ದಾವಣಗೆರೆ: ಜಿಲ್ಲೆಯ ನಗರಾಡಳಿತಗಳ ವ್ಯಾಪ್ತಿಯಲ್ಲಿ ನಿವೇಶನ, ಕಟ್ಟಡಗಳ ಆಸ್ತಿ ಹಕ್ಕಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ದಾಖಲಿಸುವ ಇ– ಖಾತಾ ಸರ್ವರ್ ಕೆಲವು ದಿನಗಳಿಂದ ಸ್ತಬ್ಧಗೊಂಡಿದೆ. ಇದರಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ.
ಇ– ಖಾತಾ ಕೋರಿ ಚಲನ್ ಮೂಲಕ ಶುಲ್ಕ ಭರಿಸಿದ ಮೇಲೆ ನಿವೇಶನ, ಕಟ್ಟಡ ಇರುವ ಸ್ಥಳಕ್ಕೆ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಯ ಸಿಬ್ಬಂದಿ ತೆರಳಿ ಆಸ್ತಿ ಗುರುತಿಸಬೇಕು. ಬಳಿಕ ಮತ್ತೆ ಇ–ಖಾತಾದಲ್ಲಿ ನಮೂದಿಸಿ ಎಲ್ಲ ದಾಖಲೆಗಳು ಸರಿ ಇದ್ದರೆ ಅನುಮೋದನೆ ನೀಡಬೇಕು. ಈಗ ಸರ್ವರ್ ಸಮಸ್ಯೆ ಆಗಿರುವುದರಿಂದ ಒಂದು ವಾರದಿಂದ ಅನುಮೋದನೆ ದೊರೆಯುತ್ತಿಲ್ಲ.
‘ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ನಿತ್ಯ ಇ–ಖಾತೆ ಮಾಡಿಸಿಕೊಳ್ಳಲು ಬಯಸುವ ನೂರಾರು ಜನ ಬರಿಗೈಲಿ ವಾಪಸ್ಸಾಗುತ್ತಿದ್ದಾರೆ. ಇ–ಖಾತಾ ವ್ಯವಸ್ಥೆ ಜಾರಿಯಾದ ಮೇಲೆ ಅಲೆದಾಟ ಹೆಚ್ಚಾಗಿದೆ. ಒಂದು ವಾರದಲ್ಲಿ ಇ–ಖಾತಾ ಮಾಡಿಕೊಡುವುದಾಗಿ ಅಧಿಕಾರಿ ವರ್ಗ, ಸರ್ಕಾರ ಹೇಳುತ್ತಿದೆ. ಒಂದೂವರೆ ತಿಂಗಳಾದರೂ ಆಗುವುದಿಲ್ಲ. ಪ್ರತಿ ತಿಂಗಳು ಏಳೆಂಟು ದಿನ ಸರ್ವರ್ ಬ್ಯುಸಿ ಅನ್ನುತ್ತಾರೆ’ ಎಂದು ಪಾಲಿಕೆ ಸದಸ್ಯ ಎ. ನಾಗರಾಜ್ ದೂರಿದರು.
ಸರ್ವರ್ ಸರಿ ಇದ್ದಾಗಲೂ ಇ–ಖಾತಾ ಮಾಡಿಕೊಡುವುದಿಲ್ಲ. ಹಣ ಸಂದಾಯವಾದರಷ್ಟೇ ಕೆಲಸ ಆಗುತ್ತಿದೆ. ಇ–ಖಾತಾ ಭ್ರಷ್ಟಾಚಾರವನ್ನು ಹೆಚ್ಚಿಸಿದೆ. ಕೂಡಲೇ ಈ ವ್ಯವಸ್ಥೆ ರದ್ದು ಮಾಡಿ ಮ್ಯಾನ್ಯುವಲ್ ಅಬ್‌ಸ್ಟ್ರಾಕ್ಟ್ ಸಿಸ್ಟಂ ಜಾರಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
‘ಕೆಲವು ದಿನಗಳಿಂದ ಸರ್ವರ್ ಸಮಸ್ಯೆ ಇದೆ. ಇ–ಖಾತಾ ಮಾತ್ರವಲ್ಲ, ಕಂದಾಯ ಕಟ್ಟುವುದಕ್ಕೂ ಸಮಸ್ಯೆಯಾಗಿದೆ. ಬೆಂಗಳೂರಿನ ತಾಂತ್ರಿಕ ತಂಡ ಸೋಮವಾರ ರಾತ್ರಿಯ ಒಳಗೆ ಸರಿಪಡಿಸುವುದಾಗಿ ತಿಳಿಸಿದೆ. ಒಂದು ವೇಳೆ ಸರಿ ಹೋಗದಿದ್ದರೆ ನಾಳೆಯಿಂದ ಮ್ಯಾನ್ಯುವಲ್ ಖಾತಾ ನೀಡುತ್ತೇವೆ’ ಎಂದು ದಾವಣಗೆರೆ ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಲಕ್ಷ್ಮೀ ಎಸ್. ‘ಪ್ರಜಾವಾಣಿ’ಗೆ ತಿಳಿಸಿದರು.
ಇದು ದಾವಣಗೆರೆ ಮಹಾನಗರ ಪಾಲಿಕೆಯೊಂದರ ಸಮಸ್ಯೆ ಅಲ್ಲ. ತಾಂತ್ರಿಕ ತೊಂದರೆ ಆಗಿರುವುದರಿಂದ ರಾಜ್ಯದಾದ್ಯಂತ ಸಮಸ್ಯೆ ಇದೆ. ತಂತ್ರಜ್ಞರು ಸರಿ ಮಾಡುತ್ತಿದ್ದಾರೆ ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.