ದಾವಣಗೆರೆ: ಐದು ಬಾರಿ ಶಾಸಕರಾಗಿ, ಸಚಿವರಾಗಿಯೂ ಸೇವೆ ಸಲ್ಲಿಸಿದ್ದ ದಾವಣಗೆರೆ ಉತ್ತರದ ಶಾಸಕ ಎಸ್.ಎ. ರವೀಂದ್ರನಾಥ್ ಅನಾರೋಗ್ಯದ ಕಾರಣ ಚುನಾವಣಾ ರಾಜಕಾರಣದಿಂದ ನಿವೃತ್ತರಾಗುವುದಾಗಿ ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯಲ್ಲಿ ಜನಸಂಘದ ಕಾಲದಿಂದಲೇ ಸಂಘ ಪರಿವಾರದ ಸದಸ್ಯನಾಗಿ, ಬಳಿಕ ಬಿಜೆಪಿಯನ್ನು ಕಟ್ಟಿ ಬೆಳೆಸಿದವರಲ್ಲಿ ಪ್ರಮುಖರಾಗಿರುವ ರವೀಂದ್ರನಾಥ್, ಸತತ ಎಂಟು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು. 5 ಬಾರಿ ಗೆಲುವು ಸಾಧಿಸಿದ್ದರು.
1985ರಲ್ಲಿ ಮಾಯಕೊಂಡ ಕ್ಷೇತ್ರದಿಂದ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದಾಗ ಅವರಿಗೆ ಕೇವಲ 3,094 (ಕೇವಲ ಶೇ 4ರಷ್ಟು) ಮತಗಳು ದೊರೆತಿದ್ದವು. 1989ರಲ್ಲಿ ಮತ್ತೆ ಕಣಕ್ಕಿಳಿದಾಗ 5,030 ಮತಗಳನ್ನು (ಶೇ 5.8) ಪಡೆದು 5ನೇ ಸ್ಥಾನ ಪಡೆದಿದ್ದರು. ಆದರೆ ಛಲ ಬಿಡದ ರವೀಂದ್ರನಾಥ್, 1994ರಲ್ಲಿ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಶೇ 49ರಷ್ಟು (48,955) ಮತ ಪಡೆದು ಭರ್ಜರಿ ಜಯಗಳಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದ್ದರು.
1999, 2004ರಲ್ಲಿಯೂ ಜಯಗಳಿಸುವ ಮೂಲಕ ಹ್ಯಾಟ್ರಿಕ್ ಸಾಧಿಸಿದ್ದರು. 2006ರಲ್ಲಿ ಬಿಜೆಪಿ–ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಎಚ್.ಡಿ. ಕುಮಾರಸ್ವಾಮಿ ಅವರ ಸಂಪುಟದಲ್ಲಿ ಸಕ್ಕರೆ ಮತ್ತು ಗ್ರಾಮೀಣ ನೀರು ಪೂರೈಕೆ ಸಚಿವರಾಗಿದ್ದರು.
ಬಳಿಕ ಕ್ಷೇತ್ರ ಪುನರ್ ವಿಂಗಡಣೆಯಾಗಿದ್ದರಿಂದ ಮಾಯಕೊಂಡ ಕ್ಷೇತ್ರ ಪರಿಶಿಷ್ಟ ವರ್ಗಕ್ಕೆ ಮೀಸಲಾಗಿದ್ದರಿಂದ, 2008ರಲ್ಲಿ ಹೊಸದಾಗಿ ರೂಪುಗೊಂಡ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದರು. ಯಡಿಯೂರಪ್ಪ ಸರ್ಕಾರದಲ್ಲಿ ಕೃಷಿ ಸಚಿವರಾಗಿ, ಬಳಿಕ ಸದಾನಂದ ಗೌಡ, ಜಗದೀಶ ಶೆಟ್ಟರ್ ಸಂಪುಟಗಳಲ್ಲಿ ತೋಟಗಾರಿಕಾ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
2013ರಲ್ಲಿ ಎಸ್.ಎಸ್. ಮಲ್ಲಿಕಾರ್ಜುನರ ವಿರುದ್ಧ ಸೋತರೂ, 2018ರಲ್ಲಿ ಅವರ ವಿರುದ್ಧ ಗೆದ್ದು 5ನೇ ಬಾರಿ ಶಾಸಕರಾಗಿದ್ದರು. ಈಗ 2023ರ ಚುನಾವಣೆಯ ಹೊತ್ತಿಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ.
