ADVERTISEMENT

ನೀತಿ ಸಂಹಿತೆಯ ಪರಾಮರ್ಶೆ ಅಗತ್ಯ: ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಅಣಬೇರಿನಲ್ಲಿ ದೇವಸ್ಥಾನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 6:15 IST
Last Updated 16 ನವೆಂಬರ್ 2021, 6:15 IST
ಅಣಬೇರಿನಲ್ಲಿ ಭಾನುವಾರ ದೇವಸ್ಥಾನಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಾಗಿನೆಲೆ ಕನಕ ಗುರು ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಮಾತನಾಡಿದರು
ಅಣಬೇರಿನಲ್ಲಿ ಭಾನುವಾರ ದೇವಸ್ಥಾನಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಾಗಿನೆಲೆ ಕನಕ ಗುರು ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಮಾತನಾಡಿದರು   

ದಾವಣಗೆರೆ: ಚುನಾವಣೆಗಳ ನೀತಿ ಸಂಹಿತೆ ಹೆಸರಿನಲ್ಲಿ ಹಳ್ಳಿಯಿಂದ ದಿಲ್ಲಿವರೆಗೆ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುವ ಹಿನ್ನೆಲೆಯಲ್ಲಿ ನೀತಿ ಸಂಹಿತೆ ವಿಚಾರದಲ್ಲಿ ಕೇಂದ್ರ ಚುನಾವಣಾ ಆಯೋಗ ಪರಾಮರ್ಶೆ ಮಾಡಿ, ನೀತಿ ಸಂಹಿತೆ ಮಾರ್ಪಾಡಿಗೆ ಮುಂದಾಗುವುದು ಸೂಕ್ತ ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ತಾಲ್ಲೂಕಿನ ಅಣಬೇರು ಗ್ರಾಮದಲ್ಲಿ ಭಾನುವಾರ ಈಶ್ವರ, ಆಂಜನೇಯ ಸ್ವಾಮಿ, ಕುಕ್ವಾಡೇಶ್ವರಿ ದೇವಿ ದೇವಸ್ಥಾನಗಳ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿಯಿಂದ ಲೋಕಸಭೆ ವರೆಗೆ ಚುನಾವಣೆ ಬಂದರೆ ನೀತಿ ಸಂಹಿತೆ ಜಾರಿಗೊಂಡು, ಅಭಿವೃದ್ಧಿ ಕಾರ್ಯಗಳು ತಿಂಗಳುಗಟ್ಟಲೇ ಕುಂಠಿತವಾಗುತ್ತಿರುವುದನ್ನೂ ಆಯೋಗ ಗಮನಿಸಲಿ ಎಂದರು.

ADVERTISEMENT

ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮತದಾನದ ಹಕ್ಕು ಇದ್ದು, ಪ್ರತಿಯೊಬ್ಬರಿಗೂ ತಮ್ಮ ಅಮೂಲ್ಯ ಮತದ ಬಗ್ಗೆ ಅರಿವಿದೆ. ಯಾರೋ ಆಶ್ವಾಸನೆ ಕೊಟ್ಟ ಕ್ಷಣ ಬದಲಾಗುವಷ್ಟು ಮತದಾರರೇನೂ ಅಪ್ರಬುದ್ಧರಲ್ಲ. ಮತದಾರರೂ ಪ್ರಬುದ್ಧರಿದ್ದು, ಯಾರನ್ನು ಆಯ್ಕೆ ಮಾಡಬೇಕೆಂಬುದನ್ನು ತೀರ್ಮಾನಿಸುವಷ್ಟು ಸಶಕ್ತರಾಗಿದ್ದಾರೆ ಎಂದು ವಿವರಿಸಿದರು.

ಭರಮಸಾಗರ ಭಾಗದ ಕೆರೆಗಳನ್ನು ತುಂಬಿಸುವ ಯೋಜನೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಸರ್ಕಾರಗಳು, ಜನಪ್ರತಿನಿಧಿಗಳು ಪಕ್ಷಾತೀತವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ದೇವಸ್ಥಾನಗಳ ನಿರ್ಮಾಣಕ್ಕೆ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಸಚಿವರು ಹೀಗೆ ಜನ ಪ್ರತಿನಿಧಿಗಳು, ಸರ್ಕಾರದ ಅನುದಾನವನ್ನು ನೆಚ್ಚಿಕೊಂಡು ಕೂಡಬಾರದು. ಆಯಾ ಗ್ರಾಮಸ್ಥರು, ಮುಖಂಡರು, ಭಕ್ತರೇ ದೇಣಿಗೆ ಸಂಗ್ರಹಿಸಿಕೊಂಡು ದೇವಸ್ಥಾನ ನಿರ್ಮಿಸಬೇಕು. ಅಣಬೇರು ಗ್ರಾಮಸ್ಥರು ಎಲ್ಲರೂ ಕೂಡಿ, ಮೂರು ದೇವಸ್ಥಾನಗಳನ್ನು ನಿರ್ಮಿಸುವ ಮೂಲಕ ಸಾಮರಸ್ಯದ ಸಂದೇಶ ಸಾರಿದ್ದಾರೆ ಎಂದು ಸ್ವಾಮೀಜಿ ಶ್ಲಾಘಿಸಿದರು.

ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ‘ಸಾಮಾಜಿಕ ಸಾಮರಸ್ಯದಿಂದ ಇರಬೇಕು, ಎಲ್ಲರೂ ಕೈಜೋಡಿಸಿ, ಕೆಲಸ ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಅಣಬೇರು ಗ್ರಾಮಸ್ಥರು ಸಾಧಿಸಿ ತೋರಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ‘ಅಣಬೇರು ಹಾಗೂ ಸುತ್ತಮುತ್ತಲಿನ 3-4 ಸಾವಿರ ಜನ ಇಲ್ಲಿ ಸೇರಿರುವುದು ಗ್ರಾಮಸ್ಥರ ಒಗ್ಗಟ್ಟು, ಸಹಬಾಳ್ವೆಯನ್ನು ತೋರಿಸುತ್ತದೆ. ಸದ್ಯಕ್ಕೆ ಚುನಾವಣೆ ನೀತಿ ಸಂಹಿತೆ ಇದ್ದು, ಈ ಭಾಗದ ಜನರ ಬೇಡಿಕೆ ಬಗ್ಗೆ ನಮಗೆ ಅರಿವಿದೆ. ಮುಂದಿನ ದಿನಗಳಲ್ಲಿ ನಿಮ್ಮ ಊರಿಗೆ ಏನಾದರೂ ಅನುಕೂಲ ಮಾಡಿಕೊಡಲಾಗುವುದು’ ಎಂದು ಭರವಸೆ ನೀಡಿದರು.

ಮಾಯಕೊಂಡ ಶಾಸಕ ಪ್ರೊ. ಎನ್.ಲಿಂಗಣ್ಣ ಶುಭ ಹಾರೈಸಿದರು. ಹೆಬ್ಬಾಳ್ ವಿರಕ್ತ ಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಣಬೇರು ಜೀವನಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಅಣಬೇರು ಪಾರ್ವತಮ್ಮ, ಶೈಲಜಾ ಬಸವರಾಜ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಮಂಜುಳಾ ಶಿವಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಅವರೂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.