ADVERTISEMENT

ದಾವಣಗೆರೆ: ಅಭಿವೃದ್ಧಿ ಹಳಿಗೆ ಹೊರಳಿದ ದೇವನಗರಿ

8 ವರ್ಷ ಕಳೆದರೂ ‘ಸ್ಮಾರ್ಟ್‌ ಸಿಟಿ’ ಅಪೂರ್ಣ, ಸಾವಿರ ಕೋಟಿಗೂ ಅಧಿಕ ಅನುದಾನ

ಜಿ.ಬಿ.ನಾಗರಾಜ್
Published 23 ಜುಲೈ 2024, 5:21 IST
Last Updated 23 ಜುಲೈ 2024, 5:21 IST
Pavitra Bhat
   Pavitra Bhat

ದಾವಣಗೆರೆ: ಅಭಿವೃದ್ಧಿ ಪರ್ವದ ಹೊಸ ಕನಸು ಬಿತ್ತಿದ್ದ ‘ಸ್ಮಾರ್ಟ್‌ ಸಿಟಿ’ ಯೋಜನೆ ಎಂಟು ವರ್ಷ ಪೂರೈಸಿದ್ದು, ದೇವನಗರಿ ಬದಲಾವಣೆಯತ್ತ ಹೊರಳುತ್ತಿದೆ. ಮೂಲಸೌಲಭ್ಯ, ಸ್ವಚ್ಛತೆ, ಸಾರಿಗೆ, ಮಳೆ ನೀರು ನಿರ್ವಹಣೆ, ಕುಡಿಯುವ ನೀರು, ಸುಗಮ ಸಂಚಾರದಲ್ಲಿ ನಿರೀಕ್ಷಿತ ಗುರಿ ಸಾಧನೆ ಸಾಧ್ಯವಾಗದೇ ಇದ್ದರೂ ಅಭಿವೃದ್ಧಿ ಹಳಿಗೆ ಬರುತ್ತಿದೆ.

785 ಎಕರೆಯಲ್ಲಿ ಹರಡಿಕೊಂಡಿರುವ ಮಹಾನಗರ ಯೋಜನಾಬದ್ಧವಾಗಿ ರೂಪುಗೊಂಡಿಲ್ಲ. ತಂತ್ರಜ್ಞಾನದ ಸಹಾಯದಿಂದ ನಗರವನ್ನು ‘ಸ್ಮಾರ್ಟ್‌ ಸಿಟಿ’ಯಾಗಿ ರೂಪಿಸುವುದು ಯೋಜನೆಯ ಉದ್ದೇಶ. ಮೊದಲ ಹಂತದಲ್ಲಿ ಆಯ್ಕೆಯಾದ ಈ ನಗರ, ಯೋಜನೆಯ ಅಂತಿಮ ಘಟ್ಟ ತಲುಪಿದೆ. ಯೋಜನೆಯಡಿ ಕೈಗೆತ್ತಿಕೊಂಡ 117 ಕಾಮಗಾರಿಗಳಲ್ಲಿ 111 ಪೂರ್ಣಗೊಂಡಿವೆ. 5 ಕಾಮಗಾರಿ ಪ್ರಗತಿಯಲ್ಲಿದ್ದು, ಒಂದು ಟೆಂಡರ್ ಹಂತದಲ್ಲಿದೆ. 2025ರ ಮಾರ್ಚ್‌ ವೇಳೆಗೆ ಯೋಜನೆ ಮುಕ್ತಾಯವಾಗಲಿದೆ.

ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಗೆ ರಾಜ್ಯ ಸರ್ಕಾರವೂ ಕೈಜೋಡಿಸಿದೆ. ಆರಂಭದಲ್ಲಿ ತೆವಳುತ್ತ ಸಾಗಿದ ಯೋಜನೆ ಕೋವಿಡ್‌ ಬಳಿಕ ವೇಗ ಪಡೆಯಿತು. ಭೌತಿಕ ಮತ್ತು ಆರ್ಥಿಕ ಪ್ರಗತಿ, ರಾಜಕಾಲುವೆ, ಮಳೆ ನೀರು ಚರಂಡಿ ನಿರ್ಮಾಣದಲ್ಲಿ ದೇಶದಲ್ಲಿಯೇ ಮೆಚ್ಚುಗೆಗೆ ಪಾತ್ರವಾಗಿದೆ. ತಂತ್ರಜ್ಞಾನ ಆಧಾರಿತ ಸಂಚಾರ ವ್ಯವಸ್ಥೆ ಸುಧಾರಿಸುವ ವಿಚಾರದಲ್ಲಿಯೂ ಸ್ಮಾರ್ಟ್‌ ಸಿಟಿ ಹೊಸ ಮೈಲುಗಲ್ಲು ಸೃಷ್ಟಿಸಿದೆ.

