ದಾವಣಗೆರೆ: ಲಾಕ್‌ಡೌನ್ ಪರಿಣಾಮ ಸಾಕಷ್ಟು ಪ್ರಮಾಣದಲ್ಲಿ ಕಾರ್ಮಿಕರು ಬಾರದೇ ಇರುವುದರಿಂದ ಜಿಲ್ಲೆಯ ಅಕ್ಕಿ ಗಿರಣಿಗಳಲ್ಲಿ ಅಕ್ಕಿ ಉತ್ಪಾದನೆ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಜೊತೆಗೆ ಅಕ್ಕಿ ತೌಡು ಹಾಗೂ ಭತ್ತದ ಬೂದಿ ಸಕಾಲಕ್ಕೆ ವಿಲೇವಾರಿಯಾಗದೇ ಇರುವುದು ಸಹ ಮಾಲೀಕರನ್ನು ಚಿಂತೆಗೀಡು ಮಾಡಿದೆ.
ಜೀವನಾವಶ್ಯಕ ವಸ್ತುವಾದ ಅಕ್ಕಿ ಪೂರೈಕೆಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಜಿಲ್ಲಾಡಳಿತದ ಸೂಚನೆಯಂತೆ ಜಿಲ್ಲೆಯಲ್ಲಿ ಅಕ್ಕಿ ಗಿರಣಿಗಳು ಎರಡು ದಿನಗಳಿಂದ ಕಾರ್ಯಾರಂಭ ಮಾಡಿವೆ. ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಅಕ್ಕಿ ಗಿರಣಿಗಳಿವೆ. ಇವುಗಳ ಪೈಕಿ ಬಹುತೇಕ ಅಕ್ಕಿ ಗಿರಣಿಗಳು ಕಾರ್ಯಾರಂಭ ಮಾಡಿದ್ದರೆ, ಇನ್ನು ಕೆಲವು ಸಿದ್ಧತೆ ಮಾಡಿಕೊಳ್ಳುತ್ತಿವೆ.
ಕಾರ್ಮಿಕರ ಕೊರತೆ: ‘ಅಕ್ಕಿ ಗಿರಣಿಗಳಲ್ಲಿ ಬಿಹಾರ ಹಾಗೂ ಉತ್ತರ ಕನ್ನಡದ ಮುರುಡೇಶ್ವರದ ಕಾರ್ಮಿಕರು ಕೆಲಸಕ್ಕೆ ಬರುತ್ತಿದ್ದರು. ಕೊರೊನಾ ವೈರಸ್ ಭೀತಿಯಿಂದ ಲಾಕ್‌ಡೌನ್ ಮಾಡಿದ ಪರಿಣಾಮ ಹಲವು ಕಾರ್ಮಿಕರು ತಮ್ಮ ಊರಿಗೆ ತೆರಳಿದ್ದಾರೆ. ಹೊರ ಜಿಲ್ಲೆಗಳ ಕಾರ್ಮಿಕರು ಇನ್ನೂ ಮರಳಿ ಬಂದಿಲ್ಲ. ಸ್ಥಳೀಯ ಕಾರ್ಮಿಕರನ್ನು ಮಾತ್ರ ಬಳಸಿಕೊಂಡು ಮಿಲ್ ಆರಂಭಿಸಿದ್ದೇವೆ. ಹೀಗಾಗಿ ಶೇ 30ರಷ್ಟು ಉತ್ಪಾದನೆ ಕಡಿಮೆಯಾಗುತ್ತಿದೆ’ ಎಂದು ಅಕ್ಕಿ ಗಿರಣಿ ಮಾಲೀಕರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಬಿ. ಚಿದಾನಂದಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಅಕ್ಕಿಗೆ ಬೇಡಿಕೆ ಇದ್ದಾಗ ಮೂರು ಶಿಫ್ಟ್‌ಗಳಲ್ಲಿ ದಿನದ 24 ಗಂಟೆಯೂ ಮಿಲ್ ನಡೆಸುತ್ತಿದ್ದೆವು. ಈಗ ಕಾರ್ಮಿಕರ ಸಮಸ್ಯೆ ಇರುವುದರಿಂದ ದಿನಕ್ಕೆ 10ರಿಂದ 12 ಗಂಟೆಗಳ ಕಾಲ ಮಾತ್ರ ಅಕ್ಕಿ ಮಾಡುತ್ತಿದ್ದೇವೆ. ಸಾಮಾನ್ಯ ದಿನಗಳಲ್ಲಿ 25 ಕೆ.ಜಿ. ತೂಕದ 800ಕ್ಕೂ ಹೆಚ್ಚು ಚೀಲ ಅಕ್ಕಿ ತಯಾರಿಸುತ್ತಿದ್ದೆವು. ಈಗ 500ರಿಂದ 600 ಚೀಲ ಅಕ್ಕಿ ಮಾತ್ರ ತಯಾರಿಸಲಾಗುತ್ತದೆ’ ಎಂದು ಮಲೇಬೆನ್ನೂರಿನ ವೀರಭದ್ರೇಶ್ವರ ರೈಸ್ ಆ್ಯಂಡ್ ಫ್ಲೋರ್ ಮಿಲ್‌ನ ಮಾಲೀಕರೂ ಆಗಿರುವ ಚಿದಾನಂದಪ್ಪ ವಿವರಿಸಿದರು.
