ADVERTISEMENT

ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ₹20 ಕೋಟಿ: ದಿನೇಶ್‌ ಗುಂಡೂರಾವ್‌

ನೂತನ ಕಟ್ಟಡ ನಿರ್ಮಾಣಕ್ಕೆ ನಿರ್ಧಾರ, ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 15:26 IST
Last Updated 11 ಜುಲೈ 2024, 15:26 IST
<div class="paragraphs"><p>ದಿನೇಶ್‌ ಗುಂಡೂರಾವ್‌</p></div>

ದಿನೇಶ್‌ ಗುಂಡೂರಾವ್‌

   

ದಾವಣಗೆರೆ: ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಕಾಯಕಲ್ಪ ನೀಡಲು ನಿರ್ಧರಿಸಲಾಗಿದ್ದು, ಹಂತ–ಹಂತವಾಗಿ ನೂತನ ಕಟ್ಟಡ ನಿರ್ಮಾಣ ಕೈಗೆತ್ತಿಕೊಳ್ಳಲಾಗುತ್ತದೆ. ಮೊದಲ ಹಂತದಲ್ಲಿ ಹೊಸ ಬ್ಲಾಕ್‌ ಕಟ್ಟಲು ₹ 20 ಕೋಟಿ ಅನುದಾನ ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯರೊಂದಿಗೆ ಸಭೆ ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ADVERTISEMENT

‘ಚಿಗಟೇರಿ ಜಿಲ್ಲಾ ಆಸ್ಪತ್ರೆ ಕಟ್ಟಡವನ್ನು ಅತ್ಯುತ್ತಮ ವಿನ್ಯಾಸ ಹೊಂದಿದೆ. ಗಾಳಿ, ಬೆಳಕು ಸೇರಿ ಎಲ್ಲ ರೀತಿಯ ವೈದ್ಯಕೀಯ ಸೌಲಭ್ಯಗಳನ್ನು ಸರಾಗವಾಗಿ ಒದಗಿಸಲು ಸಾಧ್ಯವಾಗುವಂತೆ ನಿರ್ಮಿಸಲಾಗಿದೆ. ಇದೇ ವಿನ್ಯಾಸವನ್ನು ಉಳಿಸಿಕೊಂಡು ಆಸ್ಪತ್ರೆ ನಿರ್ಮಿಸಲು ತೀರ್ಮಾನಿಸಲಾಗಿದೆ. ಇಡೀ ಕಟ್ಟಡಕ್ಕೆ ₹ 100 ಕೋಟಿಗೂ ಅಧಿಕ ಹಣ ಬೇಕಾಗುತ್ತದೆ. ಹೀಗಾಗಿ, ಹಂತಹಂತವಾಗಿ ಕಾಮಗಾರಿ ಕೈಗೆತ್ತಿಕೊಂಡು ನೂತನ ಕಟ್ಟಡ ಒದಗಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ನೂತನವಾಗಿ ನಿರ್ಮಿಸುತ್ತಿರುವ ಬ್ಲಾಕ್‌ನಲ್ಲಿ 50 ಹಾಸಿಗೆ ವ್ಯವಸ್ಥೆ ಇರಲಿದೆ. ಎರಡು ಶಸ್ತ್ರಚಿಕಿತ್ಸಾ ಕೊಠಡಿಗಳು ಇವೆ. ನರ್ಸಿಂಗ್‌ ಕಾಲೇಜು, ಶವಾಗಾರ ಸೇರಿ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಸೂಕ್ತ ಯೋಜನೆಯೊಂದನ್ನು ಸಿದ್ಧಪಡಿಸಿಕೊಂಡು ಆಸ್ಪತ್ರೆಗೆ ಮರುಜೀವ ನೀಡುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತದೆ’ ಎಂದರು.

‘930 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಅರ್ಧದಷ್ಟು ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಹಾಸಿಗೆ ಹಾಗೂ ಸಿಬ್ಬಂದಿಯ ಅನುಪಾತದಲ್ಲಿ ಭಾರಿ ಅಂತರವಿದೆ. ಹೆಚ್ಚುವರಿ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ ಕ್ರಮಕೈಗೊಳ್ಳಲಿದೆ. ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದ ಪ್ರಸ್ತಾವ ಸಲ್ಲಿಸಲು ಸೂಚನೆ ನೀಡಲಾಗಿದ್ದು, ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸುತ್ತೇನೆ. ನೀರಿನ ಟ್ಯಾಂಕ್‌ಗೆ ಬೇರೆ ಅನುದಾನ ಹೊಂದಿಸಲಾಗುವುದು’ ಎಂದರು.

‘ದಾವಣಗೆರೆ ಜಿಲ್ಲೆಯಲ್ಲಿ 30 ಆರೋಗ್ಯ ಉಪಕೇಂದ್ರಗಳ ನಿರ್ಮಾಣ ಮಾಡಲಾಗುತ್ತಿದೆ. ಹಳೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಲಾಗುವುದು. ಪ್ರತಿ ಕೇಂದ್ರಕ್ಕೆ ₹ 65 ಲಕ್ಷ ಅನುದಾನ ನೀಡಲಾಗುತ್ತಿದ್ದು, ಅಂದಾಜು ₹ 20 ಕೋಟಿ ಅನುದಾನ ಲಭ್ಯವಾಗಲಿದೆ. ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಮುಂಜೂರಾತಿ ನೀಡಲಾಗಿದೆ. 108 ಆಂಬುಲೆನ್ಸ್‌ ಸೇವೆ ಹಳೆಯ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಸೇವಾ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶೀಘ್ರದಲ್ಲೇ ಟೆಂಡರ್‌ ಕರೆಯಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಂಸದೆ ಪ್ರಭಾ ಮಲ್ಲಿಕಾರ್ಜುನ್‌, ಶಾಸಕರಾದ ದೇವೇಂದ್ರಪ್ಪ, ಕೆ.ಎಸ್‌.ಬಸವಂತಪ್ಪ, ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಡಿ.ರಂದೀಪ್‌, ನವೀನ್‌ ಭಟ್‌, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.