ADVERTISEMENT

ತುಂಗಭದ್ರಾ ನದಿಗೆ ಬ್ಯಾರೇಜ್‌ ನಿರ್ಮಾಣ, ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಈಜುಕೊಳ, ಥೀಮ್‌ ಪಾರ್ಕ್‌, ಪಾದಚಾರಿ ಮಾರ್ಗದ ಅಭಿವೃದ್ಧಿ, ಸೈಕಲ್‌, ಇ–ಆಟೊ ಸೇರಿ ಹಲವು ಯೋಜನೆಗಳನ್ನು ‘ಸ್ಮಾರ್ಟ್‌ ಸಿಟಿ’ಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ರೂಪುಗೊಂಡ ಯೋಜನೆಗಳು ನಿರೀಕ್ಷಿತ ಯಶಸ್ಸು ಕಂಡಿಲ್ಲ. ಇಂತಹ ಕೆಲವು ಯೋಜನೆಗಳನ್ನು ಕೈಬಿಡಲು ಮುಂದಾಗಿದೆ.

ಬೇಸಿಗೆಯಲ್ಲಿ ನಗರಕ್ಕೆ ಎದುರಾಗುತ್ತಿದ್ದ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ಹರಿಹರ ತಾಲ್ಲೂಕಿನ ರಾಜನಹಳ್ಳಿ–ಮಾಕನೂರು ನಡುವೆ ತುಂಗಭದ್ರಾ ನದಿಗೆ ಬ್ಯಾರೇಜ್‌ ನಿರ್ಮಿಸಲಾಗುತ್ತಿದೆ. 0.20 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಈ ಯೋಜನೆಯನ್ನು ₹ 76.11 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಸಿವಿಲ್ ಕಾಮಗಾರಿ ಮುಗಿದಿದ್ದು, ಆಟೊ ಫಾಲ್‌ ಗೇಟ್ ಹಾಗೂ ಹೈಡ್ರೊ ಮೆಕ್ಯಾನಿಕಲ್ ಕೆಲಸ ಮಾತ್ರ ಬಾಕಿ ಇದೆ. ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸೀಮಿತವಾಗಿದ್ದ ‘ಸ್ಮಾರ್ಟ್‌ ಸಿಟಿ’ ಯೋಜನೆಯನ್ನು ವಿಶೇಷ ಅನುಮತಿ ಪಡೆದು 36 ಕಿ.ಮೀ ದೂರಕ್ಕೆ ಕೊಂಡೊಯ್ದ ಕಾಮಗಾರಿ ಇದಾಗಿದೆ. ನದಿಯಲ್ಲಿ ನೀರು ಹರಿಯುತ್ತಿರುವ ಪರಿಣಾಮ ಕಾಮಗಾರಿಗೆ ಅಡ್ಡಿಯಾಗಿದೆ.

‘ರಾಮ್‌ ಅಂಡ್‌ ಕೋ’ ವೃತ್ತವನ್ನು ವಾಹನಗಳಿಂದ ಮುಕ್ತಗೊಳಿಸುವ ಯೋಜನೆಯೊಂದನ್ನು ‘ಸ್ಮಾರ್ಟ್‌ ಸಿಟಿ’ ರೂಪಿಸಿದೆ. ಆಹಾರ, ತಿಂಡಿ– ತಿನಿಸುಗಳು ಸಿಗುವ ನಗರದ ಪ್ರಮುಖ ಸ್ಥಳವಾಗಿರುವ ಈ ವೃತ್ತವನ್ನು ₹ 5 ಕೋಟಿ ವೆಚ್ಚದಲ್ಲಿ ಮರುವಿನ್ಯಾಸಗೊಳಿಸುವುದು ಇದರ ಉದ್ದೇಶ. ಆಹಾರ ತಿನಿಸು ಸೇವಿಸಲು ಬರುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಯೋಜನೆ ಸಿದ್ಧಪಡಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಮಗಾರಿ ಕಾರ್ಯಾರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.