ADVERTISEMENT

ಚನ್ನಗಿರಿ-ಭದ್ರಾವತಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಅಗೆತ

​ಪ್ರಜಾವಾಣಿ ವಾರ್ತೆ
Published 27 ಜನವರಿ 2024, 15:45 IST
Last Updated 27 ಜನವರಿ 2024, 15:45 IST
ಚನ್ನಗಿರಿ–ಭದ್ರಾವತಿ ರಾಜ್ಯ ಹೆದ್ದಾರಿಯಲ್ಲಿ ಇರುವ ಗೋಪನಾಳ್ ಗ್ರಾಮದ ಬಳಿ ರಸ್ತೆಯನ್ನು ಅಗೆದು ಬಿಟ್ಟಿರುವುದು
ಚನ್ನಗಿರಿ–ಭದ್ರಾವತಿ ರಾಜ್ಯ ಹೆದ್ದಾರಿಯಲ್ಲಿ ಇರುವ ಗೋಪನಾಳ್ ಗ್ರಾಮದ ಬಳಿ ರಸ್ತೆಯನ್ನು ಅಗೆದು ಬಿಟ್ಟಿರುವುದು   

ಚನ್ನಗಿರಿ: ತಾಲ್ಲೂಕಿನ ಚನ್ನಗಿರಿ-ಭದ್ರಾವತಿ ರಾಜ್ಯ ಹೆದ್ದಾರಿಯ ಗೋಪನಾಳ್ ಗ್ರಾಮದ ಬಳಿ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯನ್ನು ಇಲಾಖೆಯಿಂದ ಅನುಮತಿ ಪಡೆಯದೇ ಅಗೆಯಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಮಲ್ಪೆ-ಮೊಳಕಾಲ್ಮುರು ರಾಜ್ಯ ಹೆದ್ದಾರಿ ಇದಾಗಿದ್ದು, ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಎಡೆಬಿಡದೇ ಸಂಚರಿಸುತ್ತವೆ. ಈ ರಸ್ತೆಯನ್ನು ಈಚೆಗೆ  ನವೀಕರಣ ಮಾಡಲಾಗಿದೆ. ಆದರೆ, ಗೋಪನಾಳ್ ಗ್ರಾಮದ ಬಳಿ ಬೇಕಾಬಿಟ್ಟಿಯಾಗಿ ರಸ್ತೆ ಅಗೆದಿರುವುದರಿಂದ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ರಸ್ತೆ ಅಗೆದಿರುವುದು ಇನ್ನೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಂತೆ ಇಲ್ಲ ಎಂದು ತಿಳಿಸಿದ್ದಾರೆ.

ರಸ್ತೆ ನವೀಕರಣ ಮಾಡುವ ಸಮಯದಲ್ಲಿ ರೈತರಿಗಾಗಿ ಒಂದು ಕಡೆ ಪೈಪ್ ಲೈನ್ ಮಾಡಿಕೊಳ್ಳಲು ಲೋಕೋಪಯೋಗಿ ಇಲಾಖೆಯವರು ಅವಕಾಶ ಕಲ್ಪಿಸಿರುತ್ತಾರೆ. ಪೈಪ್ ಲೈನ್ ಅಳವಡಿಸಿದ ಸ್ಥಳದಿಂದ ರೈತರು ತಮ್ಮ ಜಮೀನುಗಳಿಗೆ ಪೈಪ್ ಲೈನ್ ಮಾಡಿಕೊಂಡು ಹೋಗಬೇಕಾಗಿರುತ್ತದೆ. ಆದರೆ, ರೈತರು ತಮಗೆ ಇಷ್ಟ ಬಂದ ರೀತಿಯಲ್ಲಿ ರಸ್ತೆಯನ್ನು ಅಗೆದು, ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದ್ದಾರೆ. ರಾತ್ರಿಯ ವೇಳೆ ರಸ್ತೆಯಲ್ಲಿ ಹೋಗುವ ವಾಹನಗಳು ಗುಂಡಿಯನ್ನು ಕಾಣದೇ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಗುಂಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಗೋಪನಾಳ್ ಗ್ರಾಮದ ವಾಸಿ, ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ರಾಜ್ಯ ಘಟಕದ ಅಧ್ಯಕ್ಷ ಆರ್. ಪುನೀತ್ ಕುಮಾರ್ ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.