ದಾವಣಗೆರೆ: ಜನರ ನಿರೀಕ್ಷಿತ ಸ್ಪಂದನೆ ಸಿಗದಿದ್ದರೆ ಯೋಜನೆಗಳು ವೈಫಲ್ಯದ ಹಾದಿ ಹಿಡಿಯುವುದು ಸಾಮಾನ್ಯ. ನಗರದಲ್ಲಿ ಸ್ಮಾರ್ಟ್ ಸಿಟಿ ಅಡಿ ಕೈಗೊಂಡ ಕೆಲವು ಯೋಜನೆಗಳು ಇದಕ್ಕೆ ಹೊಸ ಸೇರ್ಪಡೆ.
ನಗರವನ್ನು ಸ್ಮಾರ್ಟ್ ಆಗಿಸುವ ಮಹಾತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಗಳಿಗೆ ನಗರದ ಜನರಿಂದ ನಿರೀಕ್ಷಿತ ಪ್ರತಿಕ್ರಿಯೆ ಸಿಗುತ್ತಿಲ್ಲ. ಇದರಿಂದ ಕೆಲ ಯೋಜನೆಗಳು ವಿಫಲವಾಗಿದ್ದು, ಪೈಲಟ್ (ಪ್ರಾಯೋಗಿಕ) ಯೋಜನೆಗಳೇ ಸ್ಥಗಿತಗೊಂಡಿವೆ.
ಜನರ ದೈಹಿಕ ಆರೋಗ್ಯಕ್ಕೆ ಒತ್ತು ಕೊಡುವ ದೃಷ್ಟಿಯಿಂದ ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲಾದ ‘ಬೈಸಿಕಲ್ ಶೇರಿಂಗ್’ ಯೋಜನೆ ಹಾಗೂ ಈ ಯೋಜನೆಯ ಭಾಗವಾಗಿ ಸೈಕಲ್ ಟ್ರ್ಯಾಕ್ ಬದಿ ಹೂವಿನ ಕುಂಡದಲ್ಲಿ ಗಿಡಗಳನ್ನು ಬೆಳೆಸಿ ನಗರದ ಸೌಂದರ್ಯಕ್ಕೆ ಒತ್ತು ಕೊಡುವ ಚಿಂತನೆಯಲ್ಲಿ ರೂಪಿಸಲಾದ ಯೋಜನೆಯೂ ಸ್ಥಗಿತಗೊಂಡಿದೆ.
ಸ್ಮಾರ್ಟ್ ಸಿಟಿಗೆ ತಕ್ಕಂತೆ ವಾಯುಮಾಲಿನ್ಯ ತಗ್ಗಿಸಲು, ಕೋವಿಡ್ ಸಂದರ್ಭದಲ್ಲಿನ ಅನಾಹುತಗಳಿಂದ ಜನರ ಆರೋಗ್ಯ ಮಟ್ಟ ಸುಧಾರಿಸಲು ‘ಬೈಸಿಕಲ್ ಶೇರಿಂಗ್’ ಯೋಜನೆ ರೂಪಿಸಲಾಗಿತ್ತು. ಅಂದಾಜು ₹ 10 ಕೋಟಿ ವೆಚ್ಚದಲ್ಲಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗಿತ್ತು.
ಸೈಕಲ್ ಇಡಲು ನಗರದ ಪ್ರಮುಖ ಸ್ಥಳಗಳಲ್ಲಿ ಬಸ್ ನಿಲ್ದಾಣದ ಮಾದರಿಯ 20 ಡಾಕ್ ಸ್ಟೇಷನ್‌ಗಳನ್ನು (ಬೈಸಿಕಲ್ ನಿಲುಗಡೆಯ ಸ್ಥಳ) ನಿರ್ಮಿಸಲಾಗಿದೆ. 100 ಪೆಡಲ್ ಮಾದರಿ, 100 ಇ–ಬೈಸಿಕಲ್ ಮಾದರಿಯ ಸೈಕಲ್‌ಗಳು ಇವೆ.
