ಸಾಸ್ವೆಹಳ್ಳಿ: ಜನವಸತಿ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸುವುದೇ ಸವಾಲು. ಚರಂಡಿ, ಕುಡಿಯುವ ನೀರು, ರಸ್ತೆ ಸೌಕರ್ಯಗಳು ಅತ್ಯಗತ್ಯ. ಆದರೆ ಗ್ರಾಮದ ಚೌಡೇಶ್ವರಿ ದೇವಸ್ಥಾನ ಬೀದಿಯಲ್ಲಿ ನಿರ್ಮಿಸಲಾಗಿರುವ ಚರಂಡಿಯೇ ಇಲ್ಲಿನ ನಾಗರಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಸಾಸ್ವೆಹಳ್ಳಿ ಗ್ರಾಮ ಪಂಚಾಯಿತಿ ವಾರ್ಡ್ ನಂಬರ್ 1ರ ಚೌಡೇಶ್ವರಿ ಬೀದಿಯಲ್ಲಿ 12 ವರ್ಷಗಳ ಹಿಂದೆಯೇ ಚರಂಡಿ ನಿರ್ಮಿಸಲಾಗಿದೆ. ಆದರೆ ಅವೈಜ್ಞಾನಿಕ ಕಾಮಗಾರಿಯಿಂದಾಗಿ ನಿತ್ಯವೂ ಸಮಸ್ಯೆ ಎದುರಿಸುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮೊದಲು ಕೊಳಚೆ ನೀರು ನಿಲ್ಲದೆ ಹರಿದು ಹೋಗುತ್ತಿತ್ತು. ಚರಂಡಿ ನಿರ್ಮಾಣವಾದ ಬಳಿಕ ಇಡೀ ಬೀದಿಯೇ ಕೊಳಗೇರಿಯಾಗಿ ಮಾರ್ಪಟ್ಟಿದೆ. ಚರಂಡಿಯಲ್ಲಿ ನೀರು ಹರಿಯುವಿಕೆಗೆ ಅನುಕೂಲವಾಗುವಂತೆ ಇಳಿಜಾರಿನ ವಿನ್ಯಾಸ ಮಾಡಿಲ್ಲ. ಅಲ್ಲದೇ, ಚರಂಡಿ ಮಾರ್ಗದ ಕೊನೆಯಲ್ಲಿ ವ್ಯಕ್ತಿಯೊಬ್ಬರು ಅದರ ಮೇಲೆ ಮನೆ ಕಟ್ಟಿಕೊಂಡಿರುವುದರಿಂದ, ನೀರು ಮುಂದೆ ಹರಿಯಲು ಆಸ್ಪದವೇ ಇಲ್ಲದಂತಾಗಿದೆ. ಹೀಗಾಗಿ ಕೊಳಚೆ ನೀರು ಹಿಮ್ಮುಖವಾಗಿ ಚಲಿಸಿ, ಯಾವಾಗಲೂ ನಿಂತ ಸ್ಥಿತಿಯಲ್ಲಿರುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.
‘ಮನೆಯ ಮುಂದಿನ ಚರಂಡಿಯಲ್ಲಿ ನೀರು ನಿಲ್ಲುವುದರಿಂದ ಗಬ್ಬು ವಾಸನೆಯ ಜೊತೆಗೆ ರೋಗಗಳೂ ಹೆಚ್ಚುತ್ತವೆ. ಸೊಳ್ಳೆಗಳ ಕಾಟ ಹೇಳುವಂತಿಲ್ಲ. ಮನೆಗೆ ಬರುವ ನೆಂಟರು ಹಿಡಿಶಾಪ ಹಾಕುತ್ತಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಕೇಳಿಕೊಂಡರೂ ಏನು ಪ್ರಯೋಜನವಾಗಿಲ್ಲ. ಚರಂಡಿ ನೀರು, ಚರಂಡಿಯಲ್ಲಿ ನಿಂತು ಕೊಳೆಯುತ್ತಿದೆ. ಇದಕ್ಕೆ ಪರಿಹಾರ ನೀಡಬೇಕು’ ಎನ್ನುತ್ತಾರೆ ರತ್ನಮ್ಮ.
ಈ ಹಿಂದಿನ ಪಿಡಿಒಗಳಾದ ಪರಮೇಶ್ ಕೊಳ್ಳೂರು, ಕರಿಸಿದ್ದಪ್ಪ ಅವರು ಸಮಸ್ಯೆ ಪರಿಹರಿಸುತ್ತೇವೆ ಎಂದಿದ್ದರೂ ಗಮನ ಹರಿಸಿಲ್ಲ ಎನ್ನುತ್ತಾರೆ ಸ್ಥಳೀಯರಾದ ಗಣೇಶ್.
ಈ ಸಮಸ್ಯೆಯಿಂದ ಬೇಸತ್ತು ಹಲವು ಬಾರಿ ಚರಂಡಿ ಮುಚ್ಚಬೇಕು ಎಂದೆನಿಸುತ್ತದೆ. ಚರಂಡಿ ಮುಚ್ಚಿದರೆ ಮಾತ್ರ ನಾವು ಆರೋಗ್ಯವಾಗಿರಬಹುದು. ಒಂದು ವೇಳೆ ನಮ್ಮ ಸಮಸ್ಯೆಗೆ ಪರಿಹಾರ ದೊರಕದಿದ್ದರೆ, ಮಳೆಗಾಲ ಮುಗಿದ ನಂತರ ನಾವೇ ಈ ಕೆಲಸ ಮಾಡುತ್ತೇವೆ ಎನ್ನುತ್ತಾರೆ ಬೀದಿಯ ಜನರು.
ಮತ ಕೇಳಲು ಬರುವ ಗ್ರಾಮ ಪಂಚಾಯಿತಿ ಸದಸ್ಯರಿಂದ ಹಿಡಿದು ಸಂಸದರವರೆಗೂ ಸಮಸ್ಯೆಯನ್ನು ವಿವರಿಸಿದ್ದೇವೆ. ಗೆದ್ದ ಬಳಿಕ ಅವರು ಈ ಕಡೆ ತಲೆ ಹಾಕುವುದಿಲ್ಲ.–ಧರ್ಮಬಾಯಿ, ನಿವಾಸಿ
ಮಳೆಗಾಲದ ಬಳಿಕ ಕಾಮಗಾರಿ: ಪಿಡಿಒ
ಚರಂಡಿ ಮರು ನಿರ್ಮಾಣಕ್ಕೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. ತಿಮ್ಮಯ್ಯನ ಮನೆಯಿಂದ ತಳವಾರ ಹನುಮಂತಪ್ಪ ಅವರ ಮನೆವರಿಗೂ ಕಾಮಗಾರಿ ನಡೆಯಲಿದೆ. ₹4 ಲಕ್ಷ ವೆಚ್ಚಕ್ಕೆ ಅನುಮೋದನೆ ದೊರಕಿದ್ದು ಕಾಮಗಾರಿಗೆ ಒಪ್ಪಿಗೆ ಸಿಕ್ಕಿದೆ.
ಮಳೆ ಪ್ರಮಾಣ ಕಡಿಮೆಯಾದ ಕೂಡಲೇ ಕಾಮಗಾರಿ ಪ್ರಾರಂಭ ಮಾಡಲಾಗುವುದು. ಚರಂಡಿಯ ನೀರು ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಲಸಾಗುವುದು ಎಂದು ಪಿಡಿಒ ಹನುಮಂತಪ್ಪ ಸ್ಪಷ್ಟನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.