ಪ್ರಜಾವಾಣಿ ವಾರ್ತೆ
ದಾವಣಗೆರೆ: ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯ ಸಾವಿಗೆ ಕಾರಣವಾದ ಪತಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹ 40,000 ದಂಡ ವಿಧಿಸಿ ಆದೇಶಿಸಿದೆ. ಚನ್ನಗಿರಿ ತಾಲ್ಲೂಕಿನ ಮೇದುಗೊಂಡನಹಳ್ಳಿ ಗ್ರಾಮದ ಮಂಜುನಾಥ ಶಿಕ್ಷೆಗೊಳಗಾದ ಅಪರಾಧಿ.
ಪ್ರಕರಣ:
2020ರಲ್ಲಿ ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಮಾರುತಿ ನಗರ ನಿವಾಸಿ ಶೋಭಾರಾಣಿ ಹಾಗೂ ಮೇದುಗೊಂಡನಹಳ್ಳಿಯ ಮಂಜುನಾಥ ಅವರ ವಿವಾಹ ನಡೆದಿತ್ತು.
‘ಮದುವೆ ವೇಳೆ ಮಂಜುನಾಥ್‌ಗೆ 5 ತೊಲ ಬಂಗಾರ, 15 ತೊಲ ಬೆಳ್ಳಿಯನ್ನು ವರದಕ್ಷಿಣೆಯಾಗಿ ನೀಡಿದ್ದೆವು. ₹ 3 ಲಕ್ಷ ಖರ್ಚು ಮಾಡಿ ಮದುವೆ ಮಾಡಿದ್ದೆವು. ಆ ಬಳಿಕ ಮಂಜುನಾಥ್ ಮತ್ತು ಅವರ ಮನೆಯವರು ಹೆಚ್ಚಿನ ವರದಕ್ಷಿಣೆ ತರುವಂತೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದರು. ಇದರಿಂದ ಮನನೊಂದು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಶೋಭಾರಾಣಿ ತಾಯಿ ನಿಂಗಮ್ಮ ದೂರು ನೀಡಿದ್ದರು.
ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಡಿವೈಎಸ್‌ಪಿ ಪ್ರಶಾಂತ್ ಮುನ್ನೋಳ್ಳಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್ ವಿಚಾರಣೆ ನಡೆಸಿ, ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರಿ ವಕೀಲ ಕೆ.ಎಸ್.ಸತೀಶ್ ನ್ಯಾಯ ಮಂಡನೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.