ನಗರದ ಮೋತಿ ವೀರಪ್ಪ ಕಾಲೇಜು, ಜಯನಗರ, ಐಟಿಐ ಕಾಲೇಜು, ಲಕ್ಷ್ಮಿ ಫ್ಲೋರ್ ಮಿಲ್, ವಿದ್ಯಾರ್ಥಿ ಭವನ ಸೇರಿ ನಗರದ ಪ್ರಮುಖ ಸ್ಥಳಗಳಲ್ಲಿ ಸೈಕಲ್ ಇರಿಸಲಾಗಿದೆ. ಆದರೆ ಈ ಸೈಕಲ್‌ಗಳತ್ತ ನಗರದ ಜನರು ಸುಳಿಯುತ್ತಿಲ್ಲ. ಗುಜರಿ ಅಂಗಡಿಯಂತೆ ಸೈಕಲ್‌ಗಳ ರಾಶಿ ಕಾಣುತ್ತಿವೆ.
ಜನರು ಬಳಸದ ಕಾರಣ ಸೈಕಲ್‌ಗಳು ತುಕ್ಕು ಹಿಡಿಯುತ್ತಿವೆ. ಡಾಕ್ ಸ್ಟೇಷನ್‌ಗಳು ನಿರ್ವಹಣೆ ಇಲ್ಲದೇ ಸೊರಗುತ್ತಿದೆ. ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದ್ದ ಬೈಸಿಕಲ್ ಶೇರಿಂಗ್ ಕ್ರಮೇಣ ಹೊಳಪು ಕಳೆದುಕೊಂಡಿದೆ.
ಬೈಸಿಕಲ್ ಪಡೆಯುವುದು ಹೇಗೆ?:
ಸೈಕಲ್ ಪಡೆಯಲು ಮೊದಲು ಪ್ಲೇ ಸ್ಟೋರ್‌ನಿಂದ ಕೂ ರೈಡ್ಸ್ (Coo Rides) ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ಬಳಕೆದಾರರ ಹೆಸರು, ಕೆವೈಸಿ ಪೂರ್ಣಗೊಳಿಸಿ ನೋಂದಣಿ ಮಾಡಿಕೊಳ್ಳಬೇಕು. ಬಳಿಕ ಹತ್ತಿರದ ಡಾಕ್ ಸ್ಟೇಷನ್‌ಗೆ ಹೋಗಿ ಸೈಕಲ್ ಅನಲಾಕ್ ಮಾಡಿಕೊಳ್ಳಬೇಕು. ಗಂಟೆಗೆ ಅಥವಾ ಬಳಸಿದ ಅವಧಿಗೆ ಶುಲ್ಕ ಇರುತ್ತದೆ. ತಿಂಗಳು, ಮೂರು ತಿಂಗಳು ಎಂಬಂತೆ ಬಳಕೆದಾರರ ಆಯ್ಕೆಗೆ ಬೇಕಾದಂತೆ ಚಂದಾದಾರರಾಗುವ ಸೌಲಭ್ಯವೂ ಇದೆ. ಇ–ಸೈಕಲ್‌ಗೆ ಪ್ರತ್ಯೇಕ ಶುಲ್ಕ ಇದೆ. ಆದರೆ ನಗರದ ನಿವಾಸಿಗಳು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ತಂತ್ರಜ್ಞಾನಕ್ಕೆ ತೆರದುಕೊಂಡಿಲ್ಲ. ಹೀಗಾಗಿ ಇದಕ್ಕೆ ಪ್ರತಿಕ್ರಿಯೆ ದೊರೆತಿಲ್ಲ ಎಂಬುದು ವೈಫಲ್ಯಕ್ಕೆ ಕಾರಣ ಎಂದೇ ವಿಶ್ಲೇಷಿಸಲಾಗಿದೆ.
‘ಬಳಸಿದ ಬಳಿಕ ಹತ್ತಿರದ ಯಾವುದಾದರೂ ಡಾಕ್ ಸ್ಟೇಷನ್‌ನಲ್ಲಿ ಸೈಕಲ್ ಬಿಟ್ಟುಹೋಗುವ ಸೌಲಭ್ಯ ಇದೆ. ಆದರೆ ಇದನ್ನು ಮಾಡಲು ಎಲ್ಲ ವರ್ಗದವರಿಗೂ ಸಾಧ್ಯವಾಗುವುದಿಲ್ಲ’ ಎಂದು ದೂರುತ್ತಾರೆ ನೌಕರ ಪ್ರವೀಣ್.