‘ಅನಾರೋಗ್ಯದ ಕಾರಣದಿಂದ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹಿಂದೆಯೇ ಹೇಳಿಕೊಂಡು ಬಂದಿದ್ದೆ. ಇಂಥ ಹೇಳಿಕೆ ನೀಡದಂತೆ ನಮ್ಮ ನಾಯಕರಾದ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದರಿಂದ ಸುಮ್ಮನಾಗಿದ್ದೆ. ಈಗ ಚುನಾವಣೆ ಬಂದಿದೆ. ಜನರಲ್ಲಿ ಗೊಂದಲ ಉಂಟಾಗಬಾರದು ಎಂಬ ಕಾರಣಕ್ಕೆ ಅನಿವಾರ್ಯವಾಗಿ ನನ್ನ ನಿರ್ಧಾರ ಹೇಳಬೇಕಾಯಿತು’ ಎಂದು ಎಸ್.ಎ. ರವೀಂದ್ರನಾಥ್ ತಿಳಿಸಿದ್ದಾರೆ.
‘75 ವರ್ಷ ದಾಟಿದವರು ಚುನಾವಣೆಗೆ ನಿಲ್ಲಬಾರದು ಎಂಬ ನಿಯಮ ಇತ್ತು. ಈಗ ಆ ನಿಯಮವನ್ನು ಸಡಿಲಿಸಿದ್ದಾರೆ. ಆ ಕಾರಣದಿಂದ ನಾನು ಸ್ಪರ್ಧಿಸದಿರುವುದು ಅಲ್ಲ. ನನ್ನ ಆರೋಗ್ಯ ಸರಿಯಿಲ್ಲ. ಇದನ್ನೇ ಪಕ್ಷದ ವರಿಷ್ಠರಿಗೂ ತಿಳಿಸಿದ್ದೇನೆ. ಅವರಿಗೂ ನನ್ನ ಆರೋಗ್ಯದ ಬಗ್ಗೆ ಗೊತ್ತಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ರವೀಂದ್ರನಾಥ್ ಬದಲು ಕ್ಷೇತ್ರದಲ್ಲಿ ಯಾರು ಬಿಜೆಪಿಯ ಟಿಕೆಟ್ ಪಡೆಯಲಿದ್ದಾರೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.
ಸ್ಪರ್ಧಿಸುವಂತೆ ಅಭಿಮಾನಿಗಳ ಆಗ್ರಹ
‘ಬಿಜೆಪಿಯನ್ನು ಕಟ್ಟಿ ಬೆಳೆಸಿದ ರವೀಂದ್ರನಾಥ್ ಅವರೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಆಗ್ರಹಿಸಿ ಅವರ ಅಭಿಮಾನಿ ಬಳಗ, ಬಿಜೆಪಿ ಕಾರ್ಯಕರ್ತರು ಮಂಗಳವಾರ ರಾತ್ರಿ ರವೀಂದ್ರನಾಥ್ ಮನೆಯ ಮುಂದೆ ಜಮಾಯಿಸಿದ್ದರು.
‘ನನ್ನ ಆರೋಗ್ಯ ಸರಿಯಾದರೆ ಯೋಚನೆ ಮಾಡುತ್ತೇನೆ ಎಂದು ಹಿಂದೆ ಹೇಳಿದ್ದೆ. ಆರೋಗ್ಯ ಸುಧಾರಣೆಯಾಗಿಲ್ಲ. ನನ್ನ ಕಷ್ಟವನ್ನು ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು. ಎಲ್ಲರೂ ತಮ್ಮ ತಮ್ಮ ಮನೆಗೆ ಹೋಗಬೇಕು’ ಎಂದು ರವೀಂದ್ರನಾಥ್ ಮನವಿ ಮಾಡಿದರು.
‘ಅಭ್ಯರ್ಥಿ ಯಾರು ಎಂಬುದನ್ನು ವರಿಷ್ಠರು ತೀರ್ಮಾನಿಸುತ್ತಾರೆ. ಯಾರನ್ನೇ ನಿಲ್ಲಿಸಿದರೂ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು’ ಎಂದು ಮಾಧ್ಯಮದವರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.