ADVERTISEMENT

ರಾಯಣ್ಣ ಪ್ರತಿಮೆ ತೆರವು; ವಾಲ್ಮೀಕಿ ಸಮುದಾಯದ ಧರಣಿ ಅಂತ್ಯ

ಭಾನುವಳ್ಳಿ: ಮುರು ದಿನ ನಿಷೇದಾಜ್ಞೆ ಜಾರಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2024, 22:06 IST
Last Updated 23 ಜನವರಿ 2024, 22:06 IST
ಕಡರನಾಯ್ಕನಹಳ್ಳಿ ಸಮೀಪದ ಭಾನುವಳ್ಳಿ ಗ್ರಾಮದಲ್ಲಿ ತೆರವುಗೊಳಿಸಲಾದ ಸಂಗೊಳ್ಳಿರಾಯಣ್ಣ ಪ್ರತಿಮೆ
ಕಡರನಾಯ್ಕನಹಳ್ಳಿ ಸಮೀಪದ ಭಾನುವಳ್ಳಿ ಗ್ರಾಮದಲ್ಲಿ ತೆರವುಗೊಳಿಸಲಾದ ಸಂಗೊಳ್ಳಿರಾಯಣ್ಣ ಪ್ರತಿಮೆ   

ಕಡರನಾಯ್ಕನಹಳ್ಳಿ (ದಾವಣಗೆರೆ): ಸಮೀಪದ ಭಾನುವಳ್ಳಿ ಗ್ರಾಮದಲ್ಲಿ ಜ.9ರಂದು ಬೆಳಗಿನ ಜಾವ ದಿಢೀರ್‌ ಪ್ರತಿಷ್ಠಾಪಿ ಸಲಾಗಿದ್ದ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಜಿಲ್ಲಾಧಿಕಾರಿ ಆದೇಶದ ಮೇರೆಗೆ ಬಿಗಿ ಪೊಲೀಸ್‌ ಬಂದೋಬಸ್ತ್‌ನೊಂದಿಗೆ ಮಂಗಳವಾರ ತೆರವುಗೊಳಿಸಿ, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಗ್ರಾಮದ ಮದಕರಿ ನಾಯಕ ವೃತ್ತದ ಪಕ್ಕದಲ್ಲಿರುವ ಸಿದ್ದಪ್ಪ ಅವರ ನಿವಾಸದ ಎದುರು ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪಿಸಲಾಗಿತ್ತು. ಅನತಿ ದೂರದಲ್ಲಿ ಮದಕರಿ ನಾಯಕ ದ್ವಾರ ಇರುವುದರಿಂದ, ಅಲ್ಲಿ ರಾಯಣ್ಣನ ಪ್ರತಿಮೆ ಇರಿಸದೇ, ತೆರವುಗೊಳಿಸ ಬೇಕೆಂದು ಆಗ್ರಹಿಸಿ ವಾಲ್ಮೀಕಿ ನಾಯಕ ಸಮುದಾಯದ ಜನ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಅಹೋರಾತ್ರಿ ಧರಣಿ ಕೈಗೊಂಡಿದ್ದರು.

ಹೆಚ್ಚುವರಿ ಜಿಲ್ಲಾಧಿಕಾರಿ ಲೋಕೇಶ್, ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ಹರಿಹರ ತಹಶೀಲ್ದಾರ್ ಗುರುಬಸವರಾಜ, ಎ.ಎಸ್‌ಪಿ ವಿಜಯಕುಮಾರ್ ಸಂತೋಷ್ ನೇತೃತ್ವದಲ್ಲಿ ಪೊಲೀಸ್‌ ಹಾಗೂ ಕೆಎಸ್‌ಆರ್‌ಪಿ ಸಿಬ್ಬಂದಿ ಬೆಳಿಗ್ಗೆ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ತೆರವುಗೊಳಿಸಿದರು. ಕಾರ್ಯಾಚರಣೆಗೆ ಅಡ್ಡಿಪಡಿಸಿದ 67 ಜನರನ್ನು ಬಂಧಿಸಿ, ಸಂಜೆ ಬಿಡುಗಡೆಗೊಳಿಸಲಾಯಿತು.

ADVERTISEMENT

ಸಂಗೊಳ್ಳಿ ರಾಯಣ್ಣನ ಪ್ರತಿಮೆ ತೆರವುಗೊಳಿಸಿದ ಹಿನ್ನೆಲೆಯಲ್ಲಿ ವಾಲ್ಮೀಕಿ ನಾಯಕ ಸಮುದಾಯದವರು ಧರಣಿಯನ್ನು ಅಂತ್ಯ ಗೊಳಿಸಿದರು. ಶಾಂತಿ ಕಾಪಾಡುವ ದೃಷ್ಟಿಯಿಂದ ಜ.25ರ ಸಂಜೆವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

‘ಜಿಲ್ಲಾಡಳಿತದ ತೀರ್ಮಾನದ ಬಗ್ಗೆ ನಮ್ಮ ವಿರೋಧವಿಲ್ಲ. ಸಮುದಾಯದ ಮುಖಂಡರು, ಹಿರಿಯರು ಚರ್ಚಿಸಿ ಮುಂದಿನ ದಿನಗಳಲ್ಲಿ ಅದೇ ಸ್ಥಳದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಮತ್ತೆ ಪ್ರತಿಷ್ಠಾಪಿಸಲು ಯತ್ನಿಸುತ್ತೇವೆ’ ಎಂದು ಕುರುಬ ಸಮುದಾಯದ ಮುಖಂಡರಾದ ಎಚ್‌.ಕೆ.ಕನ್ನಪ್ಪ, ಯು.ಕೆ.ಅಣ್ಣಪ್ಪ, ಬಲ್ಲೂರ್ ಗಂಗಾಧರ, ಕೆ.ಕೆ.ಪ್ರಶಾಂತ್, ಕೆ.ಚಂದ್ರಪ್ಪ, ಹೇಮಂತರಾಜ್ ತಿಳಿಸಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

‘ಸಂಗೊಳ್ಳಿ ರಾಯಣ್ಣನ ಪ್ರತಿಮೆ ತೆರವುಗೊಳಿಸಿ ಸಾಮಾಜಿಕ ನ್ಯಾಯ ಎತ್ತಿ ಹಿಡಿದ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಸಮುದಾಯದ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇವೆ’ ಎಂದು ರಾಜನಹಳ್ಳಿ ವಾಲ್ಮೀಕಿ ಮಠದ ಟ್ರಸ್ಟಿ ಕಳ್ಳಿ ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯ ಧನ್ಯಕುಮಾರ್, ಪಾರ್ವತಿ, ಹೇಮಶ್ರೀ ದೊಡ್ಡಮನಿ ತಿಳಿಸಿದರು.

ಕಡರನಾಯ್ಕನಹಳ್ಳಿ ಸಮೀಪದ ಭಾನುವಳ್ಳಿ ಗ್ರಾಮದಲ್ಲಿ ಬೀಡುಬಿಟ್ಟಿರುವ ಪೊಲೀಸರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.