ಅನಾಥವಾದ ಹೂವಿನ ಕುಂಡಗಳು:
ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ರಸ್ತೆಯ ಎರಡೂ ಬದಿ ಸೈಕಲ್ ಟ್ರ್ಯಾಕ್ ನಿರ್ಮಿಸಿ, ಹೂವಿನ ಕುಂಡ ಇಟ್ಟು ನಗರದ ಸೌಂದರ್ಯೀಕರಣಕ್ಕೆ ಒತ್ತು ನೀಡುವ ಚಿಂತನೆಯಡಿ ರೂಪಿಸಲಾದ ಪ್ರಾಯೋಗಿಕ ಯೋಜನೆಯೂ ಮುಂದೆ ಸಾಗಿಲ್ಲ.
ಜಿಲ್ಲಾಧಿಕಾರಿ ಕಚೇರಿಯಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದವರೆಗೆ ರಸ್ತೆಯ ಎರಡೂ ಬದಿ ಸೇರಿ 12.8 ಕಿ.ಮೀ. ವ್ಯಾಪ್ತಿಯಲ್ಲಿ ಅಂದರೆ ಒಂದೊಂದು ಬದಿ 6.4 ಕಿ.ಮೀ.ನಂತೆ ಸೈಕಲ್ ಟ್ರ್ಯಾಕ್ ನಿರ್ಮಿಸಿ, ಹೂವಿನ ಕುಂಡ ಇಡಲು ಕ್ರಿಯಾಯೋಜನೆ ತಯಾರಿಸಲಾಗಿತ್ತು.
ಆದರೆ, ಸಂಗೊಳ್ಳಿ ರಾಯಣ್ಣ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ರಸ್ತೆಯ ಬದಿ ಇಟ್ಟಿದ್ದ ಕಾಂಕ್ರೀಟ್ ಹೂವಿನ ಕುಂಡಗಳು ಈಗ ಅನಾಥವಾಗಿವೆ. ಎಲ್ಲೆಂದರಲ್ಲಿ ಬಿದ್ದಿರುವ ಹೂವಿನ ಕುಂಡಗಳಲ್ಲಿ ಹಲವು ಹಾಳಾಗಿವೆ. ಇನ್ನು ಕೆಲವನ್ನು ಆ ಭಾಗದ ಅಂಗಡಿ ಮಾಲೀಕರು, ಚಿಕ್ಕ ಕ್ಯಾಂಟೀನ್ ನಡೆಸುವವರು ಎಲ್ಲೆಂದರಲ್ಲಿ ಎಸೆದಿದ್ದಾರೆ. ಕೆಲವು ಆಸನಗಳಾಗಿ ಮಾರ್ಪಾಡಾಗಿವೆ.
ಹೂವಿನ ಕುಂಡಗಳನ್ನು ಇಡುವುದು, ಸೈಕಲ್ ಟ್ರ್ಯಾಕ್‌ಗೆ ಬಣ್ಣ ಬಳಿದು ಸೂಚನಾ ಫಲಕ ಹಾಗೂ ಸಂಚಾರ ಚಿಹ್ನೆಗಳನ್ನು ಬರೆಯಿಸುವುದು ಸೇರಿದಂತೆ ಅಗತ್ಯ ಕಾಮಗಾರಿಗಾಗಿ ₹ 1.2 ಕೋಟಿ ವೆಚ್ಚದ ಕ್ರಿಯಾಯೋಜನೆ ರೂಪಿಸಲಾಗಿತ್ತು. ಆದರೆ ಸೈಕಲ್ ಶೇರಿಂಗ್‌ಗೆ ಸ್ಪಂದನೆ ಇಲ್ಲದ ಕಾರಣ, ಹೂವಿನ ಕುಂಡಗಳೂ ಉಪಯೋಗಕ್ಕೆ ಬಾರದಾಗಿವೆ.
