ADVERTISEMENT

ದಾವಣಗೆರೆ: ರಿಂಗ್‌ ರಸ್ತೆ ಸಂಪೂರ್ಣಗೊಳಿಸಲು ‘ಧೂಡಾ’ ಯತ್ನ

ಬೇತೂರು–ಬಸಾಪುರ–ಪಿ.ಬಿ.ರಸ್ತೆ ಸಂಪರ್ಕ, ₹ 120 ಕೋಟಿ ಪ್ರಸ್ತಾವ ಸಲ್ಲಿಕೆ

ಜಿ.ಬಿ.ನಾಗರಾಜ್
Published 20 ನವೆಂಬರ್ 2024, 5:23 IST
Last Updated 20 ನವೆಂಬರ್ 2024, 5:23 IST
<div class="paragraphs"><p>ಸ್ಮಾರ್ಟ್‌ ಸಿಟಿ ಯೋಜನೆಯಡಿ ದಾವಣಗೆರೆಯ ರಿಂಗ್‌ ರಸ್ತೆ ಅಭಿವೃದ್ಧಿಗೊಂಡಿರುವುದು.</p></div>

ಸ್ಮಾರ್ಟ್‌ ಸಿಟಿ ಯೋಜನೆಯಡಿ ದಾವಣಗೆರೆಯ ರಿಂಗ್‌ ರಸ್ತೆ ಅಭಿವೃದ್ಧಿಗೊಂಡಿರುವುದು.

   

ದಾವಣಗೆರೆ: ನಗರದ ಹೊರವರ್ತುಲ (ರಿಂಗ್‌) ರಸ್ತೆ ಪೂರ್ಣಗೊಳಿಸುವ ಪ್ರಯತ್ನಕ್ಕೆ ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ಧೂಡಾ) ಮುಂದಾಗಿದ್ದು, ₹ 2 ಕೋಟಿ ವೆಚ್ಚದಲ್ಲಿ ಕಚ್ಚಾ ರಸ್ತೆ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ಆರಂಭಿಸಿದೆ. ವಾಹನ ಸಂಚಾರ ಯೋಗ್ಯ ಮಾರ್ಗ ಮೂರು ತಿಂಗಳಲ್ಲಿ ಸಿದ್ಧವಾಗುವ ನಿರೀಕ್ಷೆ ಇದೆ.

ಬಸಾಪುರ ಮಾರ್ಗವಾಗಿ ಬೇತೂರು ಹಾಗೂ ಪಿ.ಬಿ.ರಸ್ತೆ ಸಂಪರ್ಕಿಸುವ 6 ಕಿ.ಮೀ ಉದ್ದದ ರಿಂಗ್‌ ರಸ್ತೆ ನಿರ್ಮಾಣಕ್ಕೆ ₹ 120 ಕೋಟಿಯ ಯೋಜನೆ ಸಿದ್ಧಪಡಿಸಿದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ರಿಂಗ್‌ ರಸ್ತೆ ಪೂರ್ಣಗೊಳಿಸುವ ಅಗತ್ಯವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದೆ.

ADVERTISEMENT

ರಾಷ್ಟ್ರೀಯ ಹೆದ್ದಾರಿ –48ರ ಶಾಮನೂರು ಸಮೀಪದಿಂದ ಅಖ್ತರ್‌ ರಜಾ ವೃತ್ತದವರೆಗೆ ರಿಂಗ್‌ ರಸ್ತೆ ನಿರ್ಮಾಣವಾಗಿ ಬಹುದಿನ ಕಳೆದಿದೆ. ಮಾಗನಹಳ್ಳಿ ರಸ್ತೆ ವರೆಗೆ ಹೊರವರ್ತುಲ ರಸ್ತೆ ವಿಸ್ತರಿಸುವ ಪ್ರಯತ್ನಕ್ಕೆ ಇದ್ದ ಅಡತಡೆಗಳು ಈಗ ನಿವಾರಣೆಯಾಗಿವೆ. ಬೇತೂರು ರಸ್ತೆಯಿಂದ ಪಿ.ಬಿ.ರಸ್ತೆಯವರೆಗೆ ಬಾಕಿ ಉಳಿದಿರುವ ರಿಂಗ್ ರಸ್ತೆ ನಿರ್ಮಿಸಿದರೆ ಉದ್ದೇಶಿತ ಹೊರವರ್ತುಲ ರಸ್ತೆ ಪೂರ್ಣಗೊಳ್ಳಲಿದೆ. ಈ ನಿಟ್ಟಿನಲ್ಲಿ ‘ಧೂಡಾ’ ಕೈಗೊಂಡಿರುವ ನಿರ್ಧಾರ ಜನರಲ್ಲಿ ಆಶಾಭಾವನೆ ಮೂಡಿಸಿದೆ.

