೆ ಉಪ ಆಯುಕ್ತರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.   

ದಾವಣಗೆರೆ: ನಗರ ಹೊರವಲಯದ ಬಾತಿ ಸಮೀಪದ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಹಿಂಭಾಗಕ್ಕೆ ಸ್ಥಳಾಂತರಿಸಲಾದ ರಾಮಕೃಷ್ಣ ಹೆಗಡೆ ನಗರದ ನಿವಾಸಿಗಳಿಗೆ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಶನಿವಾರ ಮನವಿ ಸಲ್ಲಿಸಲಾಯಿತು.

ಎತ್ತಂಗಡಿಗೊಂಡ ರಾಮಕೃಷ್ಣ ಹೆಗಡೆ ನಗರ ನಿವಾಸಿಗಳ ಸಮಿತಿ, ಸ್ಲಂ ಜನರ ಸಂಘಟನೆ–ಕರ್ನಾಟಕ, ಸ್ಲಂ ಮಹಿಳೆಯರ ಸಂಘಟನೆ, ದಾವಣಗೆರೆ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಸಂಘಟನೆಗಳ ಮುಖಂಡರು ಮಹಾನಗರ ಪಾಲಿಕೆ ಉಪ ಆಯುಕ್ತೆ ನಳಿನಿ ಅವರನ್ನು ಒತ್ತಾಯಿಸಿದರು.

‘ವಸತಿ ಸೌಲಭ್ಯ ಕಲ್ಪಿಸುವವರೆಗೂ ಸಂತ್ರಸ್ತರಿಗೆ ಬಾಡಿಗೆಗೆ ಮನೆಗಳನ್ನು ಒದಗಿಸಬೇಕು. ಬಾಡಿಗೆ ಹಣವನ್ನು ಪಾಲಿಕೆಯೇ ಭರಿಸಬೇಕು. ಸಂತ್ರಸ್ತರಿಗೆ ತಕ್ಷಣವೇ ಜಾಗ ಹಾಗೂ ಮನೆಗಳ ಹಕ್ಕುಪತ್ರ ನೀಡಬೇಕು. ಹೆಗಡೆ ನಗರದ 500 ಕುಟುಂಬಗಳ ಸಂತ್ರಸ್ತರಿಗೆ ಮನೆ ಕಟ್ಟಿಕೊಡಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ADVERTISEMENT

ರಸ್ತೆ, ಚರಂಡಿ, ಒಳಚರಂಡಿ, ನೀರು, ನ್ಯಾಯಬೆಲೆ ಅಂಗಡಿ, ಆಸ್ಪತ್ರೆ, ಶಾಲೆ, ಶೌಚಾಲಯ, ಸಾರಿಗೆ ಸೌಲಭ್ಯ ಕಲ್ಪಿಸಬೇಕು. ಎಷ್ಟು ದಿನಗಳಲ್ಲಿ ಸಂತ್ರಸ್ತರಿಗೆ ಮನೆ ಕಟ್ಟಿಕೊಡುತ್ತೇವೆ ಎಂಬ ಬಗ್ಗೆ ಪಾಲಿಕೆ ಲಿಖಿತ ರೂಪದಲ್ಲಿ ನೀಡಬೇಕು. ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ, ನಗರ ಪಾಲಿಕೆ ಆಯುಕ್ತರ ಸಮ್ಮುಖದಲ್ಲಿ ಸಂತ್ರಸ್ತರ ಕುಂದುಕೊರತೆ ಸಭೆ ಆಯೋಜಿಸಬೇಕು’ ಎಂದು ಮುಖಂಡರು ಮನವಿ ಮಾಡಿದರು.

ತಾತ್ಕಾಲಿಕ ಟೆಂಟ್ ಸೌಲಭ್ಯ

ಸ್ಥಳಾಂತರಗೊಂಡಿದ್ದ ನಿವಾಸಿಗಳು ಗಾಳಿ, ಮಳೆಯಿಂದಾಗಿ ಬಿದ್ದ ಶೆಡ್‌ಗಳ ಸಾಮಗ್ರಿಯೊಂದಿಗೆ ಹಳೇ ಹೆಗಡೆ ನಗರಕ್ಕೆ ವಾಪಸ್ ಬಂದ ಹಿನ್ನೆಲೆಯಲ್ಲಿ ಸ್ಥಳಾಂತರಗೊಂಡ ಜಾಗದಲ್ಲೇ ತಾತ್ಕಾಲಿಕವಾಗಿ ಒಂದೇ ಕಡೆ ಟೆಂಟ್‌ಗಳನ್ನು ನಿರ್ಮಿಸುತ್ತಿದ್ದಾರೆ.

‘ಹೆಗಡೆ ನಗರದ ನಿವಾಸಿಗಳಿಗೆ ಮೂಲಸೌಲಭ್ಯ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಚುನಾವಣೆ ನೀತಿ ಸಂಹಿತೆ ಕಾರಣದಿಂದ ಮುಂದೂಡುತ್ತಾ ಬರಲಾಗಿದೆ. ಈಗ ಮಳೆ–ಗಾಳಿ ಬಂದರೆ ಸಂತ್ರಸ್ತರು ಎಲ್ಲಿ ಹೋಗಬೇಕು. ಕೂಡಲೇ ಸಭೆ ಕರೆದು ನಮ್ಮ ಹಕ್ಕೊತ್ತಾಯಗಳ ಬಗ್ಗೆ ಚರ್ಚೆ ನಡೆಸಬೇಕು’ ಎಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾಖಾನಂ ಆಗ್ರಹಿಸಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರೆಗೆರೆ ಚಂದ್ರು, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೆಗ್ಗೆರೆ ರಂಗಪ್ಪ, ಸ್ಲಂ ಜನರ ಸಂಘನೆ–ಕರ್ನಾಟಕದ ಕರಿಬಸಪ್ಪ ಎಂ., ಶಿರೀನ್ ಬಾನು, ಹಾಫಿಜಾ ಬಾನು, ನೂರ್ ಫಾತಿಮಾ, ನಿವಾಸಿಗಳಾದ ಅಸ್ಲಂ, ಸುಹೀಲ್, ಮೊಹಮ್ಮದ್ ಅಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.