7,700 ಕುಂಡಗಳನ್ನು ಇಡುವ ಯೋಜನೆ ಇತ್ತು. ಅದರಲ್ಲಿ 1,800 ಕುಂಡಗಳನ್ನು ಮಾತ್ರ ರಸ್ತೆ ಬದಿ ಇಡಲಾಗಿದೆ. ₹ 1.2 ಕೋಟಿ ವೆಚ್ಚದ ಕಾಮಗಾರಿಯಲ್ಲಿ ಇದಕ್ಕಾಗಿ ₹ 12 ಲಕ್ಷ ಖರ್ಚು ಮಾಡಲಾಗಿತ್ತು. ಅದು ಈಗ ವ್ಯರ್ಥವಾದಂತಾಗಿದೆ.
‘ದೂರದೃಷ್ಟಿ ಇಲ್ಲದೇ ಯೋಜನೆ ರೂಪಿಸಿದರೆ ಏನಾಗುತ್ತದೆ ಎಂಬುದಕ್ಕೆ ಲಕ್ಷಾಂತರ ವೆಚ್ಚದಲ್ಲಿ ತಂದ ಹೂವಿನ ಕುಂಡಗಳು ಹಾಳು ಬಿದ್ದಿರುವುದೇ ಸಾಕ್ಷಿ’ ಎಂದು ಬೇಸರಿಸುತ್ತಾರೆ ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷರೂ ಆಗಿರುವ ನಿವೃತ್ತ ಪೊಲೀಸ್ ಅಧಿಕಾರಿ ಎನ್. ರುದ್ರಮುನಿ.
ಮರುಬಳಕೆಗೆ ಚಿಂತನೆ
ಕಾಂಕ್ರೀಟ್ ಹೂವಿನ ಕುಂಡಗಳನ್ನು ಪಾಲಿಕೆ ವ್ಯಾಪ್ತಿಯ ಉದ್ಯಾನಗಳಲ್ಲಿ ಬಳಸಲು ಯೋಜಿಸಲಾಗಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆಯೊಂದಿಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ‘ಹಂತ ಹಂತವಾಗಿ ಯೋಜನೆ ಮುಂದುವರಿಸುವ ಚಿಂತನೆ ಇತ್ತು. ಆದರೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ನಗರದ ಜನರು ಇನ್ನೂ ಆಧುನಿಕತೆಗೆ ತೆರೆದುಕೊಂಡಿಲ್ಲ. ಹಾಗಾಗಿ ಮಹಾನಗರಗಳಲ್ಲಿ ದೊರೆತಂತೆ ಇಲ್ಲಿ ಬೈಸಿಕಲ್ ಶೇರಿಂಗ್‌ಗೆ ಸ್ಪಂದನೆ ವ್ಯಕ್ತವಾಗಿಲ್ಲ. ಈ ಕಾರಣ ಯೋಜನೆ ಸ್ಥಗಿತಗೊಳಿಸಲಾಗುತ್ತಿದೆ’ ಎಂದು ಸ್ಮಾರ್ಟ್ ಸಿಟಿ ಎಂಜಿನಿಯರೊಬ್ಬರು ವಿವರಿಸಿದರು.
‘ಜನರಿಂದ ಸ್ಪಂದನೆ ಸಿಕ್ಕಿದ್ದರೆ ಮುಂದುವರಿಸುವ ಯೋಚನೆ ಇತ್ತು. ಆದರೆ ಸಿಕ್ಕಿಲ್ಲ. ಗುತ್ತಿಗೆ ನೀಡಿದ ಏಜೆನ್ಸಿ ಕೂಡ ಸಮರ್ಪಕ ನಿರ್ವಹಣೆ ಮಾಡಿಲ್ಲ. ಏಜೆನ್ಸಿಯ ನಿರ್ವಹಣೆಯ ಯಶಸ್ಸು ಆಧರಿಸಿ ಯೋಜನೆ ಮುಂದುವರಿಸುವಂತೆ ಮಾತುಕತೆಯಾಗಿತ್ತು. ಈ ಕಾರಣ ಇದದಕ್ಕೆಂದೇ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಅವರು ನಿರ್ವಹಣೆ ಮಾಡದ ಕಾರಣ ಮಂಡಳಿ ಸಭೆಯಲ್ಲಿ ಯೋಜನೆ ಸ್ಥಗಿತಗೊಳಿಸುವ ಬಗ್ಗೆ ಚರ್ಚೆಯಾಗಿದೆ’ ಎಂದು ಅವರು ಮಾಹಿತಿ ನೀಡಿದರು.
