ಜಗಳೂರು: ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡ ಭಾಷೆಯ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕಾಪಾಡುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ಯುವ ಕರ್ನಾಟಕ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರೂಪೇಶ್ ರಾಜಣ್ಣ ಹೇಳಿದರು.
ಪಟ್ಟಣದ ಬಯಲು ರಂಗಮಂದಿರ ಅವರಣದಲ್ಲಿ ಶನಿವಾರ ರಾತ್ರಿ ನಡೆದ ಯುವ ಕರ್ನಾಟಕ ವೇದಿಕೆ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ವಿರುದ್ಧ ವೇದಿಕೆ ನಾಯಕತ್ವ ವಹಿಸಿತ್ತು. ಬೆಂಗಳೂರಿನಲ್ಲಿ ಹೊರ ರಾಜ್ಯಗಳ ದಬ್ಬಾಳಿಕೆ ಖಂಡಿಸಿ, ಆಂಗ್ಲಭಾಷೆ ನಾಮಫಲಕ ತೆರವುಗೊಳಿಸಲು ನಿರಂತರ ಹೊರಾಟ ನಡೆಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಮರಸ್ಯ ಕದಡುವವರನ್ನು ತಿರಸ್ಕರಿಸಿ, ಸಮಾಜದ ಸ್ವಾಸ್ಥ್ಯ ಕಾಪಾಡಬೇಕು’ ಎಂದು ಹೇಳಿದರು.
ಕನ್ನಡ ನಾಡಿನ ನೆಲ, ಜಲ ಹಾಗೂ ಭಾಷೆ ವಿಷಯದಲ್ಲಿ ಕನ್ನಡಿಗರಾದ ನಾವೆಲ್ಲರೂ ಜಾತಿ, ಧರ್ಮ ಹಾಗೂ ಪಕ್ಷಾತೀತವಾಗಿ ಒಗ್ಗೂಡಬೇಕು. ಆಗ ಮಾತ್ರ ಕನ್ನಡ ಭಾಷೆಗೆ ಎದುರಾಗಿರುವ ಸವಾಲುಗಳನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಲು ಸಾಧ್ಯ ಎಂದು ಶಾಸಕ ಬಿ. ದೇವೇಂದ್ರಪ್ಪ ಅಭಿಪ್ರಾಯಪಟ್ಟರು.
ಉದ್ಯೋಗ ಅರಸಿ ಬಂದವರು ಕರ್ನಾಟಕದಲ್ಲಿ ತಮ್ಮ ಭಾಷಾ ಹಿಡಿತ ಸಾಧಿಸಲು ಹೊರಟಿರುವುದು ಆತಂಕಕಾರಿ ಬೆಳವಣಿಗೆ ಎಂದು ಅಂಬೇಡ್ಕರ್ ಸೇನೆ ರಾಜ್ಯ ಘಟಕದ ಅಧ್ಯಕ್ಷ, ನಟ, ನಿರ್ದೇಶಕ ಪಿ.ಮೂರ್ತಿ ಹೇಳಿದರು.
ಶೈನಿಂಗ್ ಸ್ಟಾರ್ ಕಲಾತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗಿತು. ಪಟ್ಟಣ ಪಂಚಾಯಿತಿ ಅಧ್ಯಕ್ಷ ನವೀನ್ ಕುಮಾರ್, ಕಾಂಗ್ರೆಸ್ ಮುಖಂಡ ಕೆ.ಪಿ. ಪಾಲಯ್ಯ, ವಕೀಲರ ಸಂಘದ ಅಧ್ಯಕ್ಷ ಕಾಪಾಡಿಕಾಜ್, ಚಿತ್ರನಟ ಸುನಾಮಿ ಕಿಟ್ಟಿ, ಸೈಯದ್ ಶಫಿ, ತಾಲ್ಲೂಕು ಘಟಕದ ಗೌರವಾಧ್ಯಕ್ಷ ಬರ್ಕತ್ ಅಲಿ, ಅಧ್ಯಕ್ಷ ಮಲ್ಲಿಕಾರ್ಜುನ್, ಉಪಾಧ್ಯಕ್ಷ ನಾಗರಾಜ್ ಮರೇನಹಳ್ಳಿ, ಚಿಕ್ಕಮ್ಮನಹಟ್ಟಿ ಶ್ರೀಕಾಂತ್, ನರಸಿಂಹಮೂರ್ತಿ, ಬಿ.ಮಹೇಶ್ವರಪ್ಪ, ಜೈಭಾರತ್ ಟ್ರಸ್ಟ್‌ನ ನಬೀಉಲ್ಲಾ, ಯೋಗೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.