ADVERTISEMENT

ನುಡಿದಂತೆ ನಡೆದಾಗ ಬಸವ ತತ್ವಕ್ಕೆ ಅರ್ಥ: ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2023, 4:41 IST
Last Updated 20 ಡಿಸೆಂಬರ್ 2023, 4:41 IST
<div class="paragraphs"><p>ದಾವಣಗೆರೆಯಲ್ಲಿ ಮಂಗಳವಾರ ಆಯೋಜಿಸಿದ್ದ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಸೇವಾ ದೀಕ್ಷೆ ಹಾಗೂ ಶರಣ ಚಿಂತನ ಕಾರ್ಯಕ್ರಮವನ್ನು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಬಸವಣ್ಣನವರ ಮೂರ್ತಿಗೆ ಪುಷ್ಪಾರ್ಚನೆ ಮೂಲಕ ಉದ್ಘಾಟಿಸಿದರು &nbsp;&nbsp;&nbsp;&nbsp;</p></div>

ದಾವಣಗೆರೆಯಲ್ಲಿ ಮಂಗಳವಾರ ಆಯೋಜಿಸಿದ್ದ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಸೇವಾ ದೀಕ್ಷೆ ಹಾಗೂ ಶರಣ ಚಿಂತನ ಕಾರ್ಯಕ್ರಮವನ್ನು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಬಸವಣ್ಣನವರ ಮೂರ್ತಿಗೆ ಪುಷ್ಪಾರ್ಚನೆ ಮೂಲಕ ಉದ್ಘಾಟಿಸಿದರು     

   

 –ಪ್ರಜಾವಾಣಿ ಚಿತ್ರ

ದಾವಣಗೆರೆ: ‘ಬಸವ ತತ್ವದ ಅನುಯಾಯಿಗಳು ನುಡಿದಂತೆ ನಡೆಯಬೇಕು. ನಡೆದಂತೆ ನುಡಿಯಬೇಕು. ನಮ್ಮ ನಡೆ ನುಡಿ ಒಂದಾಗದಿದ್ದರೆ ಬಸವ ತತ್ವದಿಂದ ಸಂಪೂರ್ಣವಾಗಿ ದೂರ ಇದ್ದೇವೆ ಎಂದು ಅರ್ಥ. ಈ ದ್ವಂದ್ವ ಮನೋಭಾವ ಇದ್ದಾಗ ಒಂದು ತತ್ವಕ್ಕೆ ಬದ್ಧರಾಗಲು ಸಾಧ್ಯವಿಲ್ಲ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ADVERTISEMENT

ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ದಾವಣಗೆರೆ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಸೇವಾ ದೀಕ್ಷೆ ಹಾಗೂ ಶರಣ ಚಿಂತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಲಿಂಗಾಯತ ತಾಯಂದಿರು ಸೇರಿದಂತೆ ಎಲ್ಲರೂ ಇಷ್ಟಲಿಂಗ ಪೂಜೆ ಮಾಡದೇ ಇದ್ದರೆ ಇನ್ನೊಬ್ಬರಿಗೆ ಹೇಳುವ ನೈತಿಕತೆ ಕಳೆದುಕೊಳ್ಳುತ್ತೇವೆ. ನಡೆಯೇ ಬೇರೆ, ನುಡಿಯುವುದೇ ಬೇರೆ ಆಗಬಾರದು. ನುಡಿದಂತೆ ನಡೆದಾಗ ಮಾತ್ರ ಆ ತತ್ವ ನಮ್ಮೊಳಗೆ ‍ಪ್ರವೇಶ ಮಾಡುತ್ತದೆ’ ಎಂದು ಹೇಳಿದರು.

‘ಬಸವಣ್ಣನವರು ಅಲ್ಪ ಅವಧಿಯಲ್ಲಿ ಕ್ರಾಂತಿ ಮಾಡಲು ಮುಖ್ಯ ಕಾರಣವಾಗಿದ್ದು, ಅವರು ತಳಸಮುದಾಯದ ಜನರನ್ನು ಹತ್ತಿರಕ್ಕೆ ಕರೆದುಕೊಂಡು ಜಾಗೃತಗೊಳಿಸಿದ್ದು. ಲಿಂಗಾಯತ ಧರ್ಮ, ಬಸವತತ್ವ, ನಮ್ಮದು ವಿಶ್ವಧರ್ಮ ಎಂದು ಹೇಳುವ ನಾವು ಅವುಗಳನ್ನು ಅನುಸರಿಸದಿದ್ದರೆ ಈ ತತ್ವಗಳಿಗೆ ಬೆಲೆ ಇಲ್ಲ. ಈ ನಿಟ್ಟಿನಲ್ಲಿ ಪದಾಧಿಕಾರಿಗಳು ಇಷ್ಟಲಿಂಗ ದೀಕ್ಷೆ ಪಡೆದುಕೊಳ್ಳುವುದಷ್ಟೇ ಅಲ್ಲ. ಗುಡಿಗೋಪುರ ಸುತ್ತುವುದಿಲ್ಲ ಎಂದು ಪ್ರತಿಯೊಬ್ಬರೂ ಹೇಳಬೇಕು’ ಎಂದು ಸಲಹೆ ನೀಡಿದರು.

‘ಪ್ರತಿಯೊಬ್ಬರಲ್ಲೂ ಬದ್ಧತೆ ಮುಖ್ಯ. ಆ ಬದ್ಧತೆಗೆ ಅನುಗುಣವಾಗಿ ಬದುಕಿದರೆ ಬಸವಣ್ಣ ಮೆಚ್ಚುತ್ತಾನೆ. ಜನಮೆಚ್ಚಿ ನಡೆದುಕೊಳ್ಳುವವರಿಗಿಂತ ಮನಮೆಚ್ಚಿ ನಡೆದುಕೊಳ್ಳುವವರು ಮುಖ್ಯ. ಅಂತಹ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಿದಾಗ ಬಸವತತ್ವವನ್ನು ನಾವು ಮತ್ತೆ ಜಾರಿಯಲ್ಲಿ ತರಲು ಸಾಧ್ಯ’ ಎಂದರು.

‘ಪ್ರಪಂಚದಲ್ಲೇ ವೈಜ್ಞಾನಿಕ ಧರ್ಮ ಎಂದರೆ ಅದು ಲಿಂಗಾಯತ ಧರ್ಮ. ಲಿಂಗ ಧರಿಸಿ ಕಾಯಕ ಮಾಡಿ ಜೀವನ ಮಾಡಬೇಕು. ಶರಣರ ಧರ್ಮವನ್ನು ಪಾಲಿಸದೇ ಇದ್ದಲ್ಲಿ ಲಿಂಗಾಯತ ಧರ್ಮ ಅಲ್ಪಸಂಖ್ಯಾತರ ಧರ್ಮವಾಗುತ್ತದೆ’ ಎಂದು ಚನ್ನಗಿರಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಎಚ್.ಎಸ್. ಮಲ್ಲಿಕಾರ್ಜುನಪ್ಪ ಹೇಳಿದರು.

ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ದೀಕ್ಷೆಯನ್ನು ಬೋಧಿಸಿದರು. ಎಚ್.ಆರ್. ಲಿಂಗರಾಜ್, ಎಂ.ಬಿ.ರುದ್ರಗೌಡ, ಎನ್.ಜಿ.ಪುಟ್ಟಸ್ವಾಮಿ, ಕೆ.ಬಿ.ಕೊಟ್ರೇಶ್, ಎನ್.ಎಸ್.ರಾಜು, ಹುಚ್ಚಪ್ಪ ಮಾಸ್ತರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.