ADVERTISEMENT

ವೈದ್ಯಕೀಯ ಉಪಕರಣ ಖರೀದಿಗೆ ₹ 1.20 ಕೋಟಿ

ಕೋವಿಡ್‌ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ

​ಪ್ರಜಾವಾಣಿ ವಾರ್ತೆ
Published 31 ಮೇ 2021, 2:25 IST
Last Updated 31 ಮೇ 2021, 2:25 IST
ಚನ್ನಗಿರಿ ತಾಲ್ಲೂಕು ಬುಸ್ಸೇನಹಳ್ಳಿ ಗ್ರಾಮದಲ್ಲಿರುವ ಕೋವಿಡ್ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವೈದ್ಯರು, ಸಿಬ್ಬಂದಿಗೆ ಲಾಡು ವಿತರಿಸಿದರು.
ಚನ್ನಗಿರಿ ತಾಲ್ಲೂಕು ಬುಸ್ಸೇನಹಳ್ಳಿ ಗ್ರಾಮದಲ್ಲಿರುವ ಕೋವಿಡ್ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವೈದ್ಯರು, ಸಿಬ್ಬಂದಿಗೆ ಲಾಡು ವಿತರಿಸಿದರು.   

ಚನ್ನಗಿರಿ: ‘ಕೊರೊನಾ ಎರಡನೇ ಅಲೆ ಗ್ರಾಮೀಣ ಪ್ರದೇಶಗಳಲ್ಲಿಯೂ ಇಳಿಮುಖವಾಗುತ್ತಿರುವುದು ನೆಮ್ಮದಿ ತರುವ ವಿಷಯ. ಮೂರನೇ ಅಲೆಯನ್ನು ಎದುರಿಸಲು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಉಪಕರಣಗಳ ಕೊರತೆ ಇರುವುದನ್ನು ಮನಗಂಡು ₹ 1.20 ಕೋಟಿ ಅನುದಾನದಲ್ಲಿ ಉಪಕರಣಗಳನ್ನು ಖರೀದಿಸಲು ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಕೆಎಸ್‌ಡಿಎಲ್ ಅಧ್ಯಕ್ಷ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು.

ತಾಲ್ಲೂಕಿನ ಬುಸ್ಸೇನಹಳ್ಳಿ ಗ್ರಾಮದಲ್ಲಿರುವ ಕೋವಿಡ್ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿ ಸೋಂಕಿತೆರಿಗೆ, ಅಡುಗೆ ತಯಾರಕರು, ವೈದ್ಯರು ಹಾಗೂ ಸಿಬ್ಬಂದಿಗೆ ಸಿಹಿ ತಿಂಡಿ ವಿತರಿಸಿ ಅವರು ಮಾತನಾಡಿದರು.

ಶಾಸಕರ ಅನುದಾನ, ತುಮ್ಕೋಸ್, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ₹ 1.20 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಉಪಕರಣಗಳನ್ನು ಖರೀದಿಸಿ, ಆರೋಗ್ಯ ಕೇಂದ್ರಕ್ಕೆ ನೀಡಲು ತೀರ್ಮಾನಿಸಲಾಗಿದೆ. ಆರೋಗ್ಯ ಕೇಂದ್ರಕ್ಕೆ ಅಗತ್ಯವಾದ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಒದಗಿಸಲು ಸಿದ್ಧ. ವೈದ್ಯರಿಗೆ ಸೋಂಕಿತರಿಗೆ ಉತ್ತಮ ಚಿಕಿತ್ಸೆಯನ್ನು ನೀಡಿ ಅವರ ಪ್ರಾಣವನ್ನು ಉಳಿಸುವ ಹೊಣೆಗಾರಿಕೆ ಇದೆ ಎಂದರು.

ADVERTISEMENT

‘ಪ್ರತಿದಿನ ಕೋವಿಡ್ ಕೇಂದ್ರಗಳಲ್ಲಿರುವ ಸೋಂಕಿತರಿಗೆ ಹೋಳಿಗೆ, ಪಾಯಸ, ಮಸಾಲೆ ಮಂಡಕ್ಕಿ ವೈಯುಕ್ತಿವಾಗಿ ನೀಡುತ್ತೇನೆ. ಹಾಗೆಯೇ ಕೇಂದ್ರಗಳಲ್ಲಿ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಸಂಕೋಚ ಕೈಬಿಟ್ಟು ಕೋವಿಡ್ ಕೇಂದ್ರಗಳಿಗೆ ಬಂದು ಚಿಕಿತ್ಸೆ ಪಡೆದುಕೊಂಡು ಹೋಗಬೇಕು. ನನಗೂ ಸೋಂಕು ತಗುಲಿತ್ತು. ಸಮಯಕ್ಕೆ ಸರಿಯಾಗಿ ಆರೋಗ್ಯ ಕೇಂದ್ರಕ್ಕೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದರಿಂದ ಗುಣಮುಖನಾಗಿದ್ದೇನೆ’ ಎಂದು ಹೇಳಿದರು.

ಆಡಳಿತ ವೈದ್ಯಾಧಿಕಾರಿ ಡಾ. ಅಶೋಕ್, ತಾಲ್ಲೂಕು ವೈದ್ಯಾಧಿಕಾರಿ ಡಾ. ಪ್ರಭು, ಡಾ. ಚನ್ನಕೇಶವ್, ಡಾ. ಸತೀಶ್, ನೋಡಲ್ ಅಧಿಕಾರಿ ಡಾ. ಮುರುಳಿಧರ್, ಬೆಸ್ಕಾಂ ಎಇಇ ಲೋಹಿತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.