ಬಸ್ ನಿಲ್ದಾಣವಾಗಲಿದೆ ಡಾಕ್ ಸ್ಟೇಷನ್?
‘ಸೈಕಲ್ ಸೈಕಲ್‌ಗಳನ್ನು ಇಡುವ ಡಾಕ್ ಸ್ಟೇಷನ್ ಸೊರಗುತ್ತಿವೆ. ಸೈಕಲ್ ತೆಗೆದುಕೊಂಡವರೂ ಸರಿಯಾಗಿ ಬಳಸಿಲ್ಲ. ಅದನ್ನು ಹಾಳು ಮಾಡುತ್ತಿದ್ದಾರೆ. ಮೂವರು ಕುಳಿತು ಓಡಿಸುತ್ತಿದ್ದಾರೆ. ಕೆಲವರು ಅದರ ಬಲ್ಬ್‌ಗಳನ್ನು ಕೀಳುತ್ತಿದ್ದಾರೆ. ಜನರೂ ಬದಲಾಗಿಲ್ಲ. ಹಿಂದೆ ಬಾಡಿಗೆ ಪಡೆದು ಸೈಕಲ್ ಓಡಿಸುತ್ತಿದ್ದ ಖುಷಿ ಈಗ ಇಲ್ಲ. ಎಲ್ಲರೂ ಬೈಕ್ ಕಾರಿನ ಹಿಂದೆ ಬಿದ್ದಿದ್ದಾರೆ’ ಎಂದು ಸ್ಮಾರ್ಟ್ ಸಿಟಿ ಯೋಜನೆಯ ಎಂಜಿನಿಯರ್ ಒಬ್ಬರು ಬೇಸರಿಸಿದರು. ‘ಸೈಕಲ್‌ಗಳನ್ನು ಇಡುವ ಡಾಕ್ ಸ್ಟೇಷನ್‌ಗಳನ್ನೂ ಬಳಸುವ ಕುರಿತು ಮಾತುಕತೆ ನಡೆದಿದೆ. ಅದನ್ನು ಬಸ್ ನಿಲ್ದಾಣವಾಗಿ ಬಳಸುವ ಬಗ್ಗೆ ಚಿಂತನೆ ಇದೆ. ಆದರೆ ಅದು ಅಂತಿಮವಾಗಿಲ್ಲ. ಇನ್ನೂ ಸಮಯ ಇದೆ. ಗುತ್ತಿಗೆ ಪಡೆದ ಏಜೆನ್ಸಿಯ ಯಶಸ್ಸಿನ ಬಗ್ಗೆ ವರದಿ ನೀಡಿದರೆ ಅಂತಿಮ ನಿರ್ಧಾರವಾಗಲಿದೆ. ಅವರಿಗೆ ಸದ್ಯ ಯಾವುದೇ ಅನುದಾನವನ್ನೂ ನೀಡಿಲ್ಲ’ ಎಂದು ತಿಳಿಸಿದರು.
ನಗರದ ಅಭಿವೃದ್ಧಿ ದೃಷ್ಟಿಯಿಂದ ರೂಪಿಸಲಾದ ಹೂವಿನಕುಂಡ ಇರಿಸುವ ಯೋಜನೆ ಹಳ್ಳ ಹಿಡಿದಿದ್ದು ವಿಪರ್ಯಾಸ. ಸಮರ್ಪಕ ನಿರ್ವಹಣೆಯ ಕೊರತೆ ಇದಕ್ಕೆ ಕಾರಣ.ಎನ್. ರುದ್ರಮುನಿ, ಅಧ್ಯಕ್ಷ, ಜಿಲ್ಲಾ ಛಲವಾದಿ ಮಹಾಸಭಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.