ADVERTISEMENT

‘ಇನಾಂ’ ಭೂಮಿ ಹಿಂದೂ ದೇಗುಲಕ್ಕೆ ಮರಳಿಸಿ: ಅಶೋಕ ಹಾರನಹಳ್ಳಿ ಆಗ್ರಹ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 10:30 IST
Last Updated 16 ನವೆಂಬರ್ 2024, 10:30 IST
ಅಶೋಕ ಹಾರನಹಳ್ಳಿ
ಅಶೋಕ ಹಾರನಹಳ್ಳಿ   

ದಾವಣಗೆರೆ: ದೇಗುಲ ಹಾಗೂ ಅರ್ಚಕರಿಂದ ಸ್ವಾಧೀನಕ್ಕೆ ಪಡೆದ ಸುಮಾರು 8 ಸಾವಿರ ಎಕರೆ ‘ಇನಾಂ’ ಭೂಮಿ ಸರ್ಕಾರದ ಬಳಿಯೇ ಇದೆ. ಹಿಂದೂ ಧರ್ಮದ ಏಳಿಗೆಯ ದೃಷ್ಟಿಯಿಂದ ಈ ಭೂಮಿಯನ್ನು ದೇಗುಲಗಳಿಗೆ ಮರಳಿಸಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಆಗ್ರಹಿಸಿದರು.

‘ದೇಗುಲ ಹಾಗೂ ಅರ್ಚಕರಿಗೆ ರಾಜರು ಇನಾಂ ಭೂಮಿ ನೀಡಿದ್ದರು. ಹಿಂದೂ ಧಾರ್ಮಿಕ ಸಂಸ್ಥೆಯ ಭೂಮಿಯನ್ನು ಸ್ವಾಧೀನಕ್ಕೆ ಪಡೆದ ಸರ್ಕಾರ, ‘ವಕ್ಫ್‌ ಮಂಡಳಿ’ಯ ಆಸ್ತಿಯನ್ನು ಹಾಗೆ ಉಳಿಸಿತು. ವಕ್ಫ್‌ ಭೂಮಿ ಸಂರಕ್ಷಣೆಗೆ ಮುಂದಾಗಿರುವ ಸರ್ಕಾರ ಹಿಂದೂ ದೇಗುಲಗಳ ಏಳಿಗೆಗೆ ಏಕೆ ಕಾಳಜಿ ತೋರುತ್ತಿಲ್ಲ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ವಕ್ಫ್‌ ಮಂಡಳಿಗೆ ಇರುವ ಸ್ವಾಯತ್ತತೆ ಮುಜರಾಯಿ ಇಲಾಖೆಗೆ ನೀಡಿಲ್ಲ. ‘ಎ’ ದರ್ಜೆಯ ದೇಗುಲದ ಆದಾಯ ಸರ್ಕಾರ ಹೋಗುತ್ತಿದೆ. ಇದನ್ನು ಸರ್ಕಾರ ಹಿಂದೂ ಧರ್ಮದ ಏಳಿಗೆಗೆ ಬಳಕೆ ಮಾಡುತ್ತಿಲ್ಲ. ಚರ್ಚ್‌ ಹಾಗೂ ಮಸೀದಿಗೆ ಇಲ್ಲದ ನಿಯಂತ್ರಣವನ್ನು ದೇಗುಲಗಳ ಮೇಲೆ ಹೇರಲಾಗಿದೆ. ಹಿಂದೂ ದೇಗುಲಗಳಿಗೂ ಸ್ವಾಯತ್ತತೆ ನೀಡುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ADVERTISEMENT

‘ಇಡಬ್ಲ್ಯುಎಸ್‌’: ಹೈಕೋರ್ಟ್‌ ಮೊರೆ ಹೋಗುತ್ತೇವೆ’

ಆರ್ಥಿಕ ದುರ್ಬಲ ವರ್ಗದವರಿಗೆ (ಇಡಬ್ಲ್ಯುಎಸ್‌) ಕೇಂದ್ರ ಸರ್ಕಾರ ಕಲ್ಪಿಸಿದ ಶೇ 10ರಷ್ಟು ಮೀಸಲಾತಿಯನ್ನು ಅನುಷ್ಠಾನಕ್ಕೆ ತರುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ರಾಜ್ಯ ಸರ್ಕಾರದ ಧೋರಣೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ತಿಳಿಸಿದರು.

‘ಇಡಬ್ಲ್ಯುಎಸ್‌ ಸವಲತ್ತನ್ನು ಕೇಂದ್ರ ಸರ್ಕಾರ 2019ರಲ್ಲಿ ಕಲ್ಪಿಸಿದೆ. ರಾಜ್ಯದಲ್ಲಿ ಈ ಸೌಲಭ್ಯ ನೀಡಲು ಯಾವುದೇ ಪಕ್ಷ ಆಸಕ್ತಿ ತೋರುತ್ತಿಲ್ಲ. ಸರ್ಕಾರದ ಗಮನ ಸೆಳೆಯುವ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ಹೀಗಾಗಿ, ನ್ಯಾಯಾಂಗ ಹೋರಾಟಕ್ಕೆ ಮುಂದಾಗುತ್ತಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.