ಹೊರವರ್ತುಲ ರಸ್ತೆ ನಿರ್ಮಾಣ ಪೂರ್ಣಗೊಳ್ಳದಿರುವ ಕಾರಣಕ್ಕೆ ಜಗಳೂರು ಹಾಗೂ ಹರಪನಹಳ್ಳಿ ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ ತೊಂದರೆ ಉಂಟಾಗುತ್ತಿದೆ. ಈ ಮಾರ್ಗದಿಂದ ಬರುವ ವಾಹನಗಳು ನಗರ ಪ್ರವೇಶಿಸಿ ಮುಂದಕ್ಕೆ ಸಾಗಬೇಕಿದೆ. ಇದರಿಂದ ನಗರದಲ್ಲಿ ಸಂಚಾರ ದಟ್ಟಣೆಯ ಸಮಸ್ಯೆ ಸೃಷ್ಟಿಯಾಗುತ್ತಿದೆ. ಇದಕ್ಕೆ ಪರಿಹಾರೋಪಾಯ ಕಂಡುಕೊಳ್ಳುವ ಉದ್ದೇಶದಿಂದ ಹೊರವರ್ತುಲ ರಸ್ತೆಯ ರೂಪುರೇಷ ಸಿದ್ಧಪಡಿಸಿದರೂ ಇದು ಪೂರ್ಣಗೊಂಡಿರಲಿಲ್ಲ.

ಪಿ.ಬಿ.ರಸ್ತೆಯ ಗೋಶಾಲೆಯ ಸಮೀಪದಿಂದ ಬೇತೂರು–ಬಸಾಪುರದವರೆಗಿನ ಹೊರವರ್ತುಲ ರಸ್ತೆಗೆ ಅಗತ್ಯ ಭೂಮಿ ‘ಧೂಡಾ’ ಸ್ವಾಧೀನದಲ್ಲಿದೆ. ಈ ಮಾರ್ಗದಲ್ಲಿ ಹರಿಯುವ ಹಳ್ಳದ ಸಮೀಪದಲ್ಲಿ ಭೂಮಿ ಮೀಸಲಿಡಲಾಗಿದೆ. 30 ಮೀಟರ್‌ ಅಗಲದ ರಿಂಗ್‌ ರಸ್ತೆ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಬಾಕಿ ಇರುವ ಈ 6 ಕಿ.ಮೀ ರಸ್ತೆಯನ್ನು ಸುಸಜ್ಜಿತವಾಗಿ ನಿರ್ಮಿಸಲು ₹ 120 ಕೋಟಿಯ ಅಗತ್ಯವಿದೆ.

‘ಉದ್ದೇಶಿತ ಹೊರವರ್ತುಲ ರಸ್ತೆಯನ್ನು ಪೂರ್ಣಗೊಳಿಸುವುದಕ್ಕೆ ‘ಧೂಡಾ’ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಆರಂಭದಲ್ಲಿ ₹ 2 ಕೋಟಿ ವೆಚ್ಚದಲ್ಲಿ ಕಚ್ಚಾ ರಸ್ತೆ ನಿರ್ಮಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಕಾಮಗಾರಿ ಕೈಗೊಳ್ಳುವ ಸ್ಥಳದಲ್ಲಿ ಬೆಳೆದಿರುವ ಗಿಡ, ಜಾಲಿಯನ್ನು ತೆರವುಗೊಳಿಸಲಾಗುತ್ತಿದೆ’ ಎಂದು ‘ಧೂಡಾ’ ಆಯುಕ್ತ ಹುಲ್ಮನಿ ತಿಮ್ಮಣ್ಣ ತಿಳಿಸಿದರು.

