ಸಂತೇಬೆನ್ನೂರು: ನಾಲ್ಕೈದು ವರ್ಷಗಳಿಂದ ತಮ್ಮದೇ ಸಾಮ್ರಾಜ್ಯದಂತೆ ವಿಸ್ತರಿಸಿಕೊಂಡಿರುವ, ದಟ್ಟವಾಗಿ ಹಬ್ಬಿರುವ ಕಳೆ ಗಿಡಗಳು ರಸ್ತೆ ಬದಿ, ಹೊಲ, ತೋಟ, ಖಾಲಿ ನಿವೇಶನ, ಮೈದಾನ ಸೇರಿದಂತೆ ಎಲ್ಲೆಡೆ ಕಾಣಸಿಗುತ್ತಿವೆ.
ಸ್ಥಳೀಯವಾಗಿ ಹೆಸರೇ ಇಲ್ಲದ ವಿವಿಧ ಬಗೆಯ ಗಿಡಗಂಟಿಗಳು ವ್ಯಾಪಕವಾಗಿ ಹರಡುತ್ತಿವೆ. ಇಳುವರಿ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂಬ ಕಾರಣಕ್ಕೆ ಸಾಂಪ್ರಾದಾಯಿಕ ಕಳೆ ಗಿಡಗಳನ್ನು ಆಗಾಗ್ಗೆ ನಿರ್ಮೂಲನೆ ಮಾಡಲಾಗುತ್ತಿತ್ತು. ಕೆಲವೊಮ್ಮೆ ಅವು ಕಳೆ ಗೊಬ್ಬರವಾಗಿಯೂ ರೈತರಿಗೆ ನೆರವಾಗುತ್ತಿದ್ದವು. ಆದರೆ ಈಚೆಗೆ ಕಂಡು ಬರುತ್ತಿರುವ ಕಳೆ ಗಿಡಗಳು ಶೀಘ್ರ ಬೆಳವಣಿಗೆ ಹಾಗೂ ದಟ್ಟವಾಗಿ ಹಬ್ಬುವ ಸ್ವಭಾವ ಹೊಂದಿವೆ. ಇವು ಎಲ್ಲಿಂದ ಪ್ರಸರಣಗೊಂಡವು, ಇವುಗಳ ಹಿನ್ನೆಲೆ ಏನು ಎಂಬ ಬಗ್ಗೆ ನಿಖರ ಮಾಹಿತಿ ಸಿಗುತ್ತಿಲ್ಲ.
ಹಿಪ್ಟಿಸ್ ಪ್ರಬೇಧಕ್ಕೆ ಸೇರಿದ ಕ್ರೊಮೊಲಾನ ಒಡರಾಟ ಎಂಬ ಕಳೆ ಗಿಡವು ಚನ್ನಗಿರಿ ತಾಲ್ಲೂಕಿನಾದ್ಯಂತ ಹರಡಿದೆ. ಹೊಲ, ತೋಟಗಳಲ್ಲಿ ಕಳೆನಾಶಕ ಸಿಂಪಡಿಸಿ ನಿಯಂತ್ರಣಕ್ಕೆ ತರಲಾಗಿದೆ. ಆದರೆ ಹೆದ್ದಾರಿ ಬದಿಯಲ್ಲಿ ದಟ್ಟವಾಗಿ ಬೆಳೆಯುತ್ತಿರುವ ಈ ಗಿಡಗಳಿಗೆ ಲಗಾಮು ಇಲ್ಲದಂತಾಗಿದೆ. ನೀಳ ಎಲೆಗಳ ಸುತ್ತ ಹಲ್ಲಿನಂತಹ ರಚನೆ ಇದ್ದು, ಆರು ಅಡಿ ಎತ್ತರಕ್ಕೆ ಬೆಳೆಯಬಲ್ಲದು. ಕಟು ವಾಸನೆ ಬೀರುತ್ತವೆ. ಕೈಯಲ್ಲಿ ಮುಟ್ಟಿದರೆ ವಾಸನೆ ಅಂಟಿಕೊಳ್ಳುತ್ತದೆ ಎಂದು ತೋಟಗಾರಿಕಾ ಇಲಾಖೆ ಹಿರಿಯ ನಿರ್ದೇಶಕ ಶ್ರೀಕಾಂತ್ ಮಾಹಿತಿ ನೀಡಿದರು.
