ದಾವಣಗೆರೆ: ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಬಸ್ ಚಾಲನೆ ಮಾಡುವ ಚಾಲಕರ ವಿರುದ್ಧ ಪ್ರಕರಣ ದಾಖಲಿಸಬೇಕು. ಸಂಚಾರ ನಿಯಮ ಉಲ್ಲಂಘಿಸಿ ಜೀವ ಬಲಿಪಡೆಯುವವರ ಮೇಲೆ ಪೊಲೀಸರು ನಿರ್ಧಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಅತಿ ವೇಗದ ಬಸ್ ಚಾಲನೆಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಬರುತ್ತಿವೆ. ನಿರ್ಲಕ್ಷ್ಯದಿಂದ ಚಾಲನೆ ಮಾಡುತ್ತಿದ್ದ ನಗರ ಸಾರಿಗೆಯ ಖಾಸಗಿ ಬಸ್ ಚಾಲಕರೊಬ್ಬರಿಗೆ ವಿದ್ಯಾನಗರದಲ್ಲಿ ನಾನೇ ಎಚ್ಚರಿಕೆ ನೀಡಿದ್ದೇನೆ. ಎಷ್ಟೇ ಹೇಳಿದರು ಬಸ್ ಚಾಲಕರ ನಡವಳಿಕೆಯಲ್ಲಿ ಸುಧಾರಣೆ ಕಾಣುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ತಪ್ಪು ಮಾಡಿದರೆ ಖಾಸಗಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (ಕೆಎಸ್‌ಆರ್‌ಟಿಸಿ) ಬಸ್ ಚಾಲಕರ ವಿರುದ್ಧವೂ ಕ್ರಮ ಜರುಗಿಸಬೇಕು. ಒಂದೆರಡು ದಿನ ಬಸ್ ಸಂಚಾರ ಸ್ಥಗಿತಗೊಂಡರೆ ಪಾಠ ಕಲಿಯಬಹುದು’ ಎಂದು ಹೇಳಿದರು.
‘ಎಷ್ಟೇ ತಿಳಿವಳಿಕೆ ನೀಡಿದರೂ ಬಸ್ ಚಾಲಕರ ವರ್ತನೆ ಬದಲಾಗುತ್ತಿಲ್ಲ. ಬಸ್ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಧ್ವನಿಗೂಡಿಸಿದರು.
ಕೆರೆ ಏರಿಯ ಸುರಕ್ಷತೆಗೆ ಕ್ರಮ:
‘ಚನ್ನಗಿರಿ ಹಾಗೂ ಹೊಳಲ್ಕೆರೆ ನಡುವಿನ ರಾಷ್ಟ್ರೀಯ ಹೆದ್ದಾರಿ 369ರ ಬೆಂಕಿಕೆರೆ ಗ್ರಾಮದ ಕೆರೆ ಏರಿಯ ಸುರಕ್ಷತೆಗೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಐ) ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನ ಆಗಿಲ್ಲ’ ಎಂದು ಸಿಪಿಐ ಬಾಲಚಂದ್ರ ನಾಯ್ಕ ಸಭೆಗೆ ಮಾಹಿತಿ ನೀಡಿದರು.
‘ಕೆರೆ ಏರಿಯ ಮೇಲೆ ಕಂಬಿಗಳನ್ನು ಅಳವಡಿಸಿ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕೆ ಸಂಬಂಧಿಸಿದಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ತಿಳಿಸಿದರು.
‘ಅಪಘಾತ ನಿಯಂತ್ರಣಕ್ಕೆ ಚನ್ನಗಿರಿ ತಾಲ್ಲೂಕಿನ ಪಾಂಡೊಮಟ್ಟಿ ಹಾಗೂ ಅತ್ತಿಗೆರೆ ಗ್ರಾಮದ ಬಳಿ ರಸ್ತೆಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಆದರೆ, ಇವುಗಳಿಗೆ ರೇಡಿಯಂ ಸ್ಟಿಕ್ಕರ್ ಅಂಟಿಸಿಲ್ಲ. ರಾತ್ರಿ ವೇಳೆ ಸಂಚರಿಸುವ ವಾಹನ ಚಾಲಕರಿಗೆ ಬ್ಯಾರಿಕೇಡ್ ಕಾಣಿಸದೇ ತೊಂದರೆ ಆಗುತ್ತಿದೆ. ಕೂಡಲೇ ರೇಡಿಯಂ ಅಳವಡಿಸಿ’ ಎಂದು ಪೊಲೀಸರಿಗೆ ಸೂಚಿಸಿದರು.
ಗುಂಡಿ ಮುಚ್ಚಲು ತಾಕೀತು:
‘ಹೊನ್ನಾಳಿ–ಹರಿಹರ ನಡುವಿನ ರಸ್ತೆ ತೀರಾ ಹಾಳಾಗಿದೆ. ರಸ್ತೆಯ ವಿಸ್ತರಣೆಗೂ ಮುನ್ನ ಗುಂಡಿಗಳನ್ನು ಮುಚ್ಚುವ ಅಗತ್ಯವಿದೆ. ಹಿಂಗಾರು ಮಳೆ ಮುಂದುವರಿದಿದ್ದರಿಂದ ಗುಂಡಿ ಮುಚ್ಚಲು ಸಾಧ್ಯವಾಗಿಲ್ಲ. ಮಳೆ ನಿಂತಿದ್ದು ಕೂಡಲೇ ಗುಂಡಿ ಮುಚ್ಚಿ’ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಾಕೀತು ಮಾಡಿದರು.
‘ಜಿಲ್ಲೆಯಲ್ಲಿ 2023ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 320 ಜನರು ಪ್ರಾಣ ಕಳೆದುಕೊಂಡಿದ್ದಾರೆ. 6ಕ್ಕಿಂತ ಹೆಚ್ಚು ಜನರು ಪ್ರಾಣ ಕಳೆದುಕೊಂಡ ಸ್ಥಳದ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮುಖ್ಯಸ್ಥರಾಗಿರುವ ಸಮಿತಿಗೆ ವರದಿ ನೀಡಬೇಕಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅಪಘಾತ ವಲಯಗಳನ್ನು ಸರಿಪಡಿಸಲು ಸ್ಪಂದಿಸಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.