ADVERTISEMENT

ಸಾಮಾಜಿಕ ಮಾಧ್ಯಮ: ಇರಲಿ ಎಚ್ಚರ-ಮಹಾವೀರ ಮ.ಕರೆಣ್ಣವರ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 13:59 IST
Last Updated 23 ಸೆಪ್ಟೆಂಬರ್ 2024, 13:59 IST
ದಾವಣಗೆರೆಯ ಅಮೃತ ವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಅಮೃತ ವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಕ್ಷಣಿಕ ಆಕರ್ಷಣೆಗಳು ಬದುಕು ಹಾಳು ಮಾಡುತ್ತವೆ. ಸಾಮಾಜಿಕ ಮಾಧ್ಯಮಗಳ ಬಗ್ಗೆ ಮಕ್ಕಳು ಎಚ್ಚರಿಕೆಯಿಂದ ಇರುವ ಅಗತ್ಯವಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ ಕಿವಿಮಾತು ಹೇಳಿದರು.

ಇಲ್ಲಿನ ನಿಜಲಿಂಗಪ್ಪ ಬಡಾವಣೆಯ ಅಮೃತ ವಿದ್ಯಾಲಯದಲ್ಲಿ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್‌ ಇಲಾಖೆ ವತಿಯಿಂದ ‘ಪೋಕ್ಸೊ ಹಾಗೂ ಬಾಲ್ಯ ವಿವಾಹ’ ತಡೆಯುವ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾಮಾಜಿಕ ಮಾಧ್ಯಮಗಳು ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತಿವೆ. ಆಕರ್ಷಣೆಗೆ ಒಳಗಾದರೆ ಜೀವನ ಬಲಿಯಾಗಲಿದೆ. ಮೊಬೈಲ್‌ಗಳನ್ನು ಬಿಟ್ಟು ಶಿಕ್ಷಣದ ಕಡೆಗೆ ಮಾತ್ರ ಗಮನ ಹರಿಸಬೇಕು. ಧಾರ್ಮಿಕ, ಸಾಮಾಜಿಕ ಮೌಲ್ಯಗಳನ್ನು ಕಲಿಯಬೇಕು’ ಎಂದು ಹೇಳಿದರು.

ADVERTISEMENT

‘ಎಷ್ಟೇ ಶಿಕ್ಷಣ ನೀಡಿದರೂ ದುಷ್ಟಶಕ್ತಿಗಳು ಹಾಗೂ ಜನರ ಅಜ್ಞಾನದಿಂದಾಗಿ ಸಮಾಜದಲ್ಲಿ ಅಪರಾಧಗಳು ನಡೆಯುತ್ತಲೇ ಇವೆ. ಶಾಲಾ ವಾಹನ ಚಾಲಕ, ಶಿಕ್ಷಕರಿಂದಲೂ ಮಕ್ಕಳ ಮೇಲೆ ದೌರ್ಜನ್ಯ ನಡೆದಿರುವ ನಿದರ್ಶನಗಳಿವೆ. ಪೋಕ್ಸೊ ತುಂಬಾ ಕಠಿಣ ಕಾಯ್ದೆ. ಒಮ್ಮೆ ಈ ಕಾಯ್ದೆಯಡಿ ಪ್ರಕರಣ ದಾಖಲಾದರೆ ಜಾಮೀನು ಸಿಗುವುದಿಲ್ಲ. ಈ ದೌರ್ಜನ್ಯಕ್ಕೆ ಸಹಕಾರ ನೀಡಿದವರಿಗೂ ಶಿಕ್ಷೆ ಆಗುತ್ತದೆ’ ಎಂದರು.

‘ಕೃತ್ಯ ಎಸಗಿದವರು ಬಾಲಕರಾಗಿದ್ದರೆ ಬಾಲ ನ್ಯಾಯ ಮಂಡಳಿಯಲ್ಲಿ ವಿಚಾರಣೆ ನಡೆಯುತ್ತದೆ. ಶಿಕ್ಷಣ, ಭವಿಷ್ಯ ಹಾಳಾಗುತ್ತದೆ. ಉದ್ಯೋಗಕ್ಕೂ ಕುತ್ತು ಎದುರಾಗುವ ಸಾಧ್ಯತೆ ಹೆಚ್ಚು. ಸಮಾಜಘಾತುಕ ಶಕ್ತಿಗಳ ಬಗ್ಗೆ ಎಚ್ಚರದಿಂದ ಇರಬೇಕು. ಅಸಭ್ಯ ಭಾಷೆ, ವರ್ತನೆ ಕಂಡುಬಂದರೆ ಪೋಷಕರು, ಶಿಕ್ಷಕರಿಗೆ ಮಾಹಿತಿ ನೀಡಬೇಕು’ ಎಂದು ಸಲಹೆ ನೀಡಿದರು.

ಅಮೃತ ವಿದ್ಯಾಲಯ ಪ್ರಾಂಶುಪಾಲೆ ಎನ್‌.ಪ್ರತಿಭಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎಸ್‌.ಕವಿತಾ, ಇನ್‌ಸ್ಪೆಕ್ಟರ್‌ ಎಸ್‌.ಡಿ.ನೂರ್‌ ಅಹಮ್ಮದ್‌, ಬಿಇಒ ಪುಷ್ಪಲತಾ ಇದ್ದರು.

ಚಾಲನಾ ಪರವಾನಗಿ ಹೊಂದಿದವರು ಮಾತ್ರ ವಾಹನ ಚಲಾಯಿಸುವ ಅರ್ಹತೆ ಹೊಂದಿರುತ್ತಾರೆ. ಶಾಲಾ ವಿದ್ಯಾರ್ಥಿಗಳು ವಾಹನ ಚಾಲನೆ ಮಾಡಬಾರದು. ತಪ್ಪು ಎಸಗಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್‌ ನ್ಯಾಯಾಧೀಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.