ಹೊನ್ನಾಳಿ: ನಿಷ್ಕಳಂಕ ರಾಜಕಾರಣಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ವಿರೋಧ ಪಕ್ಷಗಳು ಒಗ್ಗೂಡಿ ಷಡ್ಯಂತ್ರ ನಡೆಸಿವೆ. ಇದನ್ನು ಖಂಡಿಸಿ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕು ಸಿದ್ದರಾಮಯ್ಯ ಅಭಿಮಾನಿ ಬಳಗ ಹಾಗೂ ಅಹಿಂದ ಒಕ್ಕೂಟದಿಂದ ಆಗಸ್ಟ್ 6ರಂದು ಹೊನ್ನಾಳಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಅವಳಿ ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ನೆಲಹೊನ್ನೆ ಮೋಹನ್ ಹೇಳಿದರು.
ಶನಿವಾರ ಪಟ್ಟಣದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಬಸ್ ಮಾಲೀಕರು, ಆಟೋ ಮಾಲೀಕರು ಬಂದ್‌ಗೆ ಸಹಕಾರ ನೀಡಬೇಕು, ಪಟ್ಟಣದ ಎಲ್ಲಾ ಶಾಲಾ ಕಾಲೇಜುಗಳಿಗೂ ಶಿಕ್ಷಣ ಇಲಾಖೆ ರಜೆ ಘೋಷಿಸಬೇಕು ಎಂದು ಮನವಿ ಮಾಡಿದರು.
ಆಗಸ್ಟ್ 6ರಂದು ಬೆಳಿಗ್ಗೆ 6ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬಂದ್ ನಡೆಯಲಿದ್ದು, ಬಂದ್ ಸಮಯದಲ್ಲಿ ಹಾಲು, ಔಷಧ ಅಂಗಡಿಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗುವುದು. ಹೊಟೇಲ್‌ಗಳು, ಕಿರಾಣಿ ಅಂಗಡಿಗಳು, ಬಟ್ಟೆ ಅಂಗಡಿಗಳು ಸೇರಿದಂತೆ ಎಲ್ಲಾ ವ್ಯಾಪಾರಸ್ಥರು ಈ ಬಂದ್‌ಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪಾದಯಾತ್ರೆಗೆ ಖಂಡನೆ: ಮುಡಾ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಬಿಜೆಪಿ, ಜೆಡಿಎಸ್ ನಾಯಕರು ಮೈಸೂರು ಚಲೋ ಹಮ್ಮಿಕೊಂಡಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ದಲಿತ ಸಮಾಜದ ಮುಖಂಡ ದಿಡಗೂರು ತಮ್ಮಣ್ಣ, ನಿವೃತ್ತ ಪ್ರಾಂಶುಪಾಲ ಎಂ. ನರಸಪ್ಪ ಹೇಳಿದರು.
ಮುಸ್ಲಿಂ ಸಮಾಜದ ಅಧ್ಯಕ್ಷ ಚೀಲೂರು ವಾಜೀದ್ ಮಾತನಾಡಿ, ಸಿದ್ದರಾಮಯ್ಯ ಅವರು ಸರ್ವ ಜನಾಂಗದ ನಾಯಕ. ಅವರು ಯಾವ ಜಾತಿ ಜನಾಂಗಕ್ಕೂ ತೊಂದರೆ ಕೊಟ್ಟವರಲ್ಲ. ಕಂಗೆಟ್ಟಿರುವ ವಿಪಕ್ಷಗಳು ಅವರ ಹೆಸರಿಗೆ ಮಸಿ ಬಳಿಯುವ ಮೂಲಕ ತಮ್ಮ ಬೇಳೆಕಾಳು ಬೇಯಿಸಿಕೊಳ್ಳಲು ಮುಂದಾಗಿವೆ’ ಎಂದರು.
ಬಣಜಾರ್ ಸಮಾಜದ ಅಧ್ಯಕ್ಷ ಅಂಜುನಾಯ್ಕ, ಉಪ್ಪಾರ ಸಮಾಜದ ಅಧ್ಯಕ್ಷ ಬಿ.ಎರ್. ಷಣ್ಮುಖಪ್ಪ, ಮುಖಂಡರಾದ ಸರ್ವರಕೇರಿ ಬಾಬಣ್ಣ, ಕಡಗಣ್ಣಾರ್ ರಾಜು, ಮಾಜಿ ಸೈನಿಕ ಎಂ. ವಾಸಪ್ಪ, ಸರಳಿನಮನೆ ರಾಜು, ಕರವೇ ಅಧ್ಯಕ್ಷ ವಿನಯ್ ವಗ್ಗರ್, ಎಸ್.ಎಸ್. ಶ್ರೀನಿವಾಸ್, ಕುಂಬಳೂರು ವಾಗೀಶ್, ಕ್ಯಾಸಿನಕೆರೆ ಶೇಖರಪ್ಪ, ಕೆ. ಪುಟ್ಟಪ್ಪ, ಮಂಜುನಾಯ್ಕ, ಕನಕದಾಸ, ಎಲ್. ಚಿನ್ನಪ್ಪ, ಟಿಎಪಿಸಿಎಂಸ್ ಉಪಾಧ್ಯಕ್ಷ ಬಸವರಾಜ್ ಮಾತಾನಾಡಿದರು.
ದಲಿತ ಸಂಘಟನೆಗಳ ಅಧ್ಯಕ್ಷರಾದ ಮಾರಿಕೊಪ್ಪ ಮಂಜು, ರಾಜು ಬಡಾವಣೆ, ಕರವೇ ಯುವಸೇನೆ ಅಧ್ಯಕ್ಷ ಮಂಜು ಕಲ್ಕೇರಿ, ಸಣ್ಣಚಿಕ್ಕಪ್ಪ, ದೊಡ್ಡಕೇರಿ ಮಾದಪ್ಪ, ಸತ್ತಿಗೆ ಸುರೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.