‘ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಿಲ್‌ನಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಕಾರ್ಮಿಕರು ಮಿಲ್‌ನ ಒಳಗೆ ಬರುವಾಗ ಹಾಗೂ ಹೊರಗೆ ಹೋಗುವಾಗ ಸೋಪು ಹಚ್ಚಿಕೊಂಡು ಕೈ ತೊಳೆದುಕೊಳ್ಳುವ ವ್ಯವಸ್ಥೆ ಮಾಡಿದ್ದೇವೆ. ಎಲ್ಲರೂ ಮಾಸ್ಕ್ ಹಾಕಿಕೊಂಡೇ ಕೆಲಸ ಮಾಡುತ್ತಾರೆ’ ಎಂದೂ ಅವರು ತಿಳಿಸಿದರು.
ಅಕ್ಕಿ ತೌಡಿನ ಸಮಸ್ಯೆ: ‘ರೈಸ್ ಮಿಲ್ ಆರಂಭಿಸಿದ್ದೇವೆ. ಒಂದು ಕ್ವಿಂಟಲ್ ಭತ್ತಕ್ಕೆ ಸುಮಾರು 8 ಕೆ.ಜಿ. ಅಕ್ಕಿ ತೌಡು (ರೈಸ್ ಬ್ರಾನ್) ಬರುತ್ತದೆ. ಇದನ್ನು 24 ಗಂಟೆಯೊಳಗೆ ಎಣ್ಣೆ ತಯಾರಿಸುವ ಫ್ಯಾಕ್ಟರಿಗೆ ಕಳುಹಿಸಿಕೊಟ್ಟರೆ ಅದನ್ನು ಖಾದ್ಯ ತೈಲವನ್ನಾಗಿ ಬಳಸಲು ಸಾಧ್ಯವಾಗಲಿದೆ. ತುಮಕೂರು, ಕೊಪ್ಪಳದಲ್ಲಿ ಅಕ್ಕಿ ತೌಡಿನ ಎಣ್ಣೆ ತಯಾರಿಸುವ ಫ್ಯಾಕ್ಟರಿಗಳು ಹೆಚ್ಚಿವೆ. ಅವು ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿಲ್ಲ. ಹೀಗಾಗಿ ಅಕ್ಕಿ ತೌಡುಗಳು ಹೋಗುತ್ತಿಲ್ಲ. ಅಡುಗೆ ಎಣ್ಣೆಗೆ ಬಳಕೆಯಾಗದೇ ಇರುವ ಅಕ್ಕಿ ತೌಡಿಗೆ ಕಡಿಮೆ ಬೆಲೆ ಸಿಗುತ್ತಿದೆ’ ಎಂದು ಚಿದಾನಂದಪ್ಪ ಅಳಲು ತೋಡಿಕೊಂಡರು.
‘ಈ ಮೊದಲು ಒಂದು ಕ್ವಿಂಟಲ್ ಅಕ್ಕಿ ತೌಡಿಗೆ ₹ 2,200ರವರೆಗೂ ದರ ಸಿಗುತ್ತಿತ್ತು. ಈಗ ₹ 1,600ಕ್ಕೆ ಕುಸಿದಿದೆ. ಅಕ್ಕಿ ತೌಡಿಗೆ ಒಳ್ಳೆಯ ಬೆಲೆ ಸಿಕ್ಕರೆ ಮಾತ್ರ ನಾವೂ ರೈತರ ಭತ್ತಕ್ಕೆ ಹೆಚ್ಚಿನ ಬೆಲೆ ನೀಡಲು ಸಾಧ್ಯ. ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಬೆಲೆ ಕೊಟ್ಟರೆ ಮಾತ್ರ ರೈತರು ನಮಗೆ ಭತ್ತ ಕೊಡುತ್ತಾರೆ. 15 ದಿನಗಳಲ್ಲಿ ಹೊಸ ಭತ್ತ ಮಾರುಕಟ್ಟೆಗೆ ಬರಲಿದೆ. ಹೆಚ್ಚಿನ ಲಾಭ ಸಿಗದಿದ್ದರೂ ಅಷ್ಟರೊಳಗೆ ದಾಸ್ತಾನು ಇರುವ ಹಳೆಯ ಭತ್ತವನ್ನು ಖಾಲಿ ಮಾಡಿಕೊಳ್ಳುವುದು ಅನಿವಾರ್ಯ’ ಎನ್ನುತ್ತಾರೆ ಅಕ್ಕಿ ಗಿರಣಿ ಮಾಲೀಕರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೋಗುಂಡಿ ಬಕ್ಕೇಶಪ್ಪ.
ಬೂದಿ ಸಾಗಾಟದ ಸಮಸ್ಯೆ
‘ಅಕ್ಕಿ ಮಾಡುವಾಗ ಹೊರ ಬರುವ ಎರಡು–ಮೂರು ದಿನಗಳ ಬೂದಿಯನ್ನಷ್ಟೇ ಮಿಲ್ ಆವರಣದಲ್ಲಿ ಇಟ್ಟುಕೊಳ್ಳಲು ಜಾಗ ಇರುತ್ತದೆ. ಬೂದಿಯನ್ನು ಹರಪನಹಳ್ಳಿ, ಬಳ್ಳಾರಿಯ ಇಟ್ಟಂಗಿ ಭಟ್ಟಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡು ಹೋಗಲಾಗುತ್ತಿತ್ತು. ಈಗ ಲಾಕ್‌ಡೌನ್ ಇರುವುದರಿಂದ ಬೂದಿ ತೆಗೆದುಕೊಂಡು ಹೋಗಲು ಲಾರಿಗಳು ಬರುತ್ತಿಲ್ಲ. ಮಿಲ್ ನಡೆಯಬೇಕೆಂದರೆ ಬೂದಿ ಸಾಗಿಸಲು ಅವಕಾಶ ನೀಡಬೇಕು’ ಎಂದು ಕೋಗುಂಡಿ ಬಕ್ಕೇಶಪ್ಪ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.