ಇಲ್ಲಿನ ಐತಿಹಾಸಿಕ ಪುಷ್ಕರಣಿ ಆವರಣದಲ್ಲಿ ಈ ಹಿಂದೆ, ಸ್ಥಳೀಯ ಹುಲ್ಲು ಹುಲುಸಾಗಿ ಬೆಳೆಯುತ್ತಿತ್ತು. ಗ್ರಾಮಸ್ಥರು ದನಕರುಗಳಿಗೆ ಮೇವು ಕೊಯ್ಲು ಮಾಡುತ್ತಿದ್ದರು. ಈಚೆಗೆ ಸ್ಥಳೀಯ ಸಸ್ಯವಲ್ಲದ ಕ್ರೊಟೊಲಾರಿಯಾ ಜಾತಿಗೆ ಸೇರಿದ ಪರಕೀಯ ಸಸ್ಯ ಪುಷ್ಕರಣಿ ವ್ಯಾಪ್ತಿಯಲ್ಲಿ ದಟ್ಟವಾಗಿ ಬೆಳೆದಿದೆ. ಇಂತಹ ಇನ್ನೂ ಹಲವು ವಿಧದ ಕಳೆಗಿಡಗಳು ಕಾಣಸಿಗುತ್ತವೆ. ಇತ್ತ ದನಗಳಿಗೆ ಮೇವೂ ಇಲ್ಲ, ಅತ್ತ ನಿವಾರಣೆಯೂ ತಲೆನೋವಾಗಿದೆ. ಈ ವರ್ಷದ ಅಧಿಕ ಮಳೆಯೂ ಅವು ಹುಲುಸಾಗಿ ಬೆಳೆಯಲು ಕಾರಣವಾಗಿದೆ.
ಹಾನಿಕಾರಕವೋ? ಉಪಯುಕ್ತವೋ?: ‘ಇವುಗಳ ಹಿನ್ನೆಲೆ ಬಗ್ಗೆ ಮಾಹಿತಿ ಇಲ್ಲ. ಇಂತಹ ಕಳೆಗಿಡಗಳನ್ನು ನೋಡಿಯೇ ಇಲ್ಲ. ಇವು ಸ್ಥಳೀಯ ತಳಿಗಳಲ್ಲ. ತ್ವರಿತವಾಗಿ ವಿಸ್ತರಣೆಯಾಗುತ್ತಿರುವ ಈ ಕಳೆ ಗಿಡಗಳು ಕೆಲವರಿಗೆ ಅಲರ್ಜಿ ಉಂಟು ಮಾಡುತ್ತಿವೆ. ರಸ್ತೆ ಬದಿಯಲ್ಲಿ ಬೆಳೆಯುತ್ತಿದ್ದ ದೇಶಿ ತಳಿಯ ಕಳೆ ಗಿಡಗಳು ಮಾಯವಾಗುತ್ತಿವೆ. ಬೀಜ, ಗೊಬ್ಬರ ಸಾಗಣೆ ವೇಳೆ ಬೇರೆ ಕಡೆಯಿಂದ ಬಂದು, ಎಲ್ಲೆಡೆ ಪಸರಿಸಿರುವ ಸಾಧ್ಯತೆ ಇದೆ ಎನ್ನುತ್ತಾರೆ ರೈತರು.
ತಂಗಡಿಕೆ, ಬಾರೆಹಣ್ಣು, ಕಾರೆಹಣ್ಣು, ತಗಚಿ, ತೊಂಡೆ, ಉತ್ತರಾಣಿ, ದತ್ತೂರಿ, ತುಂಬೆಯಂತಹ ಅಡವಿ ಸಸಿಗಳ ಸಂತತಿ ಕ್ಷೀಣಿಸಿದೆ. ಕೆಲವು ಸಸಿಗಳ ಸುಳಿವೇ ಇಲ್ಲ. ಔಷಧೀಯ ಗುಣವುಳ್ಳ ಸಸ್ಯಗಳು ಪರಕೀಯ ಕಳೆಯ ಭರಾಟೆಯಲ್ಲಿ ಮರೆಯಾಗುತ್ತಿವೆ. ಗಿಡಗಂಟಿಗಳ ನಡುವೆ ಓಡಾಡಲು ಆಗದ ಸಾಧ್ಯವಾಗದಷ್ಟು ದಟ್ಟತೆವಾಗಿ ಬೆಳೆಯುವುದರಿಂದ ದನಕರುಗಳಿಗೆ ಸಿಗುತ್ತಿದ್ದ ಹುಲ್ಲು ಕೂಡಾ ಹುಟ್ಟುತ್ತಿಲ್ಲ ಎನ್ನುತ್ತಾರೆ ಸ್ಥಳೀಯರಾದ ಕಮಲಮ್ಮ.
