ಪ್ರಜಾವಾಣಿ ವಾರ್ತೆ
ದಾವಣಗೆರೆ: ಸಮಗಾರ ಸಮುದಾಯದವರಿಗೆ ಡಾ. ಬಾಬೂ ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಆನಗೋಡುವಿನಲ್ಲಿ ₹ 5 ಕೋಟಿ ವೆಚ್ಚದಲ್ಲಿ ಸಂಕೀರ್ಣ ನಿರ್ಮಾಣ ಮಾಡುವುದಾಗಿ ನಿಗಮದ ಅಧ್ಯಕ್ಷ, ಶಾಸಕ ಪ್ರೊ.ಲಿಂಗಣ್ಣ ಭರವಸೆ ನೀಡಿದರು.
ಡಾ. ಬಾಬೂ ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಸಮಗಾರ ಸಮಾಜದ ಸಹಯೋಗದಲ್ಲಿ ಸಮುದಾಯದ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಮಗಾರ ಸಮಾಜದವರಿಗೆ ತರಬೇತಿ ನೀಡಲು, ಉತ್ಪಾದನಾ ಕೇಂದ್ರ, ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗುವಂತೆ ಸಂಕೀರ್ಣ ನಿರ್ಮಿಸಲು 5 ಎಕರೆ ಜಾಗ ಗುರುತಿಸಲು ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ. ಜಾಗ ಸಿಕ್ಕರೆ ಇದೇ ವರ್ಷ ಸಂಕಿರಣ ನಿರ್ಮಿಸಲಾಗುವುದು. ಸಮಗಾರ ಸಮುದಾಯದವರಿಗೆ ನಿವೇಶನ ಕೊಡಿಸುವುದು ನನ್ನ ಆದ್ಯತೆಯಾಗಿದೆ’ ಎಂದು ಹೇಳಿದರು.
‘ಹಿಂದುಳಿದ ಸಮಾಜಕ್ಕೆ ಸವಲತ್ತುಗಳನ್ನು ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ನಮ್ಮ ಉದ್ದೇಶ. ತರಬೇತಿ ಪಡೆದವರು ಉತ್ತಮ ಚರ್ಮಶಿಲ್ಪಿಗಳು ಎಂಬುದನ್ನು ತೋರಿಸಬೇಕು. ಈ ಸಮಾಜಕ್ಕೆ ಪ್ರತಿಯೊಂದು ವಾರ್ಡ್‌ಗಳಲ್ಲೂ ಮಳಿಗೆಗಳನ್ನು ಕಟ್ಟಿಸಿಕೊಟ್ಟಲ್ಲಿ ಅವರಿಗೆ ಗೌರವದ ಬದುಕು ಕಟ್ಟಿಕೊಳ್ಳಲು ಸಾಧ್ಯ’ ಎಂದರು.
ಶಾಸಕ ಎಸ್.ಎ. ರವೀಂದ್ರನಾಥ್, ‘ನೀವು ತಯಾರಿಸಿದ ಉತ್ಪನ್ನಗಳು ಗುಣಮಟ್ಟದ್ದಾಗಿದ್ದು, ಮತ್ತೊಮ್ಮೆ ಕೇಳುವಂತಿದ್ದರೆ ಬೇರೆ ಸಮಾಜದವರು ಬಾಗಿಲು ಮುಚ್ಚಬೇಕಾಗುತ್ತದೆ. ಆರ್ಥಿಕವಾಗಿ ಸಬಲರಾಗಬೇಕಾದರೆ ಕೌಶಲಯುಕ್ತ ಉತ್ಪನ್ನಗಳನ್ನು ತಯಾರು ಮಾಡಬೇಕು’ ಎಂದರು.
ಮೇಯರ್ ಬಿ.ಜಿ. ಅಜಯ್‌ಕುಮಾರ್ ಮಾತನಾಡಿ, ‘ನಿಮ್ಮದು ಸ್ವಯಂ ಉದ್ಯೋಗದಿಂದ ಜೀವನ ಮಾಡುವ ಸಮಾಜ. ಸೌಲಭ್ಯಗಳನ್ನು ಬಳಸಿಕೊಂಡು ಸ್ವಾವಲಂಬಿಗಳಾಗಬೇಕು’ ಎಂದು ಸಲಹೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್ ಮಾತನಾಡಿ, ‘ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುವುದು ಮುಖ್ಯವಲ್ಲ. ಅದನ್ನು ಯಾವ ರೀತಿ ಸದುಪಯೋಗಪಡಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ. ಸವಲತ್ತು ವ್ಯರ್ಥವಾದರೆ ಸರ್ಕಾರದ ಉದ್ದೇಶ ಈಡೇರುವುದಿಲ್ಲ’ ಎಂದರು.
ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಸುನೀತಾ, ಸಮಗಾರ ಸಮಾಜದ ಅಧ್ಯಕ್ಷ ಪಕ್ಕೀರಪ್ಪ ಬೆಟಗೇರಿ ಮಾತನಾಡಿದರು. ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಮಾರ್ಕಂಡೇಯ ದೊಡ್ಮನಿ, ಕಾರ್ಯದರ್ಶಿ ವಿವೇಕ್ ಬೆಂಡಿಗೆರೆ, ಜಿಲ್ಲಾ ಖಜಾಂಚಿ ಬಿ. ಶಿವಾಜಿ ತೇರದಾಳ್ ಮುಖಂಡರಾದ ರವಿ ಗಾಮನಗಟ್ಟಿ, ಜಗದೀಶ್ ಎಸ್.ಮಾನೆ, ಹುಬ್ಬಳ್ಳಿಯ ಬಸವರಾಜ್ ತೇರದಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.