ಮಲೇಬೆನ್ನೂರು: ಸಮೀಪದ ಹಿರೆಹಾಲಿವಾಣದಲ್ಲಿ ಬ್ರಿಟಿಷ್ ಆಡಳಿತದ ಅವಧಿಯಲ್ಲಿ ನಿರ್ಮಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ.
ಶಾಲೆಯಲ್ಲಿ ಪ್ರಸ್ತುತ 215 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ, ಸಮರ್ಪಕವಾದ ಕೊಠಡಿಗಳಿಲ್ಲ. ಹೊಸದಾಗಿ ನಿರ್ಮಿಸಿದ ಒಂದು ಕೊಠಡಿಯಲ್ಲಿ ಮುಖ್ಯಶಿಕ್ಷಕರು, ಸ್ಮಾರ್ಟ್ ಕ್ಲಾಸ್, ಗ್ರಂಥಾಲಯವಿದೆ. ಪ್ರೌಢಶಾಲೆಯ ಹಳೆಯ 3 ಕೊಠಡಿಗಳನ್ನು ಪ್ರಾಥಮಿಕ ಶಾಲೆಗೆ ಬಳಸಲಾಗುತ್ತಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಬಸವನಗೌಡ ಬೇಸರ ವ್ಯಕ್ತಪಡಿಸಿದರು.
ಶತಮಾನ ಪೂರೈಸಿದ ಶಾಲೆಗಳಿಗೆ ವಿಶೇಷ ಅನುದಾನ ನೀಡುವ, ಹೊಸ ಶಾಲಾ ಕೊಠಡಿ ನಿರ್ಮಿಸಿಕೊಡುವ ಜನಪ್ರತಿನಿಧಿಗಳ ಭರವಸೆ ಹಾಗೆಯೇ ಉಳಿದಿದೆ. ನಲಿ– ಕಲಿ ಕೊಠಡಿ, ಮಕ್ಕಳಿಗೆ ಕುಡಿಯುವ ನೀರು, ಆಟದ ಮೈದಾನ, ಉತ್ತಮ ಶೌಚಾಲಯ, ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಿಸುವ ಅಗತ್ಯವಿದೆ. ಬಿಸಿಯೂಟ ಸೇವನೆಗೆ ಭೋಜನಾಲಯದ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು.
ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿಯ ₹ 4.50 ಲಕ್ಷ ವೆಚ್ಚದಲ್ಲಿ ಮಂಗಳೂರು ಹೆಂಚಿನ 2 ಕಟ್ಟಡಗಳ ನವೀಕರಣ ಕೆಲಸ ನಡೆದಿರುವುದು ಸಮಾಧಾನ ತಂದಿದೆ ಎಂದು ಮುಖ್ಯಶಿಕ್ಷಕಿ ಎಂ. ಸುಧಾಮಣಿ ತಿಳಿಸಿದರು.
‘ಶತಮಾನ ಕಂಡಿರುವ ಗ್ರಾಮದ ಶಾಲೆ ನಮ್ಮೂರ ಹೆಮ್ಮೆ. ಶಾಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಮೂಲಕ ಗುಣಮಟ್ಟದ ಶಿಕ್ಷಣ
ನೀಡಲು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಎಸ್‌ಡಿಎಂಸಿ ರಾಜ್ಯ ಸಂಘಟನೆ ಪದಾಧಿಕಾರಿ ಶಿವಕ್ಳ ಆಂಜನೇಯ ಮನವಿ ಮಾಡಿದರು.
ನಿವೃತ್ತ ಶಿಕ್ಷಕ ರಾದ ಕೆಂಚಪ್ಪ, ಓಂಕಾರಪ್ಪ, ಶರಣಪ್ಪ ಸೇರಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಾವು ಓದಿದ ಶಾಲೆಯಲ್ಲಿಯೇ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದು ವಿಶೇಷ. ಕೆಲವು ವಿದ್ಯಾರ್ಥಿಗಳು ರಾಜಕೀಯ, ಸಹಕಾರ ಕ್ಷೇತ್ರ, ವೈದ್ಯಕೀಯ, ಎಂಜಿನಿಯರುಗಳಾಗಿ ಸೇವೆ
ಸಲ್ಲಿಸುತ್ತಿದ್ದಾರೆ.
105 ವರ್ಷಗಳ ಉರ್ದು ಶಾಲೆ: ಮಲೇಬೆನ್ನೂರು ಪಟ್ಟಣದಲ್ಲಿ 1918ರಲ್ಲಿ ಅಲ್ಪಸಂಖ್ಯಾತರಿಗಾಗಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಪಾಠಶಾಲೆ ನಿರ್ಮಿಸಿದ್ದು 105 ವರ್ಷಗಳ ಇತಿಹಾಸ ಹೊಂದಿದೆ.
ಶಾಲೆಯಲ್ಲಿ ಹಾಲಿ 243 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕನ್ನಡ ಹಾಗೂ ಹೊಸದಾಗಿ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಹಳೆಯ ಕಟ್ಟಡ ತೆರವುಗೊಳಿಸಿ ಎರಡು ಅಂತಸ್ತಿನ 12 ಕೊಠಡಿ ನಿರ್ಮಿಸಲಾಗಿದೆ. ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ರಾಜಕೀಯ, ಸಹಕಾರ ಕ್ಷೇತ್ರ, ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ಸೇವೆ
ಸಲ್ಲಿಸುತ್ತಿದ್ದಾರೆ.
ಶಾಲೆಗೆ ಮುಖ್ಯವಾಗಿ ಕಾಂಪೌಂಡ್, ಸ್ಮಾರ್ಟ್ ಕ್ಲಾಸ್, ಉತ್ತಮ ಗ್ರಂಥಾಲಯ, ಪ್ರಯೋಗಾಲಯ, ಪೀಠೋಪಕರಣ ಹಾಗೂ ಸಭಾಂಗಣದ ಅಗತ್ಯವಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಮೊಹ್ಮದ್ ಖಲೀಲ್ ಉಲ್ಲಾ.
.........
‘ಇಂಗ್ಲಿಷ್ ಬೋಧನೆಗೆ ಕ್ರಮ ಕೈಗೊಳ್ಳಿ’
ಶತಮಾನೋತ್ಸವ ಪೂರೈಸಿರುವ ಕುಣಿಬೆಳೆಕೆರೆ ಶಾಲಾ ಕಟ್ಟಡದ ಒಂದು ಭಾಗವನ್ನು ಒಡೆದು ಹೊಸದಾಗಿ ಒಂದು ಕೊಠಡಿ ನಿರ್ಮಿಸಲಾಗಿದೆ.
ಇನ್ನೊಂದು ಭಾಗದಲ್ಲಿ ಶಾಲಾ ಕಟ್ಟಡದ ಚಾವಣಿ, ನೆಲಹಾಸು ದುರಸ್ತಿ ಕಂಡಿವೆ. ಸಂಪೂರ್ಣ ನವೀಕರಣಕ್ಕೆ ಕಾಯುತ್ತಿದೆ. ನಾಲ್ಕು ತರಗತಿಗಳ ಪಾಠ ಹಳೆ ಶಾಲಾ ಕಟ್ಟಡದಲ್ಲಿ ಸಾಗಿದೆ.
ನೂರು ವರ್ಷ ಹಳೆಯದಾದ ಶಾಲೆಯ ಕಟ್ಟಡವನ್ನು ಸರ್ಕಾರ ಪುನರ್ ನಿರ್ಮಿಸಬೇಕು. ಇಂಗ್ಲಿಷ್ ಬೋಧನೆಗೆ ಕ್ರಮ ಕೈಗೊಳ್ಳಬೇಕು ಎಂದು ಶಾಲೆಯ ಹಳೆಯ ವಿದ್ಯಾರ್ಥಿ ರಾಮಶ್ರೇಷ್ಠಿ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.