Quote - ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಬೆಳೆದಿರುವ ಕಳೆಯ ಹೆಸರೇ ಗೊತ್ತಿಲ್ಲ. ರಸ್ತೆ ಇಕ್ಕೆಲಗಳಲ್ಲಿ ದಟ್ಟವಾಗಿ ಬೆಳೆದಿವೆ. ಕೂಲಿಕಾರ್ಮಿಕರಿಂದ ಕಳೆ ಕಟಾವು ಯಂತ್ರಗಳಿಂದ ತೆರವುಗೊಳಿಸಲಾಗುತ್ತಿದೆ ಶಿವಕುಮಾರ್ ಲೋಕೋಪಯೋಗಿ ಇಲಾಖೆ ಎಇ
Quote - ಈ ಕಳೆಗಳು ಸ್ಥಳೀಯ ಕಳೆಗಳನ್ನೇ ನುಂಗಿ ಹಾಕುವಷ್ಟು ಪ್ರಭಾವಶಾಲಿಯಾಗಿವೆ. ದನಕರುಗಳ ಹಸಿರು ಹುಲ್ಲು ಬೆಳೆಯಲು ಮಾರಕವಾಗಿವೆ. ದನಕರುಗಳೂ ಇವುಗಳನ್ನು ಮೂಸಿ ನೋಡುತ್ತಿಲ್ಲ ಶ್ರೀಕಾಂತ್ ತೋಟಗಾರಿಕಾ ಇಲಾಖೆ ಹಿರಿಯ ನಿರ್ದೇಶಕ
Cut-off box - ಭೂಮಿಯ ಬಹುಪಾಲು ಪೋಷಕಾಂಶ ಹೀರುವ ಸಸ್ಯ ಈಚೆಗೆ ಮುಳ್ಳುಸಜ್ಜೆ ಎಂಬ ಕಳೆ ವ್ಯಾಪಕವಾಗಿದೆ. ಸಿರಿಧಾನ್ಯವಾದ ಸಜ್ಜೆಯನ್ನೇ ಹೋಲುವ ಈ ಸಸ್ಯವು ಸಾಧಾರಣ ಕಳೆನಾಶಕಕ್ಕೂ ಬಗ್ಗುವುದಿಲ್ಲ. ರೈತರು ಆರಂಭದಲ್ಲಿಯೇ ಕೂಲಿ ಕಾರ್ಮಿಕರಿಂದ ಕಳೆ ಕೀಳಿಸುತ್ತಾರೆ. ಆದರೂ ಶೀಘ್ರವಾಗಿ ಬೆಳೆಯೊಂದಿಗೆ ಸ್ಪರ್ಧೆ ನಡೆಸುತ್ತಾ ಬೆಳೆಯುತ್ತದೆ. ಭೂಮಿಯ ಪೋಷಕಾಂಶವನ್ನು ಬಹುಪಾಲು ಹೀರುವ ಇದರ ನಿಯಂತ್ರಣವೇ ರೈತರಿಗೆ ಸವಾಲಾಗಿದೆ. ಕಾಂಡದ ಸುತ್ತಲೂ ತೀಕ್ಷ್ಣವಾದ ದಾರದ ದಪ್ಪನೆಯ ಮುಳ್ಳುಗಳಿಂದ ಆವೃತವಾಗಿದೆ ಎಂದು ವಿವರಿಸುತ್ತಾರೆ ಗೊಲ್ಲರಹಳ್ಳಿ ಹನುಮಂತು ಹಾಗೂ ಮಂಜು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.