ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಆಗರಬನ್ನಿಹಟ್ಟಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು 7ನೇ ವೇತನ ಆಯೋಗದ ವರದಿ ಜಾರಿ ಬಳಿಕ ಬಂದ ಮೊದಲ ವೇತನದಲ್ಲಿನ ಸ್ವಲ್ಪ ಭಾಗದಲ್ಲಿ ತಮ್ಮ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ, ಟ್ರ್ಯಾಕ್‌ಸೂಟ್‌ಗಳನ್ನು ನೀಡುವ ಮೂಲಕ ಶೈಕ್ಷಣಿಕ ಕಾಳಜಿ ಮೆರೆದಿದ್ದಾರೆ.
ಶಾಲೆಯ ಮುಖ್ಯಶಿಕ್ಷಕ ಸೈಯದ್ ಇಲ್ಯಾಸ್ ಅಹಮ್ಮದ್ ಅವರು ಶಿಕ್ಷಕರ ಸಭೆ ಕರೆದು ಮೊದಲ ಬಾರಿಗೆ ಹೆಚ್ಚಾದ ವೇತನದಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಟ್ರ್ಯಾಕ್ ಸೂಟ್ ಕೊಡಿಸುವ ವಿಚಾರವನ್ನು ಪ್ರಸ್ತಾಪಿಸಿದಾಗ ಇತರ ಶಿಕ್ಷಕರಾದ ಜಬೀನ್, ಖರತ್ ಉಲ್ ಆಯಿನ್, ಶಾಹೀನ್, ಸಫಿನಾ ಬಾನು, ಎಂ.ಎಸ್. ಸುಮಿತ್ರಾ, ಮುಮ್ತಾಜ್ ಬಾನು, ಆಫ್ರೀನ್ ತಾಜ್ ಒಪ್ಪಿಗೆ ಸೂಚಿಸಿದರು.
ಚನ್ನಗಿರಿಯಿಂದ 4 ಕಿ.ಮೀ. ದೂರದಲ್ಲಿರುವ ಗ್ರಾಮದ ಈ ಶಾಲೆಯಲ್ಲಿ ಪ್ರಸಕ್ತ ವರ್ಷ 1ರಿಂದ 7ನೇ ತರಗತಿವರೆಗೆ 142 ವಿದ್ಯಾರ್ಥಿಗಳು ಕಲಿಯುತ್ತಿದ್ದು, ‘ಶಾಲೆ ಉಳಿದರೆ ಮಕ್ಕಳು, ಮಕ್ಕಳಿದ್ದರೆ ನಾವು ಎಂಬ ತಿಳಿವಳಿಕೆಯೊಂದಿಗೆ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟ್ ನೀಡುವ ವಿಚಾರವನ್ನು ಶಿಕ್ಷಕರ ಮುಂದಿರಿಸಿದಾಗ ಯಾರೊಬ್ಬರೂ ತಕರಾರು ಎತ್ತದೆ ಉದ್ದೇಶವನ್ನು ಬೆಂಬಲಿಸಿದರು. ಎಲ್ಲರೂ ಸೇರಿ ₹ 50,000 ಸೇರಿಸಿದೆವು. ಇದರ ಜೊತೆಗೆ ದಾನಿಗಳಿಂದಲೂ ನೆರವು ಪಡೆದು ₹ 12,000 ವೆಚ್ಚದಲ್ಲಿ ಎಲ್ಲ ಮಕ್ಕಳಿಗೂ ಶಾಲಾ ಗುರುತಿನ ಚೀಟಿ ಮತ್ತು ₹ 54,000 ವೆಚ್ಚದಲ್ಲಿ ಟ್ರ್ಯಾಕ್‌ಸೂಟ್ ನೀಡಲು ಸಾಧ್ಯವಾಯಿತು’ ಎಂದು ಮುಖ್ಯಶಿಕ್ಷಕರು ತಿಳಿಸಿದರು.
ಶಿಕ್ಷಕರ ಕೊಡುಗೆಯಿಂದ ವಿದ್ಯಾರ್ಥಿಗಳು ವಿಶೇಷ ದಿನಗಳು, ರಾಷ್ಟ್ರೀಯ ಹಬ್ಬಗಳ ಆಚರಣೆ ಸಂದರ್ಭದಲ್ಲಿ ಟ್ರ್ಯಾಕ್‌ಸೂಟ್ ಹಾಕಿಕೊಂಡು ಶಾಲೆಗೆ ತೆರಳಲು ಸಾಧ್ಯವಾಗಲಿದೆ. ಪ್ರತಿ ಶಾಲೆಯಲ್ಲೂ ಇಂತಹ ಶಿಕ್ಷಕರಿದ್ದರೆ, ಸರ್ಕಾರಿ ಶಾಲೆಗಳೂ ಅಭಿವೃದ್ಧಿ ಹೊಂದಿ ಬಡಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅಶ್ಫಾಖ್ ಅಹಮ್ಮದ್ ತಿಳಿಸಿದರು.
‘ಸರ್ಕಾರಿ ಶಾಲೆಗಳ ಕಟ್ಟಡಗಳ ದುಃಸ್ಥಿತಿ, ಗುಣಮಟ್ಟದ ಶಿಕ್ಷಣದ ಕೊರತೆಯ ಕಾರಣ ಪಾಲಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿರುವುದನ್ನು ನೋಡುತ್ತಿದ್ದೇವೆ. ಆದರೆ, ಗ್ರಾಮದ ಶಾಲೆಗೆ ಪಟ್ಟಣದಿಂದ ಮಕ್ಕಳು ಬಂದು ದಾಖಲಾಗಿರುವುದು ನಮ್ಮ ಹೆಮ್ಮೆ. ಶಾಲೆಯಲ್ಲಿ ಸ್ವಚ್ಛತೆ, ಕಲಿಕೆಗೆ ಶಿಕ್ಷಕರು ಒತ್ತು ನೀಡಿದ್ದಾರೆ. ಪೀಠೋಪಕರಣ, ಪಾಠೋಪಕರಣ, ಶೌಚಾಲಯ, ಕುಡಿಯುವ ನೀರು ಇನ್ನಿತರ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಶಿಕ್ಷಕರ ಪರಿಶ್ರಮದ ಕಾರಣ ಸ್ವಚ್ಛ ಶಾಲೆ, ಪರಿಸರ ಮಿತ್ರ ಇತ್ಯಾದಿ ಪ್ರಶಸ್ತಿಗಳು ಲಭಿಸಿರುವುದು ಸಂತಸದ ವಿಷಯ. ಕನ್ನಡ ಹಾಗೂ ಉರ್ದು ಶಾಲೆಗಳ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯ ದೃಷ್ಟಿಯಿಂದ ನಮ್ಮ ಕೈಲಾದ ಸೇವೆ ನೀಡುತ್ತಾ ಬಂದಿದ್ದೇವೆ’ ಎನ್ನುತ್ತಾರೆ ದಾನಿ ಪ್ರವೀಣ್ ಪಿ.ಟಿ.
ಸರ್ಕಾರದ ಸೌಲಭ್ಯದಲ್ಲಿ ಸ್ವಲ್ಪವನ್ನು ವಿದ್ಯಾರ್ಥಿಗಳ ಅಗತ್ಯಕ್ಕೆ ವಿನಿಯೋಗಿಸಿರುವ ಆಗರಬನ್ನಿಹಟ್ಟಿ ಸರ್ಕಾರಿ ಉರ್ದು ಶಾಲಾ ಶಿಕ್ಷಕರ ನಡೆ ಶ್ಲಾಘನೀಯಜಿ.ಕೊಟ್ರೇಶ್ ಡಿಡಿಪಿಐ
ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿರುತ್ತಾರೆ. ಶಿಕ್ಷಕರ ಶೈಕ್ಷಣಿಕ ಕಾಳಿಜಿ ಇತರರಿಗೆ ಮಾದರಿ ಎಲ್. ಜಯಪ್ಪ ಬಿಇಒ ಚನ್ನಗಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.