ಹೆಗಡೆ ನಗರ: ಕಾಮಗಾರಿಗೆ ಸಿದ್ಧತೆ

ಹಳೆ ದಾವಣಗೆರೆ ವ್ಯಾಪ್ತಿಯ ರಾಮಕೃಷ್ಣ ಹೆಗಡೆ ನಗರದಲ್ಲಿ ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ರಿಂಗ್‌ ರಸ್ತೆ ಪೂರ್ಣಗೊಳಿಸುವ ಕಾಮಗಾರಿ ವಾರದಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಈ ಕಾಮಗಾರಿಯನ್ನು ₹ 5 ಕೋಟಿ ವೆಚ್ಚದಲ್ಲಿ ‘ಧೂಡಾ’ ಕೈಗೆತ್ತಿಕೊಳ್ಳುತ್ತಿದ್ದು, ಸಿದ್ಧತೆ ನಡೆಸಿದೆ.

ರಾಷ್ಟ್ರೀಯ ಹೆದ್ದಾರಿ– 48ರ ಶಾಮನೂರು ಬಳಿಯಿಂದ ಸಂಗೊಳ್ಳಿರಾಯಣ್ಣ ವೃತ್ತ, ರೈಲ್ವೆ ಮೇಲುಸೇತುವೆ ಮಾರ್ಗವಾಗಿ ಅಖ್ತರ್ ರಜಾ ವೃತ್ತದವರೆಗೆ ಈಗಾಗಲೇ ರಿಂಗ್ ರಸ್ತೆ ಇದೆ. ಇಲ್ಲಿಂದ ಮಾಗನಹಳ್ಳಿ ರಸ್ತೆ ಸಂಪರ್ಕಿಸುವ ಮಾರ್ಗದ ರಾಮಕೃಷ್ಣ ಹೆಗಡೆ ನಗರದಲ್ಲಿ 200 ಮೀಟರ್‌ನಷ್ಟು ರಸ್ತೆ ನಿರ್ಮಾಣಕ್ಕೆ ಗುಡಿಸಲು ತೆರವುಗೊಳಿಸುವುದು ಬಾಕಿ ಇತ್ತು. ತೆರವು ಕಾರ್ಯಾಚರಣೆ ಪೂರ್ಣಗೊಂಡಿದ್ದು, ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ.

ರಿಂಗ್ ರಸ್ತೆ ಪೂರ್ಣಗೊಳಿಸಲು ಹಳ್ಳದ ಪಕ್ಕದಲ್ಲಿರುವ ಬಫರ್‌ ವಲಯ ಸಾಕಾಗುತ್ತದೆ. ಒಂದೊಮ್ಮೆ ಹೆಚ್ಚುವರಿ ಭೂಮಿಯ ಅಗತ್ಯ ಬಿದ್ದರೆ ಭೂಸ್ವಾಧೀನಕ್ಕೂ ಸಿದ್ಧತೆ ಮಾಡಿಕೊಳ್ಳಲಾಗುವುದು
ಹುಲ್ಮನಿ ತಿಮ್ಮಣ್ಣ, ಆಯುಕ್ತ ‘ಧೂಡಾ’

ನಗರಕ್ಕೆ ಹೊರವರ್ತುಲ ರಸ್ತೆ

ದಾವಣಗೆರೆ ನಗರಕ್ಕೆ ಮತ್ತೊಂದು ವರ್ತುಲ ರಸ್ತೆ ನಿರ್ಮಾಣಕ್ಕೆ ನಗರ ಅಭಿವೃದ್ಧಿ ಯೋಜನೆಯಲ್ಲಿ (ಸಿಡಿಪಿ) ‘ಧೂಡಾ’ ರೂಪುರೇಷ ಸಿದ್ಧಪಡಿಸಿದೆ. ಇದು ಸಂಪೂರ್ಣ ನಗರದ ಹೊರಭಾಗದಲ್ಲಿ ನಿರ್ಮಾಣವಾಗಲಿದೆ.

‘ನಗರದ ಬೆಳವಣಿಗೆಯನ್ನು ಆಧರಿಸಿ ಅಭಿವೃದ್ಧಿ ಯೋಜನೆ ಸಿದ್ಧಪಡಿಸಲಾಗಿದೆ. ಹರಿಹರ ರಸ್ತೆಯ ಜೆಎಂಐಟಿಗೂ ಆಚೆಗೆ ವರ್ತುಲ ರಸ್ತೆಗೆ ಸ್ಥಳ ಗುರುತಿಸಲಾಗಿದೆ. ನಗರ ವಿಸ್ತರಣೆಯಾದಂತೆ ವರ್ತುಲ ರಸ್ತೆಯೂ ನಿರ್ಮಾಣವಾಗಲಿದೆ’ ಎಂದು ‘ಧೂಡಾ’ ಆಯುಕ್ತ ಹುಲ್ಮನಿ ತಿಮ್ಮಣ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.