ದಾವಣಗೆರೆ: ಕರ್ನಾಟಕದ ಇತಿಹಾಸದಲ್ಲಿ ಮಠಗಳ ಪರಂಪರೆ ಬಹುದೊಡ್ಡದು. ಅವುಗಳಲ್ಲಿ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠವೂ ಒಂದು. ಮಠಕ್ಕೆ ಸುಮಾರು 900 ವರ್ಷಗಳ ಇತಿಹಾಸವಿದ್ದರೂ ಅದು ಪ್ರಖರತೆ ಕಂಡಿದ್ದು ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಕಾಲದಲ್ಲಿ. ಅವರು 1940ರ ಬಸವ ಜಯಂತಿಯಂದು 20ನೇ ತರಳಬಾಳು ಜಗದ್ಗುರುಗಳಾಗಿ ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನದ ಪೀಠವನ್ನಲಂಕರಿಸಿದರು. ಜನರ ಅಜ್ಞಾನ ನಿವಾರಣೆಗಾಗಿ ಶಿಕ್ಷಣವೇ ಅಸ್ತ್ರ ಎಂದು ತಿಳಿದು 1946ರಲ್ಲೇ ಸಿರಿಗೆರೆಯಲ್ಲಿ ಪ್ರೌಢಶಾಲೆಯನ್ನು, 1962ರಲ್ಲಿ ‘ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ’ಯನ್ನು ಪ್ರಾರಂಭಿಸಿದರು. ನಾಗರಿಕ ಸೌಲಭ್ಯಗಳಿಲ್ಲದ ನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ನೂರಾರು ಶಾಲಾ–ಕಾಲೇಜು, ಪ್ರಸಾದ ನಿಲಯಗಳನ್ನು ತೆರೆದರು.
ಶಿವಕುಮಾರ ಸ್ವಾಮೀಜಿ ತಾವು ಪ್ರತಿನಿಧಿಸುವ ಸಮಾಜದಲ್ಲಿ ಬಡತನ, ಅನಕ್ಷರತೆಯಂತಹ ಸಾಂಪ್ರದಾಯಿಕ ಸಮಸ್ಯೆಗಳ ಜೊತೆಗೆ ಆರ್ಥಿಕ ಸಂಕಟಗಳು, ಸಾಮಾಜಿಕ ಬಿಕ್ಕಟ್ಟುಗಳಿಗೆ ಜಗ್ಗದೆ–ಕುಗ್ಗದೆ, ಬಂದಂತಹ ಎಲ್ಲ ನೋವು ಸಂಕಟಗಳನ್ನು ಆಪೋಶನ ಮಾಡಿಕೊಂಡರು. ಅದಕ್ಕೆ ಅವರು ತಳೆದ ಧೋರಣೆ, ಇಟ್ಟ ದಿಟ್ಟ ಹೆಜ್ಜೆ, ಕೈಗೊಂಡ ಧೀರಕ್ರಮಗಳಿಂದ ಪೂಜ್ಯರು ತಾವು ಕಂಡ ಕನಸುಗಳನ್ನು ನನಸು ಮಾಡಿದರು. ನೂರಾರು ವರ್ಷಗಳಲ್ಲಿ ಮಾಡಬಹುದಾದುದನ್ನು ಕೇವಲ ನಾಲ್ಕು ದಶಕಗಳಲ್ಲಿ ಮಾಡಿದರು.
ಬಸವಾದಿ ಶಿವಶರಣರ ಜೀವನಾದರ್ಶಗಳು ಎಂದೆಂದಿಗೂ ಪ್ರಸ್ತುತವೆಂದರಿತ ಪೂಜ್ಯರು, ‘ಅಣ್ಣನ ಬಳಗ’, ‘ಅಕ್ಕನ ಬಳಗ’, ‘ಕಲಾಸಂಘ’ ಹಾಗೂ ‘ತರಳಬಾಳು ಪ್ರಕಾಶನ’ದ ಮೂಲಕ ಶರಣರ ವಿಚಾರಗಳನ್ನು ಪ್ರಸಾರ ಮಾಡಿದರು. ವೈಚಾರಿಕ ನೆಲಗಟ್ಟಿನ ಮೇಲೆ ಬದುಕನ್ನು ಕಟ್ಟಿಕೊಳ್ಳಲು ‘ಸರ್ವಶರಣ ಸಮ್ಮೇಳನ’, ‘ತರಳಬಾಳು ಹುಣ್ಣಿಮೆ’ಯಂತಹ ಆಚರಣೆಗಳನ್ನು ಜಾರಿಯಲ್ಲಿ ತಂದರು. ಶರಣರ ವಿಚಾರಗಳನ್ನು ಪ್ರತಿಪಾದಿಸುವ ‘ಮರಣವೇ ಮಹಾನವಮಿ’, ‘ಶರಣಸತಿ ಲಿಂಗಪತಿ’, ‘ವಿಶ್ವಬಂಧು ಮರುಳಸಿದ್ಧ’, ‘ಶಿವಕುಲ’ ನಾಟಕಗಳನ್ನು ರಚಿಸಿ ಅವುಗಳ ಸಾವಿರಾರು ಪ್ರದರ್ಶನಗಳನ್ನು ತರಳಬಾಳು ಕಲಾಸಂಘದ ಕಲಾವಿದರಿಂದ ನಾಡಿನಾದ್ಯಂತ ಏರ್ಪಡಿಸಿದರು.
ಪೂಜ್ಯ ಶ್ರೀಗಳು 59 ವರ್ಷದಷ್ಟು ಸುದೀರ್ಘ ಕಾಲ ಸಾರ್ವಜನಿಕ ಜೀವನದಲ್ಲಿ ಖಾಸಗಿ ಕ್ಷಣಗಳೇ ಇಲ್ಲದಂತೆ ಸಂಪೂರ್ಣವಾಗಿ ಸಮಾಜಕ್ಕೆ ಸಮರ್ಪಿಸಿಕೊಂಡರು. ಸಮಾಜದ ಸುಖದಲ್ಲಿಯೇ ತಮ್ಮ ಸುಖವನ್ನು ಕಂಡ ಅವರ ಜೀವನ ಒಂದು ತೆರೆದಿಟ್ಟ ಪುಸ್ತಕ. ಕುಳಿತ ಪೀಠದಿಂದ ಅವರು ದೊಡ್ಡವರಾಗಲಿಲ್ಲ, ಅವರು ಕುಳಿತ ಕಾರಣದಿಂದಾಗಿ ಪೀಠಕ್ಕೆ ದೊಡ್ಡ ಗೌರವ ಬಂತು. ನೆಲಕಚ್ಚಿದ ಭಕ್ತರನ್ನು ಬದುಕಿನ ಎಲ್ಲ ರಂಗಗಳಲ್ಲಿಯೂ ಎತ್ತಿ ನಿಲ್ಲಿಸಿದರು.
ಸಿರಿಗೆರೆಯ ಸ್ವಾಮೀಜಿ ಸವಾಲುಗಳಿಗೆ ಹೆದರಲಿಲ್ಲ, ಕಷ್ಟಗಳಿಗೆ ಅಂಜಲಿಲ್ಲ, ಬದಲಾಗಿ ‘ಬಾ’ ಎಂದು ಪಂಥಾಹ್ವಾನವನ್ನೇ ನೀಡಿ ಧೈರ್ಯವಾಗಿ ಕರೆದರು. ಅದಕ್ಕೆ ಪೂಜ್ಯರಲ್ಲಿದ್ದ ಎದೆಗಾರಿಕೆ, ಸಮಾಜದ ಬಗ್ಗೆ ಇದ್ದ ನೈಜ ಕಾಳಜಿ, ದೂರದೃಷ್ಟಿ, ವಿಶಾಲ ಮನಸ್ಸುಗಳೇ ಕಾರಣ. ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ವಜ್ರದಂತೆ ಕಠಿಣ, ಹೂವಿನಂತೆ ಮಧುರವೂ ಆಗಿರುತ್ತಿದ್ದರು. ಈ ಧೀಮಂತಿಕೆಗೆ ಮಾರು ಹೋಗದವರೇ ಅಪರೂಪ. ವೈರಿಗಳೂ ಮೆಚ್ಚುವಂತಹ ಧೀರ ಉದಾತ್ತದ ಮೇರು ವ್ಯಕ್ತಿತ್ವ ಹೊಂದಿದ್ದ ಶ್ರೀಗಳನ್ನು ನಾಡಿನ ಭಕ್ತರು ‘ದಿಟ್ಟ ಹೆಜ್ಜೆಯ ಧೀರ ಪ್ರಭು’ ಎಂದು ತಮ್ಮ ಹೃದಯ ಸಿಂಹಾಸನಗಳಲ್ಲಿ ಅಲಂಕರಿಸಿಕೊಂಡಿದ್ದಾರೆ.
ಸದ್ಧರ್ಮ ಪೀಠದ ತರಳಬಾಳು ಗುರು ಪರಂಪರೆಯ ಕೀರ್ತಿಯನ್ನು ಜಗದಗಲ ಮುಗಿಲಗಲ ಹರಡುವಂತೆ ಮಾಡಿದ ದಿವ್ಯಚೇತನ ಅವರು.
ಅವರು ಲಿಂಗೈಕ್ಯರಾಗಿ 29 ವರ್ಷಗಳು ಕಳೆದವು. ಸೆ.24ರಂದು ಪೂಜ್ಯರ 29ನೇ ಶ್ರದ್ಧಾಂಜಲಿ. ಕೊರೊನಾ ಸೋಂಕಿನ ಕಾರಣದಿಂದ ಈ ಬಾರಿ ಬೃಹತ್ ಸಾರ್ವಜನಿಕ ಸಮಾರಂಭವನ್ನು ಏರ್ಪಡಿಸದೆ ಸರಳವಾಗಿ ಆನ್‍ಲೈನ್‍ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತೀರ್ಮಾನಿಸಿದ್ದಾರೆ.
https://www.youtube.com/channel/UCuUAJc9ydIUh7RfObIl_4mg ಲಿಂಕ್ ಮೂಲಕ ಲಿಂಗೈಕ್ಯ ಶ್ರೀ ಶಿವಕುಮಾರ ಗುರುಗಳು ನಾಡಿನ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಸ್ಮರಿಸುತ್ತ ಅವರು ಹಾಕಿದ ಸನ್ಮಾರ್ಗದಲ್ಲಿ ನಡೆಯುವ ಸಂಕಲ್ಪದಲ್ಲಿ ಭಕ್ತಿಯ ಕುಸುಮಾಂಜಲಿ ಅರ್ಪಿಸೋಣ. (ಲೇಖಕರು: ಶಿಕ್ಷಕರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.