ADVERTISEMENT

ದಾವಣಗೆರೆ | ಜಿಲ್ಲೆಗೆ ನಿಗದಿಯಾಗಿದೆ ₹ 345 ಕೋಟಿ: ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಎಸ್‌ಸಿಎಸ್‌ಪಿ–ಟಿಎಸ್‌ಪಿ ಯೋಜನೆಯ ಪ್ರಗತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2024, 15:32 IST
Last Updated 22 ಆಗಸ್ಟ್ 2024, 15:32 IST
ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅಧ್ಯಕ್ಷತೆಯಲ್ಲಿ ಎಸ್‌ಸಿಎಸ್‌ಪಿ–ಟಿಎಸ್‌ಪಿ ಅನುದಾನದ ಪ್ರಗತಿ ಪರಿಶೀಲನಾ ಸಭೆ ಗುರುವಾರ ನಡೆಯಿತು
ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅಧ್ಯಕ್ಷತೆಯಲ್ಲಿ ಎಸ್‌ಸಿಎಸ್‌ಪಿ–ಟಿಎಸ್‌ಪಿ ಅನುದಾನದ ಪ್ರಗತಿ ಪರಿಶೀಲನಾ ಸಭೆ ಗುರುವಾರ ನಡೆಯಿತು   

ದಾವಣಗೆರೆ: ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ (ಟಿಎಸ್‌ಪಿ) ಅನ್ವಯ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜಿಲ್ಲೆಗೆ ₹ 345.5 ಕೋಟಿ ಅನುದಾನ ನಿಗದಿಯಾಗಿದ್ದು, ಈ ಪೈಕಿ ₹ 125 ಕೋಟಿ ಅನುದಾನ ಬಿಡುಗಡೆಯಾಗಿದೆ.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಮಾಹಿತಿ ನೀಡಲಾಯಿತು.

‘ಕ್ರಿಯಾ ಯೋಜನೆಯ ಅನ್ವಯ ಬಿಡುಗಡೆಯಾದ ಮೊತ್ತದಲ್ಲಿ ₹ 98 ಕೋಟಿ ವೆಚ್ಚ ಮಾಡಲಾಗಿದೆ. ನಿಗದಿತ ಗುರಿಯಲ್ಲಿ ಶೇ 28ರಷ್ಟು ಸಾಧನೆ ಮಾಡಲಾಗಿದೆ. ನಿಗದಿತ ಕಾಲಮಿತಿಯಲ್ಲಿ ಅನುದಾನ ಬಳಕೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

ಅನುದಾನ ಬಳಕೆಗೆ ಇರಲಿ ಎಚ್ಚರ:

ಎಸ್‌ಸಿಎಸ್‌ಪಿ–ಟಿಎಸ್‌ಪಿ ಯೋಜನೆಯಡಿ ಮೂಲಸೌಲಭ್ಯ ಕಲ್ಪಿಸುವಾಗ ಅನುದಾನವನ್ನು ಎಚ್ಚರಿಕೆಯಿಂದ ಬಳಸಬೇಕು. ಪರಿಶಿಷ್ಟ ಸಮುದಾಯ ಹೆಚ್ಚಿರುವ ಕಡೆಗೆ ಮಾತ್ರ ಅನುದಾನ ವಿನಿಯೋಗ ಮಾಡಬೇಕು. ಜನಸಂಖ್ಯೆ ಇಲ್ಲದಿರುವ ಸ್ಥಳದಲ್ಲಿ ಅನುದಾನ ಬಳಸಿದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಬೇಕಾಗುತ್ತದೆ’ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

‘ಇಲಾಖೆಗಳು ಸಲ್ಲಿಸಿದ ಕ್ರಿಯಾ ಯೋಜನೆಯ ಅನ್ವಯ ಅನುದಾನ ಬಿಡುಗಡೆಯಾಗಿದೆ. ಸಂಬಂಧಿಸಿದ ಫಲಾನುಭವಿಗಳಿಂದ ಮೊದಲೇ ಅರ್ಜಿ ಆಹ್ವಾನಿಸಬೇಕು. ಈ ಯೋಜನೆಯನ್ವಯ ಸೃಜಿಸುವ ಆಸ್ತಿ ಹಾಗೂ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಯಿಂದ ಪರಿಶಿಷ್ಟ ಸಮುದಾಯಕ್ಕೆ ಅನುಕೂಲವಾಗಬೇಕು’ ಎಂದು ಕಿವಿಮಾತು ಹೇಳಿದರು.

‘ವಿದ್ಯುತ್ ಮೂಲಸೌಲಭ್ಯ ಕಲ್ಪಿಸಲು ಹರಿಹರದ ಬೆಸ್ಕಾಂ ವಿಭಾಗಕ್ಕೆ ಪರಿಶಿಷ್ಟ ಜಾತಿ ಉಪಯೋಜನೆಯಡಿ ₹ 70 ಲಕ್ಷ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿ ₹ 35 ಲಕ್ಷ ಬಿಡುಗಡೆಯಾಗಿದೆ’ ಎಂಬ ಮಾಹಿತಿಯನ್ನು ‘ಬೆಸ್ಕಾಂ’ ಅಧಿಕಾರಿ ಸಭೆಗೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ.ನಾಗರಾಜ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಂತೇಶ್ ಇದ್ದರು.

Highlights - ಜನಸಂಖ್ಯೆ ಹೆಚ್ಚಿರುವೆಡೆ ಅನುದಾನ ಬಳಸಿ ಕಾಲಮಿತಿಯಲ್ಲಿ ಬಳಕೆಯಾಗಬೇಕು ಅನುದಾನ ಅರ್ಜಿ ಆಹ್ವಾನಿಸಿ ಫಲಾನುಭವಿ ಆಯ್ಕೆ ಮಾಡಿ

Quote - ಫಲಾನುಭವಿಗಳ ಆಯ್ಕೆಯನ್ನು ‘ಬೆಸ್ಕಾಂ’ ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕು. ಅಧಿಕ ಮಳೆಯಿಂದ ಹಾಳಾಗಿರುವ ಹೊನ್ನಾಳಿ ಆಸ್ಪತ್ರೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಪರಿಶೀಲಿಸಿ ವರದಿ ನೀಡಬೇಕು. ಜಿ.ಎಂ.ಗಂಗಾಧರಸ